ADVERTISEMENT

ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ

ಪಾಲಿಕೆ ಸ್ಥಾಯಿ ಸಮಿತಿ: ಕೋರಂ ಇಲ್ಲದ ಕಾರಣ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 22:54 IST
Last Updated 30 ಡಿಸೆಂಬರ್ 2019, 22:54 IST
   

ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಸಲುವಾಗಿ ಸೋಮವಾರ ನಿಗದಿಯಾಗಿದ್ದ ಚುನಾವಣೆಯನ್ನು ಕೋರಂ ಇಲ್ಲದ ಕಾರಣ ಮುಂದೂಡಲಾಯಿತು.

ಸಭೆಗೆ ಬಿಬಿಎಂಪಿ ಸದಸ್ಯರು ಹಾಜರಾಗಿರಲಿಲ್ಲ. ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಆದರೂ ಪ್ರಭಾರ ಪ್ರಾದೇಶಿಕ ಆಯುಕ್ತ ತುಷಾರ್ ಗಿರಿನಾಥ್ ಸಭೆಯನ್ನು ಆರಂಭಿಸಿದರು. ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಚುನಾವಣೆ ಮುಂದೂಡುವುದಾಗಿ ಅಧಿಕೃತವಾಗಿ ಪ್ರಕಟಿಸಿದರು.

ಪೇಜಾವರಶ್ರೀ ಸಾವಿನ ಶೋಕಾಚರಣೆ ಸಲುವಾಗಿ ಚುನಾವಣೆಯಿಂದ ದೂರ ಉಳಿಯಲು ಬಿಜೆಪಿ ಸದಸ್ಯರು ನಿರ್ಧರಿಸಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಪಕ್ಷದ ಕೆಲ ಸದಸ್ಯರನ್ನು (ಒಟ್ಟು 18ಮಂದಿ) ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ ಅನರ್ಹಗೊಳಿಸುವಂತೆ ಒತ್ತಾಯಿಸಿ ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದವು. ಅನರ್ಹತೆ ವಿಚಾರ ತೀರ್ಮಾನವಾಗುವವರೆಗೆ ಚುನಾವಣೆ ನಡೆಸುವುದು ಬೇಡ ಎಂದು ಒತ್ತಾಯಿಸಿದ್ದವು.

ADVERTISEMENT

ಸದಸ್ಯರ ಅನರ್ಹತೆ ಕುರಿತು ಪ್ರತಿಕ್ರಿಯಿಸಿದ ತುಷಾರ್‌ ಗಿರಿನಾಥ್‌, ‘ಕಾಂಗ್ರೆಸ್‌ನ 14 ಸದಸ್ಯರನ್ನು ಅನರ್ಹಗೊಳಿಸುವ ಬಗ್ಗೆ ನಮಗೆ ಪಾಲಿಕೆಯ ವಿರೋಧ ಪಕ್ಷದ ನಾಯಕರು ಮನವಿ ಸಲ್ಲಿಸಿದ್ದಾರೆ. ಅದರೆ, ಜೆಡಿಎಸ್‌ ಸದಸ್ಯರ ಅನರ್ಹತೆ ಬಗ್ಗೆ ಇನ್ನೂ ಯಾವುದೇ ಕೋರಿಕೆ ಬಂದಿಲ್ಲ’ ಎಂದರು.

‘ಸದಸ್ಯರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರೆ ಅಥವಾ ವಿಪ್‌ ಉಲ್ಲಂಘಿಸಿದ್ದರೆ, ಅವರನ್ನು ಅನರ್ಹಗೊಳಿಸುವಂತೆ 15 ದಿನಗಳ ಒಳಗೆ ಮನವಿ ಸಲ್ಲಿಸಬೇಕು ಎಂದುಕರ್ನಾಟಕ ಸ್ಥಳೀಯ ಸಂಸ್ಥೆಗಳ ಪಕ್ಷಾಂತರ ನಿಷೇಧ ಕಾಯಿದೆ –1987ರ ಕಲಂ 3 (ಬಿ) ಹೇಳುತ್ತದೆ. ನಮಗೆ ಸಲ್ಲಿಕೆಯಾಗಿರುವ ಅರ್ಜಿಯನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ’ ಎಂದು ಅವರು ತಿಳಿಸಿದರು.

ಎರಡನೇ ಬಾರಿ ಮುಂದೂಡಿಕೆ
ಈ ಬಾರಿ ಸ್ಥಾಯಿಸಮಿತಿಗಳ ಅಧ್ಯಕ್ಷರ ಆಯ್ಕೆ ಚುನಾವಣೆ ಮುಂದೂಡಿಕೆ ಆಗಿದ್ದು ಇದು ಎರಡನೇ ಬಾರಿ. ಡಿ.4ರಂದು ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಅಂದು ಕೋರಂ ಇಲ್ಲದ ಕಾರಣಕ್ಕೆ ಚುನಾವಣೆಯನ್ನೂ ಮುಂದೂಡಲಾಗಿತ್ತು.

ಮೇಯರ್‌ ಆಯ್ಕೆಗೆ ನಡೆಯುವ ಚುನಾವಣೆಯ ದಿನವೇ ಸ್ಥಾಯಿಸಮಿತಿಗಳಿಗೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡುವುದು ವಾಡಿಕೆ. 2018ರಲ್ಲಿ ಮೇಯರ್‌ ಚುನಾವಣೆಯ ದಿನ ಸ್ಥಾಯಿಸಮಿತಿ ಸದಸ್ಯರ ಆಯ್ಕೆ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಹಾಗಾಗಿ 2018ರ ಡಿ.4ರಂದು ಸ್ಥಾಯಿ ಸಮಿತಿ ಚುನಾವಣೆ ನಡೆಸಲಾಗಿತ್ತು.

ಈ ಬಾರಿ ಅ.1ರಂದು ಮೇಯರ್‌ ಚುನಾವಣೆ ಸಂದರ್ಭದಲ್ಲೇ ಎಲ್ಲ ಸ್ಥಾಯಿಸಮಿತಿಗಳಿಗೆ ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದರು. ಈ ನಿರ್ಧಾರ ಪ್ರಶ್ನಿಸಿ ಒಂಬತ್ತು ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ‘ಕೆಎಂಸಿ ಕಾಯ್ದೆ ಪ್ರಕಾರ ಸ್ಥಾಯಿ ಸಮಿತಿಗೆ ಒಂದು ವರ್ಷ ಅಧಿಕಾರಾವಧಿ ಇದೆ. ಅವಧಿಪೂರ್ವ ಚುನಾವಣೆಯಿಂದ ಸಮಿತಿಯ ಅಧಿಕಾರ ಮೊಟಕುಗೊಳ್ಳಲಿದೆ’ ಎಂಬ ಅವರ ವಾದವನ್ನು ಮನ್ನಿಸಿದ್ದ ಹೈಕೋರ್ಟ್‌ ಚುನಾವಣಾಧಿಕಾರಿ ಅವರ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಹಾಗಾಗಿ 2019ರ ಅ.1ರಂದು ನಡೆದ ಮೇಯರ್‌ ಆಯ್ಕೆ ಮತದಾನದ ವೇಳೆ ಸ್ಥಾಯಿ ಸಮಿತಿಗಳ ಚುನಾವಣೆ ನಡೆದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.