ADVERTISEMENT

ಬಿಬಿಎಂಪಿ: ಸ್ವಕ್ಷೇತ್ರಕ್ಕೇ ಆರ್‌ಒಗಳ ವರ್ಗಾವಣೆ

ಕೇಂದ್ರ ಚುನಾವಣೆ ಆಯೋಗದ ಮಾರ್ಗಸೂಚಿ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 20:21 IST
Last Updated 31 ಜನವರಿ 2023, 20:21 IST

ಬೆಂಗಳೂರು: ಚುನಾವಣೆ ಆಯೋಗದ ಮಾರ್ಗಸೂಚಿ ಅನ್ವಯ ಎಂದು ನಮೂದಿಸಿ, ಸ್ವಕ್ಷೇತ್ರಕ್ಕೇ ಬಿಬಿಎಂಪಿಯ ಕಂದಾಯ ಅಧಿಕಾರಿಗಳನ್ನು ನಗರಾಭಿವೃದ್ಧಿ ಇಲಾಖೆ ವರ್ಗಾವಣೆ ಮಾಡಿದೆ.

ಬಿಬಿಎಂಪಿಯ ಆರು ಕಂದಾಯ ಅಧಿಕಾರಿ ಹಾಗೂ 14 ಸಹಾಯಕ ಕಂದಾಯ ಅಧಿಕಾರಿಗಳನ್ನು ಮಂಗಳವಾರ ವರ್ಗಾವಣೆ ಮಾಡಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಸ್ವಕ್ಷೇತ್ರದಲ್ಲಿ ಅಧಿಕಾರಿಗಳು ಇರಬಾರದು ಎಂಬ ನಿಯಮದಂತೆ ಮಾಡಲಾಗಿರುವ ಈ ವರ್ಗಾವಣೆಯಲ್ಲಿ, ಮೂವರು ಕಂದಾಯ, ಉಪ ಕಂದಾಯ ಅಧಿಕಾರಿಗಳನ್ನು ಅವರ ಸ್ವಕ್ಷೇತ್ರಕ್ಕೇ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ.

ದಾಸರಹಳ್ಳಿಯಲ್ಲಿದ್ದ ಕಂದಾಯ ಅಧಿಕಾರಿ ಎಸ್‌.ಆರ್‌. ಪ್ರಕಾಶ್‌ ಅವರನ್ನು ಕೆಂಗೇರಿ, ಸರ್ವಜ್ಞನಗರದಲ್ಲಿದ್ದ ಉಪಕಂದಾಯ ಅಧಿಕಾರಿ ನಾರಾಯಣಸ್ವಾಮಿ ಅವರನ್ನು ಕೆ.ಆರ್‌. ಪುರ, ಪುಲಿಕೇಶಿನಗರದಲ್ಲಿದ್ದ ಉಪ ಕಂದಾಯ ಅಧಿಕಾರಿ ಡಿ. ಸರಸ್ವತಿ ಅವರನ್ನು ಮಲ್ಲೇಶ್ವರಕ್ಕೆ ವರ್ಗಾವಣೆ ಮಾಡಲಾಗಿದೆ. ಇವರು ನಿಯೋಜಿಸಲಾಗಿರುವ ಸ್ಥಳದಲ್ಲಿ ಮತದಾರ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ. ಆದರೆ ಈ ಮೂವರನ್ನು ಅವರು ವಾಸವಿರುವ ವಿಧಾನಸಭೆ ಕ್ಷೇತ್ರಕ್ಕೇ ವರ್ಗಾಯಿಸಿರುವುದು ಕೇಂದ್ರ ಚುನಾವಣೆ ಆಯೋಗದ ಮಾರ್ಗಸೂಚಿಗೆ ವಿರುದ್ಧವಾಗಿದೆ.

ADVERTISEMENT

ವಿಧಾನಸಭೆ ಚುನಾವಣೆ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಕಂದಾಯ ವಿಭಾಗದ ಎಲ್ಲ ಅಧಿಕಾರಿಗಳ ವಿಳಾಸ ಮಾಹಿತಿಯನ್ನು ಎಪಿಕ್‌ ಸಂಖ್ಯೆಯೊಂದಿಗೇ ಬಿಬಿಎಂಪಿ ಪಡೆದುಕೊಂಡಿದೆ. ಅದೆಲ್ಲ ಮಾಹಿತಿಯನ್ನು ಪಡೆದುಕೊಂಡ ಮೇಲೂ ಸ್ವಕ್ಷೇತ್ರಕ್ಕೆ ಅವರನ್ನು ವರ್ಗಾಯಿಸಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳ ವರ್ಗಾವಣೆಯನ್ನು ತರಾತುರಿಯಲ್ಲಿ ಮಾಡಲಾಗಿದ್ದು, ಯಾರನ್ನು ಯಾವ ಕ್ಷೇತ್ರಕ್ಕೆ ವರ್ಗಾಯಿಸಬೇಕು ಎಂಬ ಮಾಹಿತಿಯನ್ನು ವಾಟ್ಸ್‌ ಆ್ಯಪ್‌ ಸಂದೇಶದ ಮೂಲಕ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ರವಾನೆಯಾಗಿದೆ. ಕಡತಗಳ ಮೂಲಕ ಸಲ್ಲಿಸಲಾಗಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.