ADVERTISEMENT

ಕಾಮಗಾರಿ ನಡೆಸದೆಯೇ ಗುತ್ತಿಗೆದಾರನಿಗೆ ಹಣ: ಮಹಾನಗರಪಾಲಿಕೆಗೆ ₹ 10.34 ಕೋಟಿ ನಷ್ಟ!

ಕಾಮಗಾರಿ ನಡೆಸದೆಯೇ ಗುತ್ತಿಗೆದಾರನಿಗೆ ಹಣ ಪಾವತಿ ಪ್ರಕರಣ ಸಾಬೀತು, ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಕೇಸ್‌

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 19:52 IST
Last Updated 27 ಜೂನ್ 2019, 19:52 IST
   

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಲ್ಕು ವಾರ್ಡ್‌ಗಳಲ್ಲಿ ರಸ್ತೆ ಡಾಂಬರೀಕರಣ, ಚರಂಡಿ ಹಾಗೂ ಪೂರಕ ಕಾಮಗಾರಿಗಳ ಗುತ್ತಿಗೆ ಪಡೆದ ಜೆಎಂಸಿ ಕನ್‌ಸ್ಟ್ರಕ್ಷನ್ಸ್‌ ಕಂಪನಿ ಕೆಲಸ ನಡೆಸದಿದ್ದರೂ ಅಧಿಕಾರಿಗಳು ಬಿಲ್‌ ಪಾವತಿಸಿರುವುದು ಪ್ರಾಥಮಿಕ ವಿಚಾರಣೆಯಿಂದ ಸಾಬೀತಾಗಿದೆ. ಇದರಿಂದಾಗಿ ಪಾಲಿಕೆಗೆ ಬರೋಬ್ಬರಿ ₹ 10.34 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಜೆಎಂಸಿ ಕನ್‌ಸ್ಟ್ರಕ್ಷನ್ಸ್‌ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಮತ್ತು ಅದರ ಮಾಲೀಕ ಎ. ಮೋಹನ ನರಸಿಂಹಲು ವಿರುದ್ಧ ಮೊಕದ್ದಮೆ ದಾಖಲಿಸಿ ನಷ್ಟ ವಸೂಲಿ ಮಾಡಲು ಕ್ರಮಕೈಗೊಳ್ಳುವಂತೆ ಪಾಲಕೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಸೂಚಿಸಿದ್ದಾರೆ.

ಈ ಅಕ್ರಮಕ್ಕೆ ಸಹಕರಿಸಿರುವ ಗೋವಿಂದರಾಜನಗರ ಕ್ಷೇತ್ರದಕಾರ್ಯಪಾಲಕ ಎಂಜಿನಿಯರ್‌ ಎಚ್‌.ಎನ್.ಶ್ರೀಕಂಠೇಗೌಡ (ನಿವೃತ್ತರಾಗಿದ್ದಾರೆ), ಲೆಕ್ಕಅಧೀಕ್ಷಕ ಟಿ.ಎಂ.ರಂಗನಾಥ, ನಗದು ಗುಮಾಸ್ತೆ ಸುಶೀಲ ಅವರನ್ನು ಅಮಾನತು ಮಾಡಿ, ಇಲಾಖಾ ವಿಚಾರಣೆ ನಡೆಸುವಂತೆಯೂ ಆಯುಕ್ತರು ಆದೇಶಿಸಿದ್ದಾರೆ.

ADVERTISEMENT

ಸಹಾಯಕ ಎಂಜಿನಿಯರ್‌ ರಾಮೇಗೌಡ ಅವರು ನಾಯಂಡಹಳ್ಳಿ ವಾರ್ಡ್‌ನಲ್ಲಿ ನಡೆಯದ ಕಾಮಗಾರಿ ಸಂಬಂಧ ₹21.92 ಲಕ್ಷ ಮೊತ್ತದ ಸುಳ್ಳು ಬಿಲ್‌ ಸೃಷ್ಟಿಸಿ, ಆ ಮೊತ್ತದ ಪಾವತಿಗೆ ದೃಢೀಕರಿಸಿದ ಆರೋಪ ಎದುರಿಸುತ್ತಿದ್ದಾರೆ. ಅಕ್ರಮ ಬೆಳಕಿಗೆ ಬಂದ ಬಳಿಕ ತರಾತುರಿಯಲ್ಲಿ ಕಾಮಗಾರಿ ನಡೆಸಿದ್ದರು. ಕಾಮಗಾರಿ ಮುಗಿದ ಬಳಿಕವೇ ಬಿಲ್‌ ಪಾವತಿಸಲಾಗಿದೆ ಎಂದು ಬಿಂಬಿಸಲು ಯತ್ನಿಸಿದ್ದರು ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಆಯುಕ್ತರು ಸೂಚಿಸಿದ್ದಾರೆ.

ಯೋಜನಾ ನಿರ್ವಹಣಾ ಸಲಹಾ ಸಂಸ್ಥೆಯಾದ (ಪಿಎಂಸಿ) ‘ಸೇಪಿಯನ್ಸ್‌ ಕನ್ಸಲ್ಟನ್ಸೀಸ್‌ ಆ್ಯಂಡ್‌ ಎಂಜಿನಿಯರ್ಸ್‌’ ವಿರುದ್ಧವೂ ಕ್ರಮಕೈಗೊಳ್ಳಬೇಕು. ಈ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅದರ ವಿರುದ್ಧವೂ ಮೊಕದ್ದಮೆ ದಾಖಲಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಪ್ರಕರಣವೇನು?: ಮಾರುತಿ ಮಂದಿರ ವಾರ್ಡ್‌ (126), ಮೂಡಲಪಾಳ್ಯ ವಾರ್ಡ್‌ (127), ನಾಗರಬಾವಿ ವಾರ್ಡ್‌ (128), ನಾಯಂಡಹಳ್ಳಿ ವಾರ್ಡ್‌ (131)ಗಳಲ್ಲಿ ರಸ್ತೆ ಡಾಂಬರೀಕರಣ, ಚರಂಡಿ ನಿರ್ಮಾಣ ಹಾಗೂ ಪೂರಕ ಕೆಲಸಗಳು ಸೇರಿದಂತೆ ಒಟ್ಟು 48 ಕಾಮಗಾರಿಗಳಿಗೆ ಪ್ಯಾಕೇಜ್‌ 2ರಲ್ಲಿ ₹35.71 ಕೋಟಿ ಮಂಜೂರಾಗಿತ್ತು.

ಇದರ ಗುತ್ತಿಗೆ ಪಡೆದ ಜೆಎಂಸಿ ಕನ್‌ಸ್ಟ್ರಕ್ಷನ್ಸ್‌ನ ಎ.ಮೋಹನ ನರಸಿಂಹಲು ಅವರಿಗೆ 2017ರ ಡಿ 11ರ ಕಾರ್ಯಾದೇಶ ನೀಡಲಾಗಿತ್ತು. ಕೆಲಸ ನಡೆಸದಿದ್ದರೂ ₹ 8.55 ಕೋಟಿ ಬಿಲ್‌ ಪಾವತಿ ಮಾಡಲಾಗಿದೆ. ₹ 1.78 ಕೋಟಿ ಠೇವಣಿಯನ್ನೂ ವಸೂಲಿ ಮಾಡಿಲ್ಲ. ಹೀಗಾಗಿ ಒಟ್ಟು ₹ 10.34 ಕೋಟಿ ಮೊತ್ತ ದುರುಪಯೋಗವಾಗಿದೆ. ₹ 2.49 ಕೋಟಿ ಮೊತ್ತದಷ್ಟು ಬಾಕಿ ಕಾಮಗಾರಿಯನ್ನು ಗುತ್ತಿಗೆದಾರರು ನಿರ್ವಹಿಸಬೇಕಿತ್ತು. ಅದನ್ನು ಮಾಡಿಲ್ಲ. ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಇತರರು ಲೋಪವೆಸಗಿರುವುದು ಪ್ರಾಥಮಿಕ ವಿಚಾರಣೆಯಿಂದ ಸಾಬೀತಾಗಿದೆ.

2017ರ ಡಿ.7ರಂದು ಕಟ್ಟಿದ್ದ ಬ್ಯಾಂಕ್‌ ಗ್ಯಾರಂಟಿ ಮೊತ್ತವನ್ನು 2018ರ ಮಾ. 17ರಂದು ಬಿಡುಗಡೆ ಮಾಡಲಾಗಿದೆ. ಈ ಮೂಲಕವೂ ಕಾರ್ಯ‍ಪಾಲಕ ಎಂಜಿನಿಯರ್‌ ಲೋಪವೆಸಗಿದ್ದಾರೆ ಎಂಬ ಅಂಶವೂ ವಿಚಾರಣಾ ವರದಿಯಲ್ಲಿದೆ.

ನಿವೃತ್ತರಾಗಿರುವ ಕಾರ್ಯಪಾಲಕ ಎಂಜಿನಿಯರ್‌ ಎಚ್‌.ಎನ್.ಶ್ರೀಕಂಠೇಗೌಡ ಅವರ ಪಿಂಚಣಿ ಮತ್ತು ಇತರ ನಿವೃತ್ತಿ ಸೌಲಭ್ಯ ತಡೆ ಹಿಡಿದು, ನಷ್ಟ ವಸೂಲಿ ಮಾಡಬೇಕು ಎಂದೂ ವರದಿಯಲ್ಲಿದೆ.

ಪಾಲಿಕೆಯಲ್ಲಿ ಪ್ರತಿಧ್ವನಿ

ಗೋವಿಂದರಾಜನಗರ ಕ್ಷೇತ್ರದ ನಾಲ್ಕು ವಾರ್ಡ್‌ಗಳಲ್ಲಿನ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಮಾರುತಿ ಮಂದಿರ ವಾರ್ಡ್‌ನ ಸದಸ್ಯೆ ಶಾಂತಾ ಕುಮಾರಿ ಕೌನ್ಸಿಲ್‌ ಸಭೆಯಲ್ಲಿ ಗಮನ ಸೆಳೆದಿದ್ದರು.

ಕಾಮಗಾರಿ ನಡೆಸದಿದ್ದರೂ ಗುತ್ತಿಗೆದಾರನಿಗೆ ಹಣ ಪಾವತಿ ಆಗಿದೆ ಎಂಬ ಅಂಶವನ್ನು ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ್ ಅವರೇ ಕೌನ್ಸಿಲ್‌ ಸಭೆಯಲ್ಲಿ ತಿಳಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಮೇಯರ್‌ ಗಂಗಾಂಬಿಕೆ ಆದೇಶ ಮಾಡಿದ್ದರು.

ಅಕ್ರಮಗಳೇನು?

l ಡಾಂಬರೀಕರಣ ನಡೆಸದೆ ₹ 2.31 ಕೋಟಿ ಪಾವತಿ

l ಕಾಂಕ್ರೀಟ್‌ ರಸ್ತೆ ಇದ್ದರೂ ಡಾಂಬರೀಕರಣದ ಹೆಸರಿನಲ್ಲಿ ₹ 30.17 ಲಕ್ಷ ಪಾವತಿ

l ಸಂಚಾರಿ ಚಿಹ್ನೆ (ಲೇನ್‌ ಮಾರ್ಕಿಂಗ್‌) ಅಳವಡಿಸದಿದ್ದರೂ ₹ 49.28 ಲಕ್ಷ ಪಾವತಿ

l ಒಮ್ಮೆ ಡಾಂಬರೀಕರಣ ನಡೆಸಿ 2 ಬಾರಿ ಬಿಲ್‌ ಪಡೆದಿದ್ದರಿಂದ ₹ 4.48 ಕೋಟಿ ನಷ್ಟ

l ನಡೆಯದ ಕೆಲಸಗಳಿಗೆ ಒಟ್ಟು ₹ 8.55 ಕೋಟಿ ಬಿಲ್‌ ಪಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.