ADVERTISEMENT

ಅನುದಾನ ಇಲ್ಲದಿದ್ದರೂ ಟೆಂಡರ್‌!

ರಸ್ತೆ ಅಭಿವೃದ್ಧಿ: ಬಿಬಿಎಂಪಿಯ ಪ್ರಸ್ತಾವಕ್ಕೆ ನಗರಾಭಿವೃದ್ಧಿ ಇಲಾಖೆ ಆಕ್ಷೇಪ

ಮಂಜುನಾಥ್ ಹೆಬ್ಬಾರ್‌
Published 29 ಡಿಸೆಂಬರ್ 2021, 19:41 IST
Last Updated 29 ಡಿಸೆಂಬರ್ 2021, 19:41 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಅನುದಾನ ಲಭ್ಯ ಇಲ್ಲದಿದ್ದರೂ ಯಾವುದಾದರೂ ಕಾಮಗಾರಿ ನಡೆಸಲು ಸಾಧ್ಯವೇ? ಬಿಬಿಎಂಪಿ ಮಟ್ಟಿಗೆ ಇದು ಕೂಡಾ ಸಾಧ್ಯ. ಬೈಯಪ್ಪನಹಳ್ಳಿ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಇದೆಯೋ ಇಲ್ಲವೋ ಎಂಬುದನ್ನು ನೋಡದೆಯೇ ಟೆಂಡರ್‌ ಪ್ರಕ್ರಿಯೆ ನಡೆಸಿರುವ ಬಿಬಿಎಂಪಿ, ಕೊನೆಯ ಹಂತದ ಪರಿಶೀಲನೆ ವೇಳೆ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ.

‘ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ’ಯಡಿ ಬೈಯಪ್ಪನಹಳ್ಳಿಯ ಸರ್‌.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ಗೆ ಬಾಣಸವಾಡಿ ಮುಖ್ಯ ರಸ್ತೆ ಹಾಗೂ ಹಳೆ ಮದ್ರಾಸ್ ರಸ್ತೆಯಿಂದ ₹15 ಕೋಟಿ ವೆಚ್ಚದಲ್ಲಿ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಲು ಪಾಲಿಕೆ ನಿರ್ಧರಿಸಿದೆ. ಈ ರಸ್ತೆ ನಿರ್ಮಾಣಕ್ಕಾಗಿ ಟೆಂಡರ್‌ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿದೆ. ಇದಕ್ಕೆ ಅನುಮೋದನೆ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ‘₹15 ಕೋಟಿ ವೆಚ್ಚದ ಕಾಮಗಾರಿಗೆ ಯಾವುದೇ ಅನುದಾನ ಲಭ್ಯ ಇಲ್ಲ. ಹೆಚ್ಚುವರಿ ಅನುದಾನವನ್ನು ನಗರಾಭಿವೃದ್ಧಿ ಇಲಾಖೆ ಅಥವಾ ಸರ್ಕಾರದ ಮೂಲದಿಂದ ಪಡೆಯಬೇಕಿದೆ. ನವ ನಗರೋತ್ಥಾನದಲ್ಲಿ ಈ ಅನುದಾನ ಲಭ್ಯ ಇದೆ ಎಂಬುದು ತಪ್ಪಾಗುತ್ತದೆ’ ಎಂದು ನಗರಾಭಿವೃದ್ಧಿ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ.

ಟೆಂಡರ್‌ ಪ್ರಕ್ರಿಯೆಯ ಹಾದಿ

ADVERTISEMENT

‘ವಿಶ್ವೇಶ್ವರಯ್ಯ ಟರ್ಮಿನಲ್‌ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಪ್ರಧಾನಿ ಅವರು ಉದ್ಘಾಟನೆ ಮಾಡಲಿದ್ದಾರೆ. ಟರ್ಮಿನಲ್‌ ಸಾರ್ವಜನಿಕರಿಗೆ ಲೋಕಾರ್ಪಣೆಗೊಂಡ ಬಳಿಕ ಹೆಚ್ಚಿನ ವಾಹನ ದಟ್ಟಣೆ ನಿವಾರಿಸಲು ರಸ್ತೆ ಅಭಿವೃದ್ಧಿ ಹಾಗೂ ಇತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು’ ಎಂದು ವಿನಂತಿಸಿ ನೈರುತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ‍ಪತ್ರ ಬರೆದಿದ್ದರು.

ಪ್ರಯಾಣಿಕರ ಹಾಗೂ ಸ್ಥಳೀಯರ ಅನುಕೂಲಕ್ಕಾಗಿ ಈ ಕಾಮಗಾರಿಯ ಅವಶ್ಯಕತೆ ಇದೆ ಎಂದೂ ಬಿಬಿಎಂಪಿಯ ಮುಖ್ಯ ಆಯುಕ್ತರು ‍ಪ್ರತಿಪಾದಿಸಿದ್ದರು. ಬೈಯಪ್ಪನಹಳ್ಳಿಯಲ್ಲಿ ಆರ್‌ಒಬಿ ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ ಮೀಸಲಿರಿಸಿದ ₹20 ಕೋಟಿ ಅನುದಾನವನ್ನು ಇದಕ್ಕೆ ಒದಗಿಸಲಾಗಿದೆ ಎಂದೂ ಬಿಬಿಎಂಪಿ ಹೇಳಿಕೊಂಡಿತ್ತು. ಬಳಿಕ ಸೆಪ್ಟೆಂಬರ್‌ನಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು. ಅಕ್ಟೋಬರ್‌ನಲ್ಲಿ ಆರ್ಥಿಕ ಬಿಡ್‌ ತೆರೆಯಲಾಗಿತ್ತು. ತಾಂತ್ರಿಕ ಮೌಲ್ಯಮಾಪನದಲ್ಲಿ ಪಿಎನ್‌ಜಿ ಎಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ (ಎಲ್‌–1) ಹಾಗೂ ಶಂಕರನಾರಾಯಣ ಕನ್‌ಸ್ಟ್ರಕ್ಷನ್‌ ಲಿಮಿಟೆಡ್‌ (ಎಲ್‌–2) ಅರ್ಹತೆ ಗಳಿಸಿದ್ದವು. ಎಲ್‌– 1 ಗುತ್ತಿಗೆದಾರರು ₹14.80 ಕೋಟಿ ಮೊತ್ತ ನಮೂದಿಸಿದ್ದರು. ಈ ಮೊತ್ತವು ಅಂದಾಜು ಮೊತ್ತಕ್ಕೆ ಹೋಲಿಸಿದರೆ ಶೇ 14ರಷ್ಟು ಹೆಚ್ಚು ಇತ್ತು. ಹೀಗಾಗಿ, ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಸರ್ಕಾರದ ಅಧಿಕಾರಯುಕ್ತ ಸಮಿತಿಯ ಮುಂದೆ ಪ್ರಸ್ತಾವ ಮಂಡಿಸಲು ಬಿಬಿಎಂಪಿಯ ಮುಖ್ಯ ಆಯುಕ್ತರು ತೀರ್ಮಾನಿಸಿದರು. ಈ ಪ್ರಸ್ತಾವಕ್ಕೆ ನಗರಾಭಿವೃದ್ಧಿ ಇಲಾಖೆಯ ತಾಂತ್ರಿಕ ಕೋಶವು ಆಕ್ಷೇಪ ವ್ಯಕ್ತಪಡಿಸಿದೆ.

‘ಬೈಯ‍ಪ್ಪನಹಳ್ಳಿ ಆರ್‌ಒಬಿಗೆ 2012ರಲ್ಲಿ ಮೂಲ ದರ ₹20.41 ಕೋಟಿ ಆಗಿತ್ತು. 2018–19ನೇ ಸಾಲಿನಲ್ಲಿ ಪರಿಷ್ಕೃತ ಅಂದಾಜು ₹38.56 ಕೋಟಿ (ಬಿಬಿಎಂಪಿ ಪಾಲು) ಆಗಿದೆ. ಪರಿಷ್ಕೃತ ಅಂದಾಜಿಗೆ ಪಾವತಿಸಲು ₹20 ಕೋಟಿಯನ್ನು ನವ ನಗರೋತ್ಥಾನ ಯೋಜನೆಯಲ್ಲಿ ನೀಡಲಾಗಿದೆ. ಇದನ್ನೇ ರಸ್ತೆ ಅಭಿವೃದ್ಧಿಯ ಅನುದಾನವೆಂದು ಭಾವಿಸುವುದು ಸರಿಯಲ್ಲ. ಸದ್ಯ ಯಾವುದೇ ಅನುದಾನ ಇಲ್ಲ. ಜತೆಗೆ, ಆರ್‌ಒಬಿಯ ಮೂಲ ವಿನ್ಯಾಸವನ್ನು ಬದಲಿಸಿದ್ದುರೈಲ್ವೆ ಇಲಾಖೆ. ಈ ವೆಚ್ಚವನ್ನು ರೈಲ್ವೆ ಇಲಾಖೆಯೇ ಭರಿಸುವುದು ಸೂಕ್ತ. ಈ ಎಲ್ಲ ಕಾರಣಗಳಿಂದ ಹೆಚ್ಚುವರಿ ಅನುದಾನಕ್ಕಾಗಿ ಆರ್ಥಿಕ ಇಲಾಖೆಯನ್ನು ಕೋರಬಹುದು’ ಎಂದು ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ.

‘ಅಕ್ರಮಕ್ಕೆ ಹೆಸರುವಾಸಿ’

‘ಬಿಬಿಎಂಪಿಯು ತನ್ನ ಅವ್ಯವಹಾರ, ಅಕ್ರಮಗಳಿಗೆ ಹೆಸರುವಾಸಿಯಾಗಿದೆ. ಟೆಂಡರ್ ಪ್ರಕ್ರಿಯೆಯಿಂದ ಹಿಡಿದು ಕಾಮಗಾರಿ ಮುಗಿಯುವವರೆಗೆ ಅಕ್ರಮಗಳ ಸರಮಾಲೆಯನ್ನೇ ಸೃಷ್ಟಿಸುತ್ತಿದೆ. ಇದರಿಂದ ತನ್ನ ಬೊಕ್ಕಸ ಬರಿದಾದರೂ ಕೂಡ ಕಾಮಗಾರಿಗಳ ಹೆಸರಿನಲ್ಲಿ ನಡೆಸುವ ಲೂಟಿ ನಿಂತಿಲ್ಲ. ಉತ್ತಮ ಬೆಂಗಳೂರನ್ನು ನಿರ್ಮಿಸುತ್ತೇವೆ ಎಂದು ಮುಖ್ಯಮಂತ್ರಿಯವರು ಹೇಳುತ್ತಿದ್ದಾರೆ.

ಆದರೆ, ಭ್ರಷ್ಟ ಅಧಿಕಾರಿಗಳನ್ನು ತೊಲಗಿಸಿ, ಬಿಬಿಎಂಪಿಯನ್ನು ಸುಧಾರಣೆ ಮಾಡದ ಹೊರತು ಬೇರೆ ಯಾವುದೇ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಎನ್. ದೀಪಕ್ ತಿಳಿಸಿದರು.


ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್‌ಗೆ ಸಂಪರ್ಕ ರಸ್ತೆ ಕಾಮಗಾರಿ

ತಾಂತ್ರಿಕ ಮೌಲ್ಯಮಾಪನಕ್ಕೆ ಎರಡು ಸಂಸ್ಥೆಗಳ ಆಯ್ಕೆ

ಅಧಿಕಾರಯುಕ್ತ ಸಮಿತಿಯೆದುರು ಪ್ರಸ್ತಾವ ಬಂದಾಗ ಆಕ್ಷೇಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.