ADVERTISEMENT

ಕಾಮಗಾರಿ ಅನುಷ್ಠಾನಕ್ಕೆ ಮುನ್ನವೇ ಗುಣಮಟ್ಟ ಪರೀಕ್ಷೆ!

ಕಾರ್ಯಾದೇಶ ನೀಡುವುದಕ್ಕೆ ಮುನ್ನವೇ ವರದಿ ಸಿದ್ಧಪಡಿಸಿದ ಅಧಿಕಾರಿಗಳು

ಮಂಜುನಾಥ್ ಹೆಬ್ಬಾರ್‌
Published 17 ಸೆಪ್ಟೆಂಬರ್ 2019, 9:11 IST
Last Updated 17 ಸೆಪ್ಟೆಂಬರ್ 2019, 9:11 IST
   

ಬೆಂಗಳೂರು: ಕಾಮಗಾರಿಯನ್ನು ಅನುಷ್ಠಾನಗೊಳಿಸುವುದಕ್ಕೆ ಮುನ್ನವೇ ಅದರ ಗುಣಮಟ್ಟದ ಪರೀಕ್ಷೆ ಸಾಧ್ಯವೇ? ಬಿಬಿಎಂಪಿ ಅಧಿಕಾರಿಗಳು ಇಂತಹ ಕರಾಮತ್ತು ತೋರಿಸುವುದರಲ್ಲೂ ಸಿದ್ಧಹಸ್ತರು. ಕಾಮಗಾರಿಗೆ ಕಾರ್ಯಾದೇಶ ನೀಡುವುದಕ್ಕೆ ಮುನ್ನವೇ ಅವರ ಬಳಿ ಗುಣಮಟ್ಟ ಪರೀಕ್ಷೆಯ ವರದಿಯೂ ಸಿದ್ಧವಾಗಿರುತ್ತದೆ!

ಬಿಬಿಎಂಪಿಯಲ್ಲಿ ಈ ಹಿಂದಿನ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಲಯಗಳಲ್ಲಿ 2008ರಿಂದ 2012ರ ನಡುವೆ ಅನುಷ್ಠಾನಗೊಳಿಸಿದ್ದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಸಮಿತಿ ಇಂತಹ ಅಕ್ರಮಗಳನ್ನು ಬಯಲಿಗೆಳೆದಿದೆ.

ಮಲ್ಲೇಶ್ವರ ವಿಭಾಗದ ಕಾಮಗಾರಿಯೊಂದನ್ನು (ಕಡತ ಸಂಖ್ಯೆ ಎಂ– 719) ಅನುಷ್ಠಾನಗೊಳಿಸುವ ಮುನ್ನವೇ ಅದರ ಗುಣಮಟ್ಟ ಪರೀಕ್ಷೆಯ ಫಲಿತಾಂಶಗಳು ಸಿದ್ಧವಾಗಿದ್ದವು. ಇದೇ ವಿಭಾಗದ ಇನ್ನೊಂದು ಕಾಮಗಾರಿಗೆ (ಕಡತ ಸಂಖ್ಯೆ ಎಂ.558) ಕಾರ್ಯಾದೇಶ ನೀಡಿದ್ದು 2009ರ ಆ. 22ರಂದು. ಅಚ್ಚರಿ ಎಂದರೆ ಆ ಕಾಮಗಾರಿಯ ಗುಣ ನಿಯಂತ್ರಣ ಪರೀಕ್ಷೆಯ ವರದಿ 2009ರ ಆ. 6ರಂದೇ ತಯಾರಾಗಿತ್ತು.

ADVERTISEMENT

ಅದೇ ರೀತಿ, ಇದೇ ವಿಭಾಗದ ಇನ್ನೊಂದು ಕಾಮಗಾರಿಯ (ಕಡತ ಸಂಖ್ಯೆ ಎಂ 1106) ಕಾರ್ಯಾದೇಶ ನೀಡಿದ್ದು 2009ರ ಸೆ.24ರಂದು. ಆದರೆ, ಅದರ ಗುಣಮಟ್ಟ ಪರೀಕ್ಷೆಯ ವರದಿಯನ್ನು ಒಂದು ತಿಂಗಳು ಮುಂಚೆಯೇ (2009ರ ಆ.17 ) ರೂಪಿಸಲಾಗಿತ್ತು.

ಆರ್‌.ಆರ್‌.ನಗರ ವಿಭಾಗದಲ್ಲೂ ಕಡತ ಸಂಖ್ಯೆ ಆರ್‌ 679ಕ್ಕೆ ಸಂಬಂಧಪಟ್ಟ ಕಾಮಗಾರಿಯಲ್ಲೂ ಇದೇ ರೀತಿಯ ವಂಚನೆ ನಡೆದಿರುವುದನ್ನು ಸಮಿತಿ ಪತ್ತೆ ಹಚ್ಚಿದೆ.

ಆರ್‌.ಆರ್‌.ನಗರ ವಿಭಾಗದಲ್ಲಿ 16, ಮಲ್ಲೇಶ್ವರ ವಿಭಾಗದಲ್ಲಿ ಒಂಬತ್ತು ಹಾಗೂ ಗಾಂಧಿನಗರ ವಿಭಾಗದಲ್ಲಿ 46 ಕಾಮಗಾರಿಗಳು ಸೇರಿ ಒಟ್ಟು 71 ಕಾಮಗಾರಿಗಳಿಗೆ ಗುಣಮಟ್ಟ ಪರೀಕ್ಷೆ ನಡೆಸದೆಯೇ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲಾಗಿದೆ.

ಗುತ್ತಿಗೆದಾರರು ಯಾರೋ ಬಿಲ್‌ ಯಾರಿಗೋ
ಕಾಮಗಾರಿ ನಡೆಸಲು ಯಾವ ಸಂಸ್ಥೆ ಜೊತೆ ಬಿಬಿಎಂಪಿ ಗುತ್ತಿಗೆ ಕರಾರು ಮಾಡಿಕೊಳ್ಳುತ್ತದೋ ಅದರ ಬಿಲ್‌ ಅನ್ನು ಆ ಸಂಸ್ಥೆಗೆ ಮಾತ್ರ ಪಾವತಿಸಲು ಸಾಧ್ಯ. ಒಂದು ವೇಳೆ ಗುತ್ತಿಗೆದಾರರನ್ನು ಬದಲಾಯಿಸಬೇಕಾದ ಅನಿವಾರ್ಯ ಎದುರಾದರೂ ಅದನ್ನು ನಿಯಮ ಪ್ರಕಾರವೇ ನಡೆಸಬೇಕು. ಆದರೆ, ಬಿಬಿಎಂಪಿಯ ಕೆಲವು ಅಧಿಕಾರಿಗಳ ಪ್ರಕಾರ ಗುತ್ತಿಗೆ ಕರಾರು ಮಾಡಿಕೊಂಡ ಸಂಸ್ಥೆಗೆ ಬಿಲ್‌ ಪಾವತಿಸುವ ಅಗತ್ಯವಿಲ್ಲ. ಮಲ್ಲೇಶ್ವರ ವಿಭಾಗದ ಕಾಮಗಾರಿಯೊಂದರಲ್ಲಿ (ಕಡತ ಸಂಖ್ಯೆ ಎಂ–666) ಒಪ್ಪಂದ ಮಾಡಿಕೊಂಡ ಏಜೆನ್ಸಿಯ ಬದಲು ಬೇರೆ ಏಜೆನ್ಸಿಗೆ ಬಿಲ್‌ನ ಚೆಕ್‌ ನೀಡಿರುವುದನ್ನು ಸಮಿತಿ ಗಮನಿಸಿದೆ.

ಇದೇ ವಿಭಾಗದ ಇನ್ನೊಂದು ಕಾಮಗಾರಿಯ (ಕಡತ ನಂ. ಎಂ–711) ವಿಚಾರದಲ್ಲೂ ಇದೇ ರೀತಿ ಆಗಿದೆ.

ಗುತ್ತಿಗೆ ಕರಾರಿನಲ್ಲಿರುವ ಏಜೆನ್ಸಿಯ ಹೆಸರು ಒಂದೇ, ಆದರೆ, ಚೆಕ್‌ ಪಾವತಿಸಿರುವುದು ಬೇರೆಯವರಿಗೆ.

ಮಂಜೂರಾತಿ ಇಲ್ಲದೆ ಬಿಲ್‌ ಪಾವತಿ
ಯಾವುದೇ ಕಾಮಗಾರಿಗೂ ಆಡಳಿತಾತ್ಮಕ ಅನುಮೋದನೆ ಹಾಗೂ ತಾಂತ್ರಿಕ ಮಂಜೂರಾತಿ ಇಲ್ಲದೇ ಬಿಲ್‌ ಪಾವತಿಸಲು ನಿಯಮಗಳ ಪ್ರಕಾರ ಅವಕಾಶ ಇರುವುದಿಲ್ಲ. ಬಿಲ್‌ಗಳನ್ನು ಈ ಮಂಜೂರಾತಿಗಳಿಗೆ ಅನುಗುಣವಾಗಿಯೇ ಸಿದ್ಧಪಡಿಸಬೇಕು. ಆದರೆ, ಮಲ್ಲೇಶ್ವರ ವಿಭಾಗದ ಕಾಮಗಾರಿಯೊಂದರ ಅಂದಾಜು ಪಟ್ಟಿಗೆ (ಕಡತ ಸಂಖ್ಯೆ ಎಂ–679) ಆಡಳಿತಾತ್ಮಕ ಅನುಮೋದನೆ ಹಾಗೂ ತಾಂತ್ರಿಕ ಮಂಜೂರಾತಿಯನ್ನೇ ಪಡೆದಿರಲಿಲ್ಲ. ಆದರೂ ಬಿಲ್‌ ಪಾವತಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.