ADVERTISEMENT

ಬೆಂಗಳೂರು: ಐದು ಪ್ರದೇಶ ಮತ್ತೆ ಸೀಲ್‌ಡೌನ್‌

ಕೆ.ಆರ್‌.ಮಾರುಕಟ್ಟೆ, ಕಲಾಸಿಪಾಳ್ಯ ಸಗಟು ಮಾರುಕಟ್ಟೆ 15 ದಿನ ಬಂದ್‌

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 20:44 IST
Last Updated 22 ಜೂನ್ 2020, 20:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ನಗರದಲ್ಲಿ ಕೋವಿಡ್‌ 19 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿರುವ ಸಿದ್ದಾಪುರ, ವಿ.ವಿ.ಪುರ, ಚಿಕ್ಕಪೇಟೆ, ಕೆ.ಆರ್‌.ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಸಗಟು ಮಾರುಕಟ್ಟೆಗಳು ಸೇರಿ ಒಟ್ಟು ಐದು ಪ್ರದೇಶಗಳನ್ನು ಸೀಲ್ ಡೌನ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಮೇ 31ರ ಬಳಿಕ ಲಾಕ್ ಡೌನ್‌ ಸಡಿಲಗೊಂಡ ಬಳಿಕ ನಗರದ ಕೆಲವು ಪ್ರದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ವ್ಯಾಪಕವಾಗಿ ಕಾಣಿಸಿಕೊಂಡಿವೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ನೀಡಿರುವ ಸೂಚನೆಯನ್ವಯ ಬಿಬಿಎಂಪಿ ಈ ಕ್ರಮ ಕೈಗೊಂಡಿದೆ.

‘ಸಿದ್ದಾಪುರ, ವಿ.ವಿ.ಪುರ ಹಾಗೂ ಚಿಕ್ಕಪೇಟೆ ಪ್ರದೇಶಗಳಲ್ಲಿ ಕೊರೊನಾ ಸೋಂಕಿತರು ವಾಸವಿದ್ದ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗುತ್ತದೆ. ಜನಸಾಂದ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕೆ.ಆರ್.ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಸಗಟು ಮಾರುಕಟ್ಟೆ ಪ್ರದೇಶಗಳನ್ನು ಮಂಗಳವಾರದಿಂದ ಸೀಲ್‌ ಡೌನ್ ಮಾಡಲಾಗುತ್ತದೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದ್ದಾರೆ.

ADVERTISEMENT

ಪರೀಕ್ಷೆಗೊಳಪಟ್ಟ ಶೇ 2.29 ಮಂದಿಗೆ ಸೋಂಕು

ಲಾಕ್‌ಡೌನ್‌ ಸಡಿಲಿಕೆ ಬಳಿಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿದೆ. ಮೇ 31ಕ್ಕೂ ಮುನ್ನ ಪರೀಕ್ಷೆಗೆ ಒಳಪಡಿಸಿದವರಲ್ಲಿ ಶೇ 1.16 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದರೆ, ಪ್ರಸ್ತುತ ಈ ಪ್ರಮಾಣ ಶೇ 2.29ಕ್ಕೆ ಹೆಚ್ಚಳವಾಗಿದೆ.

ಪಾಲಿಕೆಯ 198 ವಾರ್ಡ್‌ಗಳಲ್ಲಿ 148ರಲ್ಲಿ ಕೋವಿಡ್‌ 19ಪ್ರಕರಣಗಳು ಪತ್ತೆಯಾಗಿವೆ. ಪ್ರಸ್ತುತ 986 ಮಂದಿ ಸೋಂಕಿನಿಂದ ಬಳಲುತ್ತಿದ್ದು, 194 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಸಾಯುವವರ ಪ್ರಮಾಣವೂ ಈಚೆಗೆ ಹೆಚ್ಚಳವಾಗಿದೆ. ಮೇ 31ಕ್ಕೆ ಮುನ್ನ 12 ಮಂದಿ ಸೋಂಕಿತರು ಮೃತಪಟ್ಟಿದ್ದರೆ, ಆ ಬಳಿಕ 53 ಮಂದಿ ಸಾವಿಗೀಡಾಗಿದ್ದಾರೆ.

ನಿಯಂತ್ರಿತ (ಕಂಟೈನ್ಮೆಂಟ್‌) ಪ್ರದೇಶಗಳ ಸಂಖ್ಯೆಯೂ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಬಿಬಿಎಂಪಿ ವಾರ್‌ರೂಂ ಸೋಮವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಪ್ರಸ್ತುತ 440 ಕಡೆ ಕಂಟೈನ್‌ಮೆಂಟ್‌ ಪ್ರದೇಶಗಳಿವೆ. ಮೇ 31ರವರೆಗೆ ಗುರುತಿಸಿದ್ದ ಕಂಟೈನ್‌ಮೆಂಟ್‌ ಪ್ರದೇಶಗಳ ಒಟ್ಟು ಸಂಖ್ಯೆ 63 ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.