ಬಿಬಿಎಂಪಿ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಯಂ ನೇಮಕಗೊಂಡಿರುವ ಪೌರಕಾರ್ಮಿಕರು ಸಿಂಧುತ್ವ ಪ್ರಮಾಣಪತ್ರಕ್ಕಾಗಿ ಸಲ್ಲಿಸಬೇಕಿರುವ ಇತರೆ ದಾಖಲೆ ಪತ್ರಗಳಿಗೆ ತಗಲುವ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ನವೀನ್ ಕುಮಾರ್ ರಾಜು ತಿಳಿಸಿದ್ದಾರೆ.
ಪಾಲಿಕೆಯ ಘನತ್ಯಾಜ್ಯ ನಿರ್ವಹಣೆಯ ವಿಭಾಗದಲ್ಲಿ ನೇರ ಪಾವತಿಯಡಿ (ಡಿಪಿಎಸ್) ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಪೈಕಿ, ರೋಸ್ಟರ್ ಅಥವಾ ಮೀಸಲಾತಿ ನಿಯಮಾವಳಿಗಳನ್ವಯ 12,692 ಪೌರಕಾರ್ಮಿಕರ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಆರು ತಿಂಗಳ ಹಿಂದೆ ಪ್ರಚುರಪಡಿಸಲಾಗಿತ್ತು. ಅದರಲ್ಲಿ ಈಗಾಗಲೇ 4,000 ಪೌರಕಾರ್ಮಿಕರಿಗೆ ನೇಮಕಾತಿ ಆದೇಶಪತ್ರಗಳನ್ನು ವಿತರಿಸಲಾಗಿದೆ. ಉಳಿದ ಪೌರಕಾರ್ಮಿಕರಿಗೆ ಅತಿ ಶೀಘ್ರದಲ್ಲೇ ನೇಮಕಾತಿ ಆದೇಶಪತ್ರಗಳನ್ನು ನೀಡಲು ಕ್ರಮ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ನೇಮಕಗೊಂಡ ಪೌರಕಾರ್ಮಿಕ ಅಭ್ಯರ್ಥಿಗಳ ಸಿಂಧುತ್ವ ಪರಿಶೀಲನೆಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ವರದಿ ಪಡೆಯಬೇಕು. ಅದಕ್ಕಾಗಿ ಸೇವಾಸಿಂಧು ಪೋರ್ಟಲ್‌ನಲ್ಲಿ ಈಗಾಗಲೇ ಅರ್ಜಿಗಳನ್ನು ಭರ್ತಿ ಮಾಡಲಾಗಿದೆ. ಈ ಪೈಕಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಸೇವಾ ಸಿಂಧು ಅರ್ಜಿದಾರರ ಪ್ರಮಾಣಪತ್ರ ಪೋರ್ಟಲ್‌ನಲ್ಲಿ ಅರ್ಜಿದಾರರ ಲಾಗಿನ್‌ನಿಂದ ಪ್ರಮಾಣ ಪತ್ರ-1 ಹಾಗೂ ಪ್ರಮಾಣ ಪತ್ರ-2 ಅಪ್‌ಲೋಡ್ ಮಾಡಬೇಕಾಗಿದೆ. ಈ ಸಂಬಂಧ ಎರಡೂ ಪ್ರಮಾಣಪತ್ರಗಳ ಛಾಪಾ ಕಾಗದ ಹಾಗೂ ನೋಟರಿ ಸೇರಿದಂತೆ ಇನ್ನಿತರೆ ದಾಖಲಾತಿಗಳಿಗೆ ತಗಲುವ ವೆಚ್ಚವನ್ನು ನೇಮಕಾತಿ ಆದೇಶ ಪತ್ರಗಳು ನೀಡಿದವರನ್ನು ಹೊರತುಪಡಿಸಿ ಇನ್ನುಳಿದ ಪೌರಕಾರ್ಮಿಕರಿಗೆ ಪಾಲಿಕೆಯಿಂದಲೇ ಭರಿಸಲಾಗುವುದು. ಪ್ರಮಾಣಪತ್ರಗಳಿಗೆ ತಗಲುವ ಮೊತ್ತವನ್ನು ಇತರೆ ಸಾಮಾನ್ಯ ಮತ್ತು ವಿವಿಧ ವೆಚ್ಚಗಳಡಿ ಭರಿಸುವಂತೆ ಎಲ್ಲ ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.