ADVERTISEMENT

ಬಿಬಿಎಂಪಿ: ವರ್ಷದಲ್ಲಿ 4,219 ವಾರ್ಡ್ ಸಮಿತಿ ಸಭೆ

ವಾರ್ಡ್ ಸಮಿತಿಗಳ ಅಧ್ಯಯನ: ವರದಿ ಬಿಡುಗಡೆ ಮಾಡಿದ ‘ಜನಾಗ್ರಹ’

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 20:08 IST
Last Updated 13 ನವೆಂಬರ್ 2021, 20:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ 2020ರ ಆ.1ರಿಂದ 2021ರ ಸೆ. 4ರವರೆಗೆ ಒಟ್ಟು 4,219 ವಾರ್ಡ್ ಸಮಿತಿ ಸಭೆಗಳು ನಡೆದಿವೆ.

ವಾರ್ಡ್‌ ಸಮಿತಿ ಸಭೆಗಳ ಕುರಿತು ಜನಾಗ್ರಹ ಸಂಸ್ಥೆ ವಿಶ್ಲೇಷಣೆ ನಡೆಸಿದೆ. ಈ ವಿಶ್ಲೇಷಣೆಯ ಮುಖ್ಯಾಂಶಗಳನ್ನು ಶನಿವಾರ ಏರ್ಪಡಿಸಿದ್ದ ವಾರ್ಡ್ ಸಮಿತಿ ಕಾರ್ಯಾಗಾರದಲ್ಲಿ ಬಿಡುಗಡೆ ಮಾಡಲಾಯಿತು.

ಪ್ರತಿಯೊಂದು ವಾರ್ಡ್ ಸಮಿತಿಗೆ ನೀಡಲಾದ ತಲಾ ₹60 ಲಕ್ಷ ಅನುದಾನವನ್ನು ಹೇಗೆ ಬಳಸಬಹುದು ಎನ್ನುವ ಮಾಹಿತಿಯನ್ನು ಕಾರ್ಯಾಗಾರದಲ್ಲಿ ಒದಗಿಸಲಾಯಿತು. ವಾರ್ಡ್ ಸಮಿತಿಯಲ್ಲಿ ಭಾಗವಹಿಸಿದ ಅನುಭವಗಳನ್ನು ನಾಗರಿಕರು ಹಂಚಿಕೊಂಡರು.

ADVERTISEMENT

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ‘ನಾಗರಿಕರ ಸಹಭಾಗಿತ್ವ ದಿಂದ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲಿದೆ. ಬಿಬಿಎಂಪಿಯು ಪ್ರತಿ ವಾರ್ಡ್‌ಗೆ ₹60 ಲಕ್ಷ ಅನುದಾನ ನೀಡಿದೆ. ಇದನ್ನು ರಸ್ತೆ ಗುಂಡಿಗಳನ್ನು ಮುಚ್ಚಲು, ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಮತ್ತು ಕೊಳವೆಬಾವಿಗಳ ನಿರ್ಮಾಣಕ್ಕೆ ಬಳಸಲಾಗಿದೆ’ ಎಂದು ವಿವರಿಸಿದರು.

ಬಿಬಿಎಂಪಿ ಮಾಹಿತಿ ತಂತ್ರಜ್ಞಾನ ಉಪ ಆಯುಕ್ತರಾಗಿರುವ ಗೊಟ್ಟಿಗೆರೆ ವಾರ್ಡ್‌ನ ನೋಡಲ್ ಅಧಿಕಾರಿ ರಮಾಮಣಿ, ‘ಯಾವುದೇ ಸಭೆ ನಡೆಯುವ ಮೊದಲು ಕಾರ್ಯಸೂಚಿ ತಯಾರಿಸಬೇಕು. ಸಭೆಗಳನ್ನು ನಿಯಮಿತವಾಗಿ ನಡೆಸಿದರೆ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ಸಮೀಕ್ಷೆ ಬಗ್ಗೆ ವಿವರಿಸಿದ ಜನಾಗ್ರಹದ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಅಲವಿಲ್ಲಿ, ‘ವಾರ್ಡ್ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ಸಭೆಗಳು ಈಗಾಗಲೇ ನಡೆದಿವೆ. ಅನೇಕ ನೋಡಲ್ ಅಧಿಕಾರಿಗಳು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕೆಲವೆಡೆ ಮಾತ್ರ ವಾರ್ಡ್ ಸಮಿತಿ ಸಭೆಗಳು ನಡೆದಿಲ್ಲ. ಈ ಮಾಹಿತಿಯು ವಾರ್ಡ್ ಸಮಿತಿಗಳನ್ನು ಬಲಪಡಿಸಲು ಬಿಬಿಎಂಪಿಗೆ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ವಾರ್ಡ್‌ ಸಮಿತಿಗೆ ಹಂಚಿಕೆ ಮಾಡಲಾದ ₹ 60 ಲಕ್ಷ ಅನುದಾನವನ್ನು ವ್ಯವಸ್ಥಿತವಾಗಿ ಹೇಗೆ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಜನಾಗ್ರಹದ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥೆ ಸಪ್ನಾ ಕರೀಂ ವಿವರಿಸಿದರು.

ವಾರ್ಡ್‌ ಸಮಿತಿ ಸಭೆ–ಪ್ರಮುಖ ಅಂಶಗಳು

lಶೇಕಡ 40ರಷ್ಟು ನೋಡಲ್ ಅಧಿಕಾರಿಗಳು ಮಾತ್ರ ವಾರ್ಡ್ ಸಮಿತಿ ಸಭೆ ಗಳಿಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೆ ಪರಿಣಾಮಕಾರಿ ಉತ್ತರ ನೀಡಿದ್ದಾರೆ.

lಪ್ರತಿ ತಿಂಗಳಲ್ಲಿ ಸರಾಸರಿ 181ರಂತೆ ಸಭೆಗಳು ನಡೆದಿವೆ.

l33 ವಾರ್ಡ್‌ಗಳಲ್ಲಿ ಪ್ರತಿ ತಿಂಗಳು ಕಡ್ಡಾಯವಾಗಿ ಎರಡು ಸಭೆಗಳನ್ನು ನಡೆಸಲಾಗಿದೆ.

l72 ವಾರ್ಡ್‌ಗಳಲ್ಲಿ ತಿಂಗಳಿಗೆ ಒಂದು ವಾರ್ಡ್ ಸಮಿತಿ ಸಭೆ ನಡೆಸಲಾಗಿದೆ.

lಹೊಂಬೇಗೌಡ ನಗರ ಮತ್ತು ಗೊಟ್ಟಿಗೆರೆ ವಾರ್ಡ್‌ಗಳಲ್ಲಿ ಮಾತ್ರ ಶೇಕಡ 100ರಷ್ಟು ಸಭೆಗಳನ್ನು ನಡೆಸಿ ನಡಾವಳಿಗಳನ್ನು ನಿರಂತರವಾಗಿ ಅಪ್‌ಲೋಡ್ ಮಾಡಲಾಗಿದೆ

lವಸಂತನಗರ, ಕುಮಾರಸ್ವಾಮಿ ಲೇಔಟ್, ದಯಾನಂದನಗರಗಳಲ್ಲಿ 25ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದರೂ ಒಂದೇ ಒಂದು ಸಭೆಯ ವಿವರಗಳನ್ನು ಅಪ್‌ಲೋಡ್ ಮಾಡಿಲ್ಲ.

l54 ವಾರ್ಡ್‌ಗಳಲ್ಲಿ 21ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದೆ.

ವಾರ್ಡ್‌ ಸಮಿತಿ ಸಭೆಗಳ ಮೂಲಕ ನಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಸಾಧ್ಯವಾಯಿತು. ಹೆಚ್ಚು ಜನರು ಸಭೆಗಳಲ್ಲಿ ಭಾಗವಹಿಸಬೇಕು. ಆಗ ಮಾತ್ರ ವಾರ್ಡ್ ಸಮಿತಿಗಳು ಕ್ರಿಯಾಶೀಲವಾಗಿರಲು ಸಾಧ್ಯ.

- ಶ್ರೀನಿವಾಸ್‌, ಥಣಿಸಂದ್ರ ವಾರ್ಡ್‌ ನಿವಾಸಿ

ನಮ್ಮ ವಾರ್ಡ್ ಸಮಿತಿಯು ಕೇವಲ ವೈಯಕ್ತಿಕ ಸಮಸ್ಯೆಗಳಿಗೆ ಸೀಮಿತಗೊಂಡಿದೆ. ಅನೇಕ ಜನರಿಗೆ ವಾರ್ಡ್ ಸಮಿತಿಗಳ ಬಗ್ಗೆ ಅರಿವು ಇಲ್ಲ. ಈ ಬಗ್ಗೆ ಗಮನಹರಿಸಬೇಕಾಗಿದೆ.

- ಲಲಿತಾ, 18ನೇ ವಾರ್ಡ್ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.