ADVERTISEMENT

ಯಲಹಂಕ|ವಾರ್ಡ್‌ಗೆ ಡಿ.ಕೆ.ಶಿವಕುಮಾರ್ ಮಗನ ಹೆಸರು: ಶಾಸಕ ಎಸ್.ಆರ್.ವಿಶ್ವನಾಥ್ ಆರೋಪ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 15:25 IST
Last Updated 21 ನವೆಂಬರ್ 2025, 15:25 IST
ಎರಡನೇ ವಾರ್ಡಿಗೆ ‘ಆಕಾಶ್’ ಹೆಸರು ಇಟ್ಟಿರುವುದನ್ನು ವಿರೋಧಿಸಿ ಪಾಲಿಕೆ ಮಾಜಿ ಸದಸ್ಯ ಕೆಂಪೇಗೌಡರ ನೇತೃತ್ವದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.
ಎರಡನೇ ವಾರ್ಡಿಗೆ ‘ಆಕಾಶ್’ ಹೆಸರು ಇಟ್ಟಿರುವುದನ್ನು ವಿರೋಧಿಸಿ ಪಾಲಿಕೆ ಮಾಜಿ ಸದಸ್ಯ ಕೆಂಪೇಗೌಡರ ನೇತೃತ್ವದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.   

ಯಲಹಂಕ: ಬೆಂಗಳೂರು ಉತ್ತರ ನಗರ ಪಾಲಿಕೆಯ ಎರಡನೇ ವಾರ್ಡ್‌ಗೆ ‘ಆಕಾಶ್‌ ವಾರ್ಡ್‌’ ಎಂದು ಹೆಸರಿಟ್ಟಿರುವದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಮಗನ ಹೆಸರು ‘ಆಕಾಶ್‌’ ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಆರೋಪಿಸಿದ್ದಾರೆ.

ಯಲಹಂಕ ವಿಧಾನಸಭಾ ವ್ಯಾಪ್ತಿಯಲ್ಲಿರುವ ಈ ಪ್ರದೇಶ ಹಿಂದೆ ಕೆಂಪೇಗೌಡ ವಾರ್ಡ್‌ ಮತ್ತು ಸುತ್ತಲಿನ ವಾರ್ಡ್‌ಗಳಿಗೆ ಹಂಚಿಹೋಗಿತ್ತು. ಪುನರ್‌ವಿಂಗಡಣೆಯ ಸಂದರ್ಭದಲ್ಲಿ ಮಾರುತಿನಗರ, ಶ್ರೀನಿವಾಸಪುರ ಮತ್ತು ವೆಂಕಟಾಲವನ್ನು ಸೇರಿಸಿ ಆಕಾಶ್‌ ವಾರ್ಡ್‌ ಎಂದು ನಮೂದಿಸಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್‌, ‘ಆಕಾಶ್ ಯಾರು? ಅವರ ಸಾಧನೆಯಾದರೂ ಏನು? ಇದು ಯಾವ ವ್ಯಕ್ತಿಗೆ ಸಂಬಂಧಿಸಿದ ಹೆಸರು’ ಎಂದು ಪ್ರಶ್ನಿಸಿದರು.

ADVERTISEMENT

‘ನನಗೆ ಬಂದ ಸುದ್ದಿಗಳ ಪ್ರಕಾರ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರನ ಹೆಸರು ಕೂಡ ಆಕಾಶ್. ಆದರೆ, ಶಿವಕುಮಾರ್ ಈ ರೀತಿಯ ವೈಯಕ್ತಿಕ ಹೆಸರು ಇಡಲು ಒಪ್ಪುವುದಿಲ್ಲ ಎಂಬ ನಂಬಿಕೆ ನನಗಿದೆ’ ಎಂದೂ ಹೇಳಿದರು.

‘ಆಕಾಶ್’ ಎಂಬ ಹೆಸರನ್ನು ಕೂಡಲೇ ತೆಗೆದು ಹಾಕಬೇಕು. ವೆಂಕಟಾಲ ಅಥವಾ ಮಾರುತಿ ನಗರ ವಾರ್ಡ್ ಎಂದು ಮರುನಾಮಕರಣ ಮಾಡಬೇಕು’ ಎಂದು ಆಗ್ರಹಿಸಿದರು.

ಅವೈಜ್ಞಾನಿಕ ವಿಂಗಡಣೆ: ಯಲಹಂಕ ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ವಾರ್ಡ್‌ಗಳು ಬರಲಿದ್ದು, ಇದರಲ್ಲಿ ಕೆಲವು ವಾರ್ಡ್‌ಗಳನ್ನು ಅವೈಜ್ಞಾನಿಕವಾಗಿ ವಿಂಗಡಣೆ ಮಾಡಲಾಗಿದೆ ಎಂದು ಆರೋಪಿಸಿದರು.

‘ದೊಡ್ಡಬೆಟ್ಟಹಳ್ಳಿ ಇರುವುದೇ ಒಂದು ಕಡೆಯಾದರೆ ಅದಕ್ಕೆ ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಕೆಲವು ಬಡಾವಣೆಗಳನ್ನು ಸೇರಿಸಿ, ಲಕ್ಷ್ಮೀಪುರ ಕ್ರಾಸ್ ವರೆಗೆ ದೊಡ್ಡಬೆಟ್ಟಹಳ್ಳಿ ವಾರ್ಡ್ ರಚಿಸಲಾಗಿದೆ. ಅಟ್ಟೂರು ವಾರ್ಡ್‌ಗೆ ಹೊಂದಿಕೊಂಡಿರುವ ಕೆಲ ಪ್ರದೇಶಗಳನ್ನು ದೊಡ್ಡಬೆಟ್ಟಹಳ್ಳಿ ವಾರ್ಡ್‌ಗೆ ಅವೈಜ್ಞಾನಿಕವಾಗಿ ಸೇರಿಸಲಾಗಿದೆ ಎಂದು ಹೇಳಿದರು.

ಬಿಬಿಎಂಪಿ ಮಾಜಿ ಸದಸ್ಯ ಮುನಿರಾಜು, ಯಲಹಂಕ ನಗರ ಮಂಡಲ ಬಿಜೆಪಿ ಪ್ರಧಾನ‌ ಕಾರ್ಯದರ್ಶಿಗಳಾದ ಈಶ್ವರ್, ವಿ. ಪವನ್, ಬಿಜೆಪಿ ಮುಖಂಡರಾದ ವಿ.ವಿ. ರಾಮಮೂರ್ತಿ, ಮಧುಸೂದನ್, ಚಂದ್ರಯ್ಯ ಉಪಸ್ಥಿತರಿದ್ದರು.

ಅದಲು ಬದಲು

ಯಲಹಂಕ ಹಳೇನಗರವು ವೇಣುಗೋಪಾಲಸ್ವಾಮಿ ದೇವಾಲಯ ಕೋಟೆ ಸೇರಿದಂತೆ ಕೆಂಪೇಗೌಡರು ಆಳಿದ ಐತಿಹಾಸಿಕ ಕುರುಹುಗಳಿರುವ ಜಾಗ. ಅಲ್ಲಿ ಕೆಂಪೇಗೌಡರ ಪ್ರತಿಮೆಯೂ ಇದೆ. ಈ ವಾರ್ಡಿಗೆ ಈ ಹಿಂದೆ ಕೆಂಪೇಗೌಡ ವಾರ್ಡ್ ಎಂಬ ಹೆಸರಿತ್ತು. ಈಗ ಅದರಲ್ಲಿದ್ದ ಕೆಲವು ಐತಿಹಾಸಿಕ ಮಹತ್ವವುಳ್ಳ ಸ್ಥಳಗಳನ್ನು ಸೇರಿಸಿ ಯಲಹಂಕ ಓಲ್ಡ್‌ ಟೌನ್‌ ವಾರ್ಡ್‌ ಎಂದು ನಾಮಕರಣ ಮಾಡಲಾಗಿದೆ. ಮೊದಲಿನ ಚೌಡೇಶ್ವರಿ ವಾರ್ಡಿನ ಕೆಲ ಸ್ಥಳಗಳನ್ನು ರಾಜಾ ಕೆಂಪೇಗೌಡ ವಾರ್ಡಿಗೆ ಸೇರಿಸುವ ಮೂಲಕ ಅದಲು ಬದಲು ಮಾಡಲಾಗಿದೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್  ದೂರಿದರು. ಯಲಹಂಕ ಓಲ್ಡ್‌ ಟೌನ್‌ ವಾರ್ಡ್‌ ಹೆಸರನ್ನು ಬದಲಾಯಿಸಿ ಹಿಂದಿನಂತೆ ಚೌಡೇಶ್ವರಿ ವಾರ್ಡ್ ಎಂದೇ ಉಳಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.