ADVERTISEMENT

ಬಿಬಿಎಂಪಿ | ಕಸ ನಿರ್ವಹಣೆ ಬಳಕೆದಾರರ ಶುಲ್ಕ ಜಾರಿ

ಕಸ ನಿರ್ವಹಣೆ ಉಪನಿಯಮ 2020 ರಾಜ್ಯಪತ್ರದಲ್ಲಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 21:04 IST
Last Updated 9 ಜೂನ್ 2020, 21:04 IST
   
""

ಬೆಂಗಳೂರು: ಬಿಬಿಎಂಪಿ ರೂಪಿಸಿರುವ ಕಸ ನಿರ್ವಹಣೆ ಉಪನಿಯಮ 2020 ರಾಜ್ಯಪತ್ರದಲ್ಲಿ ಪ್ರಕಟವಾಗಿದ್ದು, ಅಧಿಕೃತವಾಗಿ ಜಾರಿಗೆ ಬಂದಿದೆ. ಕಸ ನಿರ್ವಹಣೆಗಾಗಿ ಆಸ್ತಿ ತೆರಿಗೆ ಜೊತೆ ಉಪಕರ (ಸೆಸ್‌) ವಿಧಿಸುವುದರ ಜೊತೆಗೆ ಬಳಕೆದಾರರ ಶುಲ್ಕ ಸಂಗ್ರಹಿಸುವುದಕ್ಕೂ ಉಪನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ಹಾಗೂ ಕಸ ನಿರ್ವಹಣೆ ನಿಯಮಗಳನ್ನು ಉಲ್ಲಂಘಿಸುವವರಿಗೆಸ್ಥಳದಲ್ಲೇ ದಂಡ ಭಾರಿ ದಂಡ ವಿಧಿಸುವುದಕ್ಕೆ ಈಗ ಅಧಿಕೃತ ಮುದ್ರೆ ಬಿದ್ದಿದೆ. ಮನೆ ಮನೆಯಿಂದ ಕಸ ಸಂಗ್ರಹಿಸುವ ಪೌರಕಾರ್ಮಿಕರಿಗೆ ಹಸಿ ಮತ್ತು ಒಣ ಕಸ ಮಿಶ್ರ ಮಾಡಿ ನೀಡುವುದೂ ಅಪರಾಧವಾಗಿದ್ದು, ಅದಕ್ಕೂ ಪಾಲಿಕೆ ದಂಡ ವಿಧಿಸಲಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುವ ಅಂಶಗಳೂ ಉಪನಿಯಮಗಳಲ್ಲಿವೆ.

2019ರ ಆಗಸ್ಟ್‌ನಲ್ಲಿ ಉಪನಿಯಮಗಳ ಕರಡಿಗೆ ಬಿಬಿಎಂಪಿ ಕೌನ್ಸಿಲ್‌ ಅನುಮೋದನೆ ನೀಡಿತ್ತು. ಬಳಿಕ ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ಈ ಕರಡನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗಿತ್ತು. ಜನರು ನೀಡಿರುವ ಸಲಹೆಗಳ ಆಧಾರದಲ್ಲಿ ಮತ್ತೆ ಕೆಲವೊಂದು ಮಾರ್ಪಾಡುಗಳೊಂದಿಗೆ ಉಪನಿಯಮಗಳಿಗೆ ಅಂತಿಮ ರೂಪ ನೀಡಲಾಗಿದೆ.

ADVERTISEMENT

ಕಸ ನಿರ್ವಹಣೆಗಾಗಿ ಬಿಬಿಎಂಪಿ ವರ್ಷಕ್ಕೆ ₹ 1000 ಕೋಟಿಗೂ ಅಧಿಕ ವೆಚ್ಚ ಮಾಡುತ್ತಿದೆ. ಆದರೆ, ಆಸ್ತಿ ತೆರಿಗೆ ಜೊತೆ ಸಂಗ್ರಹಿಸುತ್ತಿದ್ದ ಉಪಕರದಿಂದ ಕೇವಲ ₹ 40 ಕೋಟಿ ಸಂಗ್ರಹವಾಗುತ್ತಿದೆ. ಸಣ್ಣ ಪುಟ್ಟ ನಗರಾಡಳಿತ ಸಂಸ್ಥೆಗಳೇ ಕಸ ನಿರ್ವಹಣೆಗೆ ಬಳಕೆದಾರರ ಶುಲ್ಕವನ್ನು ವಿಧಿಸುತ್ತಿದ್ದರೂ ಬಿಬಿಎಂಪಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದ ಬಗ್ಗೆ ಹೈಕೋರ್ಟ್‌ ಪ್ರಕರಣವೊಂದರ ವಿಚಾರಣೆ ವೇಳೆ ಅಸಮಾಧಾನ ವ್ಯಕ್ತಪಡಿಸಿತ್ತು. ಹಾಗಾಗಿ ಬಳಕೆದಾರರ ಶೂಲ್ಕ ವಿಧಿಸುವ ಅಂಶವನ್ನು ಬಿಬಿಎಂಪಿ ಉಪನಿಯಮಗಳಲ್ಲಿ ಸೇರಿಸಿದೆ.

ಭಾರಿ ಪ್ರಮಾಣದ ಕಸ ಉತ್ಪಾದಕರು ಎಂದು ಘೋಷಿಸಿಕೊಂಡವರ ಹೊರತಾಗಿ ಇತರ ಎಲ್ಲ ಕಸ ಉತ್ಪಾದಕರೂ ಬಳಕೆದಾರರ ಶುಲ್ಕ ಪಾವತಿಸುವುದು ಇನ್ನು ಕಡ್ಡಾಯ. ಈ ಶುಲ್ಕವು ಪ್ರತಿ ವರ್ಷ ಏಪ್ರಿಲ್ 1ರಿಂದ ತನ್ನಿಂದ ತಾನೆ ಶೇ 5ರ ಪ್ರಮಾಣದಲ್ಲಿ ಏರಿಕೆ ಆಗಲಿದೆ. ಈ ಬಗ್ಗೆ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ವಿವರ ಪ್ರಕಟಿಸಲಿದೆ.

ಸ್ಥಳದಲ್ಲೇ ಸಾವಯವ ಗೊಬ್ಬರ (ಕಾಂಪೋಸ್ಟ್‌) ತಯಾರಿಸುವ ಕಸ ಉತ್ಪಾದಕರಿಗೆ ಹಾಗೂ ಬಯೋಮೀಥನೈಸೇಷನ್‌ ಮಾಡುವವರಿಗೆ ಬಳಕೆದಾರರ ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ಸಿಗಲಿದೆ. ಇದನ್ನು ಆನ್‌ಲೈನ್ ಮೂಲಕ ಅಥವಾ ಬಿಬಿಎಂಪಿ ಸೂಚಿಸಿದ ಅಧಿಕಾರಿ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗುತ್ತದೆ. ನಿಗದಿತ ಅವಧಿಯೊಳಗೆ ಶುಲ್ಕ ಪಾವತಿ ಮಾಡದಿದ್ದರೆ ತಿಂಗಳಿಗೆ ಶೇ 2ರಷ್ಟು ಬಡ್ಡಿ ಸೇರಿಸಿ ವಸೂಲಿ ಮಾಡಲು ಹಾಗೂ ಅಗತ್ಯವೆನಿಸಿದರೆ ಸುಸ್ತಿದಾರರಿಗೆ ಕಸ ನಿರ್ವಹಣಾ ಸೇವೆ ರದ್ದುಪಡಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.

ಪ್ರತ್ಯೇಕ ಖಾತೆ:ಬಳಕೆದಾರರ ಶುಲ್ಕವನ್ನು ಕಸ ನಿರ್ವಹಣೆಯ ಬಳಕೆಗೆ ಸೀಮಿತವಾದ ಪ್ರತ್ಯೇಕ ಬ್ಯಾಂಕ್‌ ಖಾತೆಗೆ (ಎಸ್ಕ್ರೊ ಖಾತೆ) ವರ್ಗಾಯಿಸಬೇಕು. ಇದರ ಹಣವನ್ನು ಕಸ ನಿರ್ವಹಣೆ ಹೊರತಾಗಿ ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ.

₹5 ಲಕ್ಷದವರೆಗೆ ಹೆಚ್ಚುವರಿ ದಂಡ: ಕಸ ನಿರ್ವಹಣೆ ನಿಯಮ ಉಲ್ಲಂಘಿಸುವವರಿಗೆ ಈ ಹಿಂದೆ ನಿಗದಿ ಪಡಿಸಿದಷ್ಟೇ ದಂಡ ವಿಧಿಸಲಾಗುತ್ತದೆ. ಪರಿಸರದ ಮೇಲೆ ಭಾರಿ ದುಷ್ಪರಿಣಾಮ ಉಂಟುಮಾಡುವಂತಹ ಅಥವಾ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುವಂತಹ ಉಲ್ಲಂಘನೆಗೆ ಮಾಮೂಲಿ ದಂಡದ ಜೊತೆ ₹ 5 ಲಕ್ಷದವರೆಗೆ ಹೆಚ್ಚುವರಿ ದಂಡ ವಿಧಿಸುವುದಕ್ಕೂ ಅವಕಾಶ ನೀಡಲಾಗಿದೆ.

ಕಾರ್ಯಕ್ರಮಗಳಿಗೆ ಪ್ರತ್ಯೇಕ ಶುಲ್ಕ
ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನು ಯಾವುದೇ ಕಾರ್ಯಕ್ರಮಗಳನ್ನು ನಡೆಸುವುದಾದರೆ ಅದಕ್ಕೆ ಪ್ರತ್ಯೇಕವಾಗಿ ಕಸ ನಿರ್ವಹಣೆ ಶುಲ್ಕ ಪಾವತಿಸಬೇಕಾಗುತ್ತದೆ.

ವಸ್ತುಪ್ರದರ್ಶನ ಮತ್ತು ಕಲ್ಯಾಣ ಮಂಟಪಗಳಲ್ಲಿ ತಾತ್ಕಾಲಿಕ ಮನರಂಜನಾ ಕಾರ್ಯಕ್ರಮಗಳಿಗೆ, ಸಮುದಾಯ ಭವನ, ಹೋಟೆಲ್‌, ಖಾಲಿ ನಿವೇಶನಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ವಾರಕ್ಕೆ ₹ 1500, ಒಂದು ವಾರದಿಂದ ಒಂದು ತಿಂಗಳವರೆಗಿನ ಕಾರ್ಯಕ್ರಮಗಳಿಗೆ ₹ 3000, ಒಂದು ತಿಂಗಳಿಗಿಂತ ಹೆಚ್ಚು ಅವಧಿಯ ಕಾರ್ಯಕ್ರಮಗಳಿಗೆ ₹ 6 ಸಾವಿರ ದಂಡ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.