ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 18 ವರ್ಷಗಳ ನಂತರ ಅಸ್ತಿತ್ವ ಕಳೆದುಕೊಳ್ಳುವ ದಿನ ಹತ್ತಿರವಾಗುತ್ತಿದೆ. ಸೆಪ್ಟೆಂಬರ್ 2ರಂದು ಐದು ನಗರ ಪಾಲಿಕೆಗಳ ಅಂತಿಮ ಅಧಿಸೂಚನೆ ಹೊರಬೀಳುತ್ತಿದಂತೆಯೇ ಬಿಬಿಎಂಪಿ ಹೆಸರು ಇಲ್ಲವಾಗಲಿದೆ.
ಐದು ನಗರ ಪಾಲಿಕೆಗಳ ಅಂತಿಮ ಅಧಿಸೂಚನೆ ಜೊತೆಗೆ ಅಥವಾ ಅದಕ್ಕೂ ಮುನ್ನ, ಮುಖ್ಯಮಂತ್ರಿಯವರ ನೇತೃತ್ವದ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ರಚನೆಯಾಗಲಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ಜಿಬಿಎ ಮುಖ್ಯ ಆಯುಕ್ತರಾಗಲಿದ್ದು, ಬಿಡಿಎ, ಜಲಮಂಡಳಿ, ಬೆಸ್ಕಾಂ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಜಿಬಿಎ ಸದಸ್ಯರಾಗಲಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರ ಪಾಲಿಕೆ, ಬೆಂಗಳೂರು ಪಶ್ಚಿಮ ನಗರ ಪಾಲಿಕೆಗಳಿಗೆ ಆಯುಕ್ತರನ್ನು ಸರ್ಕಾರ ನೇಮಿಸಲಿದೆ. ಆಯಾ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ‘ಬಿಬಿಎಂಪಿಯ ವಲಯ ಆಯುಕ್ತರ ಕಚೇರಿ’ಗಳನ್ನೇ ಆಯುಕ್ತರ ಕಚೇರಿಯನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ- 2024 ಅನ್ನು 2025ರ ಮೇ 15ರಿಂದ ಜಾರಿಗೊಳಿಸಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶ ಎಂದು ಹೆಸರಿಸಲಾಗಿತ್ತು. ಆ ಪ್ರದೇಶದ ವ್ಯಾಪ್ತಿಯಲ್ಲಿಯೇ ಐದು ನಗರ ಪಾಲಿಕೆಗಳನ್ನು ರಚಿಸಿ ಜುಲೈ 19ರಂದು ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಆಗಸ್ಟ್ 18ರವರೆಗೆ ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿತ್ತು. ವಿಧಾನಸಭೆ ಕ್ಷೇತ್ರಗಳನ್ನು ಎರಡು, ಮೂರು ನಗರ ಪಾಲಿಕೆಗಳಿಗೆ ಸೇರಿಸಿರುವುದು ಸೇರಿದಂತೆ ಸಾವಿರಾರು ಆಕ್ಷೇಪಣೆಗಳು ಬಂದಿದ್ದು, ಅವುಗಳನ್ನು ಪರಿಗಣಿಸಿ ಸೆಪ್ಟೆಂಬರ್ 2ರಂದು ಅಂತಿಮ ಅಧಿಸೂಚನೆ ಹೊರಬೀಳಲಿದೆ.
ವಿಧಾನಸಭೆ ಕ್ಷೇತ್ರಗಳ ಪ್ರದೇಶಗಳನ್ನು ಒಂದೇ ನಗರ ಪಾಲಿಕೆಗೆ ಬರುವಂತೆ ಪುನರ್ ವಿಂಗಡಿಸಿ ಅಂತಿಮ ಅಧಿಸೂಚನೆಯಾಗಿ, ಅಸ್ತಿತ್ವಕ್ಕೆ ಬರುವ ಐದು ನಗರ ಪಾಲಿಕೆಗಳು, ವಾರ್ಡ್ ವಿಂಗಡಣೆಯಾಗಿ, ಮೀಸಲಾತಿ ನಿಗದಿಯಾಗಿ, ಚುನಾವಣೆ ಮುಗಿದು ಅಧಿಸೂಚನೆ ಹೊರಬೀಳುವವರೆಗೂ ಬಿಬಿಎಂಪಿಯಲ್ಲಿ ಈಗಿರುವ 198 ವಾರ್ಡ್‌ಗಳಂತೆಯೇ ಕಾಮಗಾರಿಗಳು ನಡೆಯಲಿವೆ. ಯಾವ ನಗರ ಪಾಲಿಕೆಗಳಿಗೆ ಯಾವ ವಾರ್ಡ್‌ಗಳು ವಿಂಗಡಣೆಯಾಗಲಿವೆ ಎಂಬುದು ಸೆಪ್ಟೆಂಬರ್ 2ರಂದು ಹೊರಬೀಳುವ ಅಂತಿಮ ಅಧಿಸೂಚನೆಯಲ್ಲಿ ಸ್ಪಷ್ಟವಾಗಲಿದೆ. ನಗರ ಪಾಲಿಕೆಗಳಿಗೆ ಹೊಸ ಕಾಯ್ದೆ ರಚನೆಯಾಗುವವರೆಗೂ ಬಿಬಿಎಂಪಿ-2020 ಕಾಯ್ದೆಯೇ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಿ.ಎಂಗೆ ಮೇಯರ್ ಕಚೇರಿ
ಎನ್.ಆರ್. ಚೌಕದಲ್ಲಿರುವ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ 1958ರಿಂದ ಇರುವ ನಗರದ ಮೇಯರ್ ಅವರು ಅಥವಾ ಚುನಾಯಿತ ಪ್ರತಿನಿಧಿಗಳು ಇಲ್ಲದಾಗ ಆಡಳಿತಾಧಿಕಾರಿಯ ಕಚೇರಿ ಇನ್ನು ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಜಿಎ) ಅಧ್ಯಕ್ಷರಾಗುವ ಮುಖ್ಯಮಂತ್ರಿಯವರ ಕಚೇರಿಯಾಗಲಿದೆ. ನಗರದ 53 ಮೇಯರ್‌ಗಳ ಭಾವಚಿತ್ರಗಳು ಹಾಗೂ ಮೇಯರ್‌ಗಳ ಅವಧಿಯ ಫಲಕಗಳನ್ನು ಕಚೇರಿಯಿಂದ ತೆರವು ಮಾಡಲಾಗಿದೆ. ಮುಖ್ಯಮಂತ್ರಿಯವರಿಗಾಗಿಯೇ ಅತ್ಯಾಧುನಿಕವಾಗಿ ಕಚೇರಿಯನ್ನು ಸಜ್ಜುಗೊಳಿಸುವ ಕೆಲಸ ಆರಂಭವಾಗಿದೆ. ಹಗಲು ರಾತ್ರಿ ಮರುವಿನ್ಯಾಸ ಕೆಲಸ ನಡೆಯುತ್ತಿದೆ. ಪಾಲಿಕೆಯ ಹಿಂದಿನ ಮೇಯರ್‌ಗಳ ಭಾವಚಿತ್ರಗಳನ್ನು ತೆರವು ಮಾಡಲಾಗಿದೆ. ಅವುಗಳೆಲ್ಲವನ್ನು ಸದ್ಯದ ಮಟ್ಟಿಗೆ ಪಾಲಿಕೆ ಆವರಣದಲ್ಲೇ ಇರುವ ಕೌನ್ಸಿಲ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
100 ದಿನಗಳ ಕ್ರಿಯಾಯೋಜನೆ!
ಬಿಎಂಪಿಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಪರಿವರ್ತನೆಯಾಗಲು ಖಾಸಗಿ ಸಂಸ್ಥೆಗಳ ಬೆಂಬಲ ಪಡೆಯಲಾಗಿದ್ದು ಟೆಂಡರ್ ಮೂಲಕ ಸಲಹೆಗಾರರನ್ನು ಅಂತಿಮಗೊಳಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಸ್ವತ್ತುಗಳ ಮರುಹಂಚಿಕೆಗೆ 100 ದಿನದ ಕ್ರಿಯಾಯೋಜನೆ ರೂಪಿಸಲಾಗಿದೆ. ಆಗಸ್ಟ್ ನಿಂದ ಯೋಜನೆ ಸಿದ್ಧತೆ ಆರಂಭವಾಗಿದ್ದು ನಾಲ್ಕು ವಾರದಲ್ಲಿ ಆರಂಭಿಕ ವರದಿ 10 ವಾರದಲ್ಲಿ ಜಿಬಿಎ ಪರಿವರ್ತನೆಯಾಗಲು ವರದಿ ಸಲ್ಲಿಕೆಯಾಗಲಿದೆ.
ಸಾಂಸ್ಥಿಕ ಚೌಕಟ್ಟು ಸದೃಢ ಆಡಳಿತ ಹಾಗೂ ನಗರ ಪಾಲಿಕೆಗಳು ಮತ್ತು ಇತರೆ ಇಲಾಖೆಗಳ ನಡುವೆ ಸಮನ್ವಯ–ಹೊಣೆಗಾರಿಕೆಯ ಕಾರ್ಯವಿಧಾನಗಳನ್ನು ಖಾಸಗಿ ಸಂಸ್ಥೆ ರಚಿಸಿಕೊಡಲಿದೆ. ಒಟ್ಟಾರೆ 52 ವಾರ ಅಂದರೆ ಒಂದು ವರ್ಷ ಖಾಸಗಿ ಸಂಸ್ಥೆ ಬಿಬಿಎಂಪಿಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಲು ಪಾಲಿಕೆಗಳು ಸಂಪೂರ್ಣ ಅಸ್ತಿತ್ವ ಕಂಡುಕೊಳ್ಳಲು ನೆರವು ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದರು.
- 2007ರಲ್ಲಿ ಬಿಬಿಎಂಪಿ ರಚನೆ
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸುತ್ತಮುತ್ತಲಿನ ಏಳು ನಗರಸಭೆ ಒಂದು ಪುರಸಭೆ ಹಾಗೂ 110 ಹಳ್ಳಿಗಳನ್ನು ಸೇರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 2007ರಲ್ಲಿ ರಚಿಸಲಾಯಿತು. 198 ವಾರ್ಡ್‌ಗಳನ್ನು ರಚಿಸಿ 2010ರಲ್ಲಿ ಚುನಾವಣೆ ನಡೆಸಲಾಗಿತ್ತು. 2020ರ ಸೆಪ್ಟೆಂಬರ್ 10ಕ್ಕೆ ಬಿಬಿಎಂಪಿ ಕೌನ್ಸಿಲ್ ಅವಧಿ ಮುಗಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.