ADVERTISEMENT

ಮಕ್ಕಳಿಗೆ ರೋಗ ನಿರೋಧಕ ಲಸಿಕೆ ನೀಡುವಿಕೆ ಚುರುಕು

ಬಿಬಿಎಂಪಿಯಿಂದ ವಿಶೇಷ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 20:45 IST
Last Updated 24 ಆಗಸ್ಟ್ 2021, 20:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಎರಡು ತಿಂಗಳ ಒಳಗೆ ಮೂರನೇ ಅಲೆ ಬಂದರೂ ಅದನ್ನು ಎದುರಿಸಲು ಮಕ್ಕಳನ್ನು ಸಜ್ಜುಗೊಳಿಸಲು ಬಿಬಿಎಂಪಿ ಮುಂದಾಗಿದೆ. ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಸಾಧ್ಯವಾಗದ ಕಾರಣ ಇತರ ರೋಗನಿರೋಧಕ ಲಸಿಕೆಗಳನ್ನು ನೀಡುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ಪಾಲಿಕೆ ತಯಾರಿ ನಡೆಸಿದೆ.

ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್‌, ‘ಮಕ್ಕಳಿಗೆ ಸದ್ಯಕ್ಕೆ ಕೋವಿಡ್‌ ಲಸಿಕೆ ಹಾಕುತ್ತಿಲ್ಲ. ಅದರ ಬದಲು ಎಂದಿನಂತೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಕೋವಿಡ್‌ ಕಾರಣದಿಂದಾಗಿ ನಾಲ್ಕೈದು ತಿಂಗಳುಗಳಲ್ಲಿ ಮಕ್ಕಳಿಗೆ ರೋಗನಿರೋಧಕ ಲಸಿಕೆ ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಲಸಿಕಾ ಕಾರ್ಯಕ್ರಮದಲ್ಲಿ ಶೇ 45ರಷ್ಟು ಮಾತ್ರ ಗುರಿ ಸಾಧನೆ ಆಗಿದೆ. ಇದಕ್ಕೆ ಮರು ಚಾಲನೆ ನೀಡುತ್ತಿದ್ದೇವೆ. ವಿಶೇಷ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಿದ್ದೇವೆ’ ಎಂದು ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.

‘ಆಗಸ್ಟ್‌ನಲ್ಲಿ ನಾಲ್ಕು ಸಲ ವಿಶೇಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಕಟ್ಟಡ ನಿರ್ಮಾಣ ಸ್ಥಳಗಳು ಮತ್ತು ಕೊಳೆಗೇರಿಗಳ ಬಳಿ ತಲಾ ಎರಡು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗೆ ಪ್ರತಿ ಮಂಗಳವಾರ ಗುರುವಾರ ರೋಗನಿರೋಧಕ ಲಸಿಕೆ ನೀಡಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದೇವೆ. ಗರ್ಭಿಣಿಯರು ಮತ್ತು 1 ವರ್ಷದೊಳಗಿನ ಮಕ್ಕಳು, 1ರಿಂದ 5ವರ್ಷದೊಳಗಿನ ಮಕ್ಕಳು ಹಾಗೂ 5ರಿಂದ 10 ವರ್ಷದೊಳಗಿನ ಮಕ್ಕಳು ಸೇರಿ ಮೂರು ವರ್ಗಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ನ್ಯೂಮೊಕೋಕಲ್‌, ಧನುರ್ವಾಯು, ಪೋಲಿಯೊ... ಮೊದಲಾದ ಲಸಿಕೆಗಳನ್ನು ನೀಡಲಾಗುತ್ತದೆ’ ಎಂದು ವಿವರಿಸಿದರು.

ADVERTISEMENT

2 ಲಕ್ಷ ಮಕ್ಕಳಿಗೆ ರೋಗನಿರೋಧಕ ಲಸಿಕೆ: ‘ಖಾಸಗಿ ಆಸ್ಪತ್ರೆಗೆ ಹೋಗುವ ಶಕ್ತಿ ಇಲ್ಲದ ಪೋಷಕರ ಮಕ್ಕಳು ಸೇರಿದಂತೆ ಸುಮಾರು 2 ಲಕ್ಷ ಮಕ್ಕಳಿಗೆ ರೋಗನಿರೋಧಕ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ಇದುವರೆಗೆ ಇಂತಹ ಶೇ 48 ಮಕ್ಕಳಿಗೆ ಮಾತ್ರ ಲಸಿಕೆ ನೀಡಲಾಗಿದೆ. ಇದನ್ನು ಶೇ 80ಕ್ಕೆ ಹೆಚ್ಚಿಸಲು ಸೂಚನೆ ನೀಡಿದ್ದೇನೆ’ ಎಂದರು.

ವರದಿ ವಿಳಂಬ: ಲ್ಯಾಬ್‌ಗಳ ಶುಲ್ಕ ಪಾವತಿಗೆ ಕತ್ತರಿ

‘ಕೋವಿಡ್‌ ಪರೀಕ್ಷೆ ಸಕಾಲದಲ್ಲಿ ಸಿಗಬೇಕು ಎಂಬ ಕಾರಣಕ್ಕೆ ಪ್ರಯೋಗಾಲಯಗಳಿಗೆ, ಅವರ ಕಾರ್ಯನಿರ್ವಹಣೆಯ ಆಧಾರದಲ್ಲಿ ಬಿಲ್‌ ಪಾವತಿ ಮಾಡುತ್ತಿದ್ದೇವೆ. 24 ಗಂಟೆಗಳ ಅವಧಿಯೊಳಗೆ ಪರೀಕ್ಷಾ ಫಲಿತಾಂಶದ ವರದಿಗಳನ್ನು ಒದಗಿಸದವರಿಗೆ ಶೇ 15ರಷ್ಟು ಬಿಲ್‌ ಕಡಿತ ಮಾಡಲಾಗುತ್ತಿದೆ’ ಎಂದು ರಂದೀಪ್‌ ತಿಳಿಸಿದರು.

‘ಕೋವಿಡ್‌ ಪರೀಕ್ಷೆಗೆ ಸಂಬಂಧಿಸಿ ಸುಳ್ಳು ವರದಿ ನೀಡಿದ, ಒಂದೇ ಸಂಖ್ಯೆಯನ್ನು ನಾಲ್ಕೈದು ಮಾದರಿಗಳಿಗೆ ಹಾಕಿ ಕಳುಹಿಸಿದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಮೂರು– ನಾಲ್ಕು ಪ್ರಯೋಗಾಲಯಗಳಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದ್ದೇನೆ. ಕೆಲವು ಪ್ರಯೋಗಾಲಯಗಳಿಗೆ ಗಂಟಲ ದ್ರವದ ಮಾದರಿ ಕಳುಹಿಸುವುದನ್ನೇ ನಿಲ್ಲಿಸಿದ್ದೇವೆ. ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣೆ ಕಾಯ್ದೆಯಡಿ ( ಎನ್‌ಡಿಎಂಎ) ಕ್ರಮಕ್ಕೂ ಶಿಫಾರಸು ಮಾಡಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.