ADVERTISEMENT

ಬಿಬಿಎಂಪಿ ತೆರಿಗೆ ಪದ್ಧತಿ ಜನಸ್ನೇಹಿಯಾಗಲಿ: ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 21:44 IST
Last Updated 6 ಮಾರ್ಚ್ 2021, 21:44 IST
ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ
ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ   

ಬೆಂಗಳೂರು: ‘ಬಿಬಿಎಂಪಿಯಲ್ಲಿ ಚಾಲ್ತಿಯಲ್ಲಿರುವ ತೆರಿಗೆ ಪದ್ಧತಿ ಸರಳವಾಗಿಲ್ಲ. ಹೀಗಾಗಿ ಇಡೀ ತೆರಿಗೆ ವ್ಯವಸ್ಥೆಯನ್ನು ಜಾಗತಿಕ ಮಾನದಂಡಕ್ಕೆ ಅನುಗುಣವಾಗಿ ಆಮೂಲಾಗ್ರ ಸುಧಾರಣೆ ಮಾಡಬೇಕು. ಇದನ್ನು ಇನ್ನಷ್ಟು ಜನಸ್ನೇಹಿಯಾಗಿ ರೂಪಿಸಬೇಕು’ ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕದಲ್ಲಿ ಬೆಂಗಳೂರು ನಗರವು ಅಗ್ರಸ್ಥಾನ ಪಡೆದುದಕ್ಕೆ ಪೂರಕವಾಗಿ ಜಾರಿಗೊಳಿಸಬೇಕಾದ ಕಾರ್ಯಕ್ರಮಗಳ ಬಗ್ಗೆಸುದ್ದಿಗಾರರ ಜೊತೆ ಶನಿವಾರ ಅವರು ಅಭಿಪ್ರಾಯ ಹಂಚಿಕೊಂಡರು.

‘ತನ್ನ ಆಸ್ತಿಯ ಮೌಲ್ಯಕ್ಕೆ ತಕ್ಕಂತೆ ಪ್ರತಿ ಆಸ್ತಿ ಮಾಲೀಕನೂ ನಿರಾಯಾಸವಾಗಿ ಪಾವತಿ ಮಾಡುವಂತಿರಬೇಕು. ಹಾಗೆ ಮಾಡಿದರೆ, ಗಣನೀಯ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಆಗುತ್ತದೆ. ಅಭಿವೃದ್ಧಿಗೆ ಸಂಪನ್ಮೂಲಗಳ ಕೊರತೆಯೂ ಆಗುವುದಿಲ್ಲ. ಮಿಗಿಲಾಗಿ, ಆರ್ಥಿಕವಾಗಿ ಬೆಂಗಳೂರು ನಗರದ ಆಡಳಿತ ಸ್ವಾವಲಂಬನೆ ಸಾಧಿಸಲಿದೆ’ ಎಂದರು.

ADVERTISEMENT

‘ಬೆಂಗಳೂರು ಅಸಾಧಾರಣ ನಗರ. ಇಲ್ಲಿ ಎಲ್ಲವೂ ವ್ಯವಸ್ಥಿತವಾಗಿರಬೇಕು. ಜಗತ್ತಿನಲ್ಲಿ ಹೂಡಿಕೆಗೆ ಆಕರ್ಷಣೀಯ ತಾಣವಿದು. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಅಮೆರಿಕದ ಸಿಲಿಕಾನ್‌ ವ್ಯಾಲಿಯನ್ನು ಮೀರಿಸುವಂತೆ ನಗರ ಬೆಳೆಯುತ್ತಿದೆ. ಸಂಶೋಧನೆ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ವೈದ್ಯಕೀಯ, ವೈಮಾನಿಕ, ರಕ್ಷಣೆ, ಎಲೆಕ್ಟ್ರಾನಿಕ್ಸ್‌ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದೇಶದ ಮುಂಚೂಣಿ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. ಈ ನಗರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ’ ಎಂದೂ ಹೇಳಿದರು.

‘ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕದಲ್ಲಿ ಅಗ್ರಸ್ಥಾನ ಸಿಕ್ಕಿದೆ ಎಂದು ಮೈಮರೆಯುವ ಬದಲು ನಗರವನ್ನು ಉತ್ತಮಪಡಿಸಲು ಇನ್ನಷ್ಟು ಶ್ರಮಿಸಬೇಕು. ನಗರಕ್ಕೆ ಸಂಬಂಧಿಸಿ ಸ್ಥಳೀಯ ಆಡಳಿತ, ಸರ್ಕಾರ, ಕೈಗಾರಿಕೋದ್ಯಮಿಗಳು, ತಜ್ಞರು, ಜನರು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನಗರ ಕಟ್ಟುವ ಕಾರ್ಯದಲ್ಲಿ ರಚನಾತ್ಮಕವಾಗಿ ಭಾಗಿಯಾಗಬೇಕು’ ಎಂದರು.

‘ರಸ್ತೆಗಳ ಕರಾರುವಾಕ್‌ ಇತಿಹಾಸ ರೂಪಿಸಬೇಕಿದೆ’

‘ಬೆಂಗಳೂರು ನಗರದ ರಸ್ತೆಗಳಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಅವುಗಳ ಸಮಗ್ರ ವಿವರಗಳು ಲಭ್ಯವಿಲ್ಲ. ಈ ಕಾರಣಕ್ಕೆ ಬಿಬಿಎಂಪಿಗೆ ರಸ್ತೆಗಳನ್ನು ನಿರ್ವಹಿಸುವುದು ಕಷ್ಟವಾಗಿದೆ. ಹೀಗಾಗಿ ನಗರ ಎಲ್ಲ ಗಾತ್ರದ ರಸ್ತೆಗಳ ಇತಿಹಾಸವನ್ನು ಯೋಜಿತವಾಗಿ ಸಿದ್ಧಪಡಿಸಿ ಅದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವುದು ಅತ್ಯಂತ ಜರೂರಿನ ಕೆಲಸ’ ಎಂದು ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

‘ರಸ್ತೆ ಇತಿಹಾಸ ಸಿದ್ಧಪಡಿಸುವುದರಿಂದ ಅದರ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ವ್ಯವಸ್ಥಿತವಾಗಿ ಒಂದೆಡೆ ಸಂಗ್ರಹವಾಗುತ್ತವೆ. ರಸ್ತೆಯ ಅಗಲ-ಉದ್ದ, ಮ್ಯಾನ್‌ಹೋಲ್‌ಗಳ ವಿವರ, ಒಳಚರಂಡಿ, ಭೂಗರ್ಭದಲ್ಲಿನ ಯಾವುದೇ ರೀತಿಯ ಸಂಪರ್ಕ ಜಾಲ, ಮಳೆಗಾಲ ಬಂದಾಗ ಆ ರಸ್ತೆಯ ಸ್ಥಿತಿಗತಿ ಇತ್ಯಾದಿ ವಿವರಗಳನ್ನು ಅದರ ಜೊತೆ ದಾಖಲು ಮಾಡಬೇಕು. ಹಾಗೆ ಮಾಡುವುದರಿಂದ ಎಂಜಿನಿಯರುಗಳಿಗೆ ರಸ್ತೆಗಳನ್ನು ನಿರ್ವಹಿಸುವುದು ಸುಲಭವಾಗುತ್ತದೆ ಹಾಗೂ ಒಮ್ಮೆಲೆ ಅಭಿವೃದ್ಧಿಪಡಿಸಿದರೆ ಅದು ಶಾಶ್ವತವಾಗಿರುವಂತೆ ಆಗಿಬಿಡುತ್ತದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.