ADVERTISEMENT

ಕೋವಿಡ್‌ ಆರೈಕೆ ಕೇಂದ್ರ: ಶೇ 50ರಷ್ಟು ಹಾಸಿಗೆಗೆ ಆಮ್ಲಜನಕ ಪೂರೈಕೆ

ಹೋಟೆಲ್‌ಗಳಲ್ಲಿ 940 ಹಾಸಿಗೆ ಸಾಮರ್ಥ್ಯದ ಸ್ಟೆಪ್‌ಡೌನ್‌ ಆಸ್ಪತ್ರೆ: ಮುಖ್ಯ ಆಯುಕ್ತ

​ಪ್ರಜಾವಾಣಿ ವಾರ್ತೆ
Published 6 ಮೇ 2021, 19:30 IST
Last Updated 6 ಮೇ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ಕೋವಿಡ್‌ ಚಿಕಿತ್ಸೆಗೆ ಈಗಿರುವ ಹಾಸಿಗೆಗಳ ಸಾಮರ್ಥ್ಯ ಹೆಚ್ಚಿಸಬೇಕಿದೆ. ಹೊಸತಾಗಿ ಆಮ್ಲಜನಕ ಪೂರಣ ವ್ಯವಸ್ಥೆಯ ಹಾಸಿಗೆ ಸೃಷ್ಟಿಸುವ ಕಡೆ ಬಿಬಿಎಂಪಿ ಆದ್ಯತೆ ನೀಡಿದೆ. ಈ ಸಲುವಾಗಿ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಶೇ 50ರಷ್ಟು ಹಾಸಿಗೆಗಳಿಗೆ ಆಮ್ಲಜನಕ ಪೂರಣ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಸದ್ಯಕ್ಕೆ 2 ಸಾವಿರ ಹಾಸಿಗೆಗಳಿವೆ. ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತೇವೆ. 168 ಹಾಸಿಗೆಗಳಿಗೆ ಆಮ್ಲಜನಕ ಪೂರಣ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.

‘15 ಹೋಟೆಲ್‌ಗಳಲ್ಲಿನ 945 ಹಾಸಿಗೆಗಳನ್ನು ಬಳಸಿ ಅವುಗಳನ್ನು ಸ್ಟೆಪ್‌ಡೌನ್‌ ಆಸ್ಪತ್ರೆಗಳನ್ನಾಗಿ ಪರಿರ್ತಿಸಲಿದ್ದೇವೆ. ಆಕ್ಸಿಜನ್‌ ಕೊರತೆ ನೀಗಿಸಲು ಆಮ್ಲಜನಕ ಸಾಂದ್ರೀಕರಣ ಸಾಧನ ಸಂಗ್ರಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. 10 ಕಡೆ ಸಂಚಾರ ಆಕ್ಸಿಜನ್‌ ಪೂರೈಕೆ ಕೇಂದ್ರಗಳನ್ನು ಆರಂಭಿಸುತ್ತಿದ್ದೇವೆ. ಇದಕ್ಕೆ ಅಗತ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಿದ್ದೇವೆ’ ಎಂದರು.

ADVERTISEMENT

‘ನಗರದಲ್ಲಿ ವೆಂಟಿಲೇಟರ್‌ ಹಾಸಿಗೆಗಳಿಗಿಂತಲೂ ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳ ಅವಶ್ಯಕತೆ ಹೆಚ್ಚು ಇದೆ. ಆದರೆ, ಹೊಸ ಐಸಿಯುಗಳನ್ನು ನಿರ್ಮಿಸಲು ಹೆಚ್ಚು ಸಮಯ ಬೇಕಾಗುತ್ತದೆ. ನಮ್ಮಲ್ಲಿರುವ ಈಗಿರುವ ಹಾಸಿಗೆಗಳನ್ನೇ ಆದಷ್ಟು ಐಸಿಯು ಹಾಸಿಗೆಗಳನ್ನಾಗಿ ಪರಿವರ್ತಿಸುತ್ತೇವೆ. ಸಾಮಾನ್ಯ ಹಾಸಿಗೆಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಕಲ್ಪಿಸಲಿದ್ದೇವೆ. ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿನ ಐಸಿಯು ಸಾಮರ್ಥ್ಯ ಹೆಚ್ಚಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.