ADVERTISEMENT

ಸಜ್ಜಾಗಿವೆ ಬಿಬಿಎಂಪಿ ಶಾಲಾ ಕಾಲೇಜುಗಳು

ಜ.1ರಿಂದ ಎಸ್ಸೆಸ್ಸೆಲ್ಸಿ, ಪಿ.ಯು. ತರಗತಿ ನಡೆಸಲು ಸಿದ್ಧತೆ * ಪ್ರತಿ ತರಗತಿಯಲ್ಲಿ ಗರಿಷ್ಠ 15 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 20:39 IST
Last Updated 29 ಡಿಸೆಂಬರ್ 2020, 20:39 IST
ಜಗಜೀವನರಾಂ ನಗರದ ಪಾದರಾಯನಪುರದಲ್ಲಿರುವ ಬಿಬಿಎಂಪಿ ಬಾಲಕಿಯರ ಸಂಯುಕ್ತ ಪದವಿಪೂರ್ವ ಕಾಲೇಜು– ಪ್ರಜಾವಾಣಿ ಸಂಗ್ರಹ ಚಿತ್ರ
ಜಗಜೀವನರಾಂ ನಗರದ ಪಾದರಾಯನಪುರದಲ್ಲಿರುವ ಬಿಬಿಎಂಪಿ ಬಾಲಕಿಯರ ಸಂಯುಕ್ತ ಪದವಿಪೂರ್ವ ಕಾಲೇಜು– ಪ್ರಜಾವಾಣಿ ಸಂಗ್ರಹ ಚಿತ್ರ   

ಬೆಂಗಳೂರು: ಒಂಬತ್ತು ತಿಂಗಳುಗಳಿಂದ ವಿದ್ಯಾರ್ಥಿಗಳ ಕಲರವವಿಲ್ಲದೇ ಬಿಕೋ ಎನ್ನುತ್ತಿದ್ದ ಬಿಬಿಎಂಪಿಯ ಶಾಲಾ ಕಾಲೇಜುಗಳಲ್ಲಿ ಹೊಸ ವರ್ಷದ ಮೊದಲ ದಿನದಿಂದಲೇ ಢಣ ಢಣ ಗಂಟೆ ಸದ್ದು ಮೊಳಗಲಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿ.ಯು. ತರಗತಿಗಳನ್ನು ಆರಂಭಿಸಲು ಬಿಬಿಎಂಪಿ ತಯಾರಿ ನಡೆಸಿದೆ.

‘ಬಿಬಿಎಂಪಿ ಅಧೀನದ ಶಾಲಾ ಕಾಲೇಜುಗಳಲ್ಲಿ ಸರ್ಕಾರದ ಸೂಚನೆ ಮೇರೆಗೆ ಹತ್ತನೇ ತರಗತಿ ಹಾಗೂ ಪದವಿ ಪೂರ್ವ ತರಗತಿಗಳನ್ನು ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ವಿದ್ಯಾರ್ಥಿಗಳು ಶಾಲೆಯಲ್ಲಿ ಅಂತರ ಕಾಪಾಡಿಕೊಂಡು ಅಧ್ಯಯನ ಮುಂದುವರಿಸಲು ವ್ಯವಸ್ಥೆ ಕಲ್ಪಿಸುವ ಬಗ್ಗೆ ತಯಾರಿ ನಡೆಸಿದ್ದೇವೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಶಿಕ್ಷಣ) ಜೆ.ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ತರಗತಿ ಕೊಠಡಿಯೊಂದರಲ್ಲಿ ಗರಿಷ್ಠ 15 ವಿದ್ಯಾರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕೊಠಡಿಯ ವಿಸ್ತೀರ್ಣ ದೊಡ್ಡದಾಗಿದ್ದರೆ ಗರಿಷ್ಠ 20 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಕಲ್ಪಿಸಬಹುದು. ಶಾಲೆ ಆರಂಭಿಸುವ ಮುನ್ನ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಕಟ್ಟಡವನ್ನು ಶುಚಿಗೊಳಿಸುವಂತೆಯೂ ಸೂಚನೆ ನೀಡಿದ್ದೇವೆ’ ಎಂದರು.

ADVERTISEMENT

‘ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳ ತರಗತಿಗಳು ಪ್ರತ್ಯೇಕವಾಗಿ ನಡೆಯುವುದರಿಂದ ಪಿ.ಯು ಕಾಲೇಜುಗಳಲ್ಲಿ ಎಲ್ಲೂ ತರಗತಿ ಕೊಠಡಿ ಸಮಸ್ಯೆ ಇಲ್ಲ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಇರುವ ಕೆಲವು ಪ್ರೌಢಶಾಲೆಗಳಲ್ಲಿ ಸ್ವಲ್ಪ ಸಮಸ್ಯೆ ಆಗಲಿದೆ. ಕ್ಲೀವ್‌ಲ್ಯಾಡ್‌ ಟೌನ್‌ ಪ್ರೌಢಶಾಲೆಯಲ್ಲಿ 187 ವಿದ್ಯಾರ್ಥಿಗಳಿದ್ದು, ಎಂಟು ಕೊಠಡಿಗಳು ಮಾತ್ರ ಇವೆ. ಅಲ್ಲಿನ ಪಿ.ಯು. ಕಾಲೇಜಿನಲ್ಲಿ 493 ವಿದ್ಯಾರ್ಥಿಗಳಿದ್ದು, 10 ಕೊಠಡಿಗಳಿವೆ. ವಿದ್ಯಾರ್ಥಿಗಳ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಬೆಳಿಗ್ಗೆ ಮತ್ತು ಮಧ್ಯಾಹ್ನ ಬೇರೆ ಬೇರೆ ಪಾಳಿಯಲ್ಲಿ ತರಗತಿ ನಡೆಸುವಂತೆ ಸೂಚನೆ ನೀಡಿದ್ದೇವೆ’ ಎಂದರು.

‘ಬಿಬಿಎಂಪಿ ಅಧೀನದ ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಹಾಗೂ ಪಿ.ಯು ಕಾಲೇಜುಗಳ ಪ್ರಾಂಶುಪಾಲರ ಜೊತೆ ಸೋಮವಾರ ಸಭೆ ನಡೆಸಿದ್ದೇನೆ. ಶಾಲೆಗಳಲ್ಲಿ ಸೋಂಕು ಹರಡದಂತೆ ತಡೆಯಲು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ’ ಎಂದೂ ಅವರು ತಿಳಿಸಿದರು.

‘ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳ’
ಬಿಬಿಎಂಪಿಯ ಶಾಲಾ ಕಾಲೇಜುಗಳಲ್ಲಿ 2019–2ನೇ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಳವಾಗಿದೆ.

‘2019–20ರಲ್ಲಿ ಬಿಬಿಎಂಪಿ ಅಧೀನದ ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟು 17 ಸಾವಿರ ವಿದ್ಯಾರ್ಥಿಗಳು ದಾಖಲಾಗಿದ್ದರು. ಇವುಗಳಲ್ಲಿ ಶಿಶುವಿಹಾರಗಳಿಗೆ ದಾಖಲಾದವರ ಸಂಖ್ಯೆಯೇ 6 ಸಾವಿರದಷ್ಟಿತ್ತು. ಈ ಬಾರಿ ಶಿಶು ವಿಹಾರಗಳನ್ನು ಹೊರತುಪಡಿಸಿ 12,500 ವಿದ್ಯಾರ್ಥಿಗಳು ಇದುವರೆಗೆ ದಾಖಲಾಗಿದ್ದಾರೆ’ ಎಂದು ಜೆ.ಮಂಜುನಾಥ್‌ ಮಾಹಿತಿ ನೀಡಿದರು.

‘ಈಗಲೂ ದಾಖಲಾತಿ ಪ್ರಕ್ರಿಯೆ ಮುಂದುವರಿದಿದೆ. ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾದ ಬಳಿಕ ಇನ್ನಷ್ಟು ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ’ ಎಂದರು.

‘ವಿದ್ಯಾಗಮ ಪುನರಾರಂಭ’
ಸ್ಥಗಿತಗೊಂಡಿದ್ದ ವಿದ್ಯಾಗಮ ಕಾರ್ಯಕ್ರಮವನ್ನು ಮತ್ತೆ ಆರಂಭಿಸುವುದಕ್ಕೂ ಬಿಬಿಎಂಪಿ ಸಿದ್ಧತೆ ನಡೆಸಿದೆ. ‘ವಿದ್ಯಾಗಮ ಕಾರ್ಯಕ್ರಮದಡಿ ಅಧ್ಯಾಪಕರು 6 ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಾಲಾ ಪ್ರಾಂಗಣದಲ್ಲೇ ಮಾಹಿತಿ ಮಾರ್ಗದರ್ಶನ ನೀಡಲಿದ್ದಾರೆ. ಆಸಕ್ತ ಪೋಷಕರು ಮಕ್ಕಳನ್ನು ವಿದ್ಯಾಗಮ ಕಾರ್ಯಕ್ರಮಕ್ಕೆ ಕಳುಹಿಸಿಕೊಡಬಹುದು’ ಎಂದು ಜೆ.ಮಂಜುನಾಥ್‌ ತಿಳಿಸಿದರು.

ಅಂಕಿ ಅಂಶ

15: ಬಿಬಿಎಂಪಿ ಅಧೀನದ ಪಿ.ಯು.ಕಾಲೇಜುಗಳು

2,070: ಬಿಬಿಎಂಪಿ ಕಾಲೇಜುಗಳಲ್ಲಿನ ದ್ವಿತೀಯ ಪಿ.ಯು ವಿದ್ಯಾರ್ಥಿಗಳು

32: ಬಿಬಿಎಂಪಿ ಅಧೀನದ ಪ್ರೌಢಶಾಲೆಗಳು

2,190: ಬಿಬಿಎಂಪಿ ಪ್ರೌಢಶಾಲೆಗಳಲ್ಲಿ 10ನೇ ತರಗತಿ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.