ADVERTISEMENT

ಬೆಂಗಳೂರು: ಮತ್ತೆ ವಿವಾದದಲ್ಲಿ ‘89 ತ್ಯಾಜ್ಯ ಪ್ಯಾಕೇಜ್‌’

ಬಿಬಿಎಂಪಿ: 225 ವಾರ್ಡ್‌ಗಳ ಅಧಿಸೂಚನೆಯಾಗಿದ್ದರೂ 243 ವಾರ್ಡ್‌ಗಳಂತೆಯೇ ಟೆಂಡರ್‌

ಪ್ರಜಾವಾಣಿ ವಿಶೇಷ
Published 1 ಫೆಬ್ರುವರಿ 2024, 23:30 IST
Last Updated 1 ಫೆಬ್ರುವರಿ 2024, 23:30 IST
ಪಿ.ಆರ್.ರಮೇಶ್
ಪಿ.ಆರ್.ರಮೇಶ್   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗೆ 89 ಪ್ಯಾಕೇಜ್‌ಗಳಾಗಿ ಆಹ್ವಾನಿಸಲಾಗಿರುವ ಟೆಂಡರ್‌ ಮತ್ತೊಮ್ಮೆ ವಿವಾದಕ್ಕೆ ಒಳಗಾಗಿದೆ.

ಟೆಂಡರ್‌ನಲ್ಲಿ 243 ವಾರ್ಡ್‌ಗಳನ್ನು 89 ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಪ್ಯಾಕೇಜ್‌ನಲ್ಲಿ ಎರಡು–ಮೂರು ವಾರ್ಡ್‌ಗಳಿವೆ. ಆದರೆ, ಸರ್ಕಾರ 2023ರ ಸೆಪ್ಟೆಂಬರ್‌ 25ರಂದು ಹೊರಡಿಸಿದ ಅಂತಿಮ ಅಧಿಸೂಚನೆಯಲ್ಲಿ 243 ವಾರ್ಡ್‌ಗಳನ್ನು ರದ್ದುಪಡಿಸಿ, 225 ವಾರ್ಡ್‌ಗಳನ್ನು ರಚಿಸಿದೆ. ಹೀಗಾಗಿ, 243 ವಾರ್ಡ್‌ಗಳ ಪ್ಯಾಕೇಜ್‌ನಿಂದ ಪಾಲಿಕೆಗೆ ಆರ್ಥಿಕ ಹೊರೆ ಹೆಚ್ಚಾಗಲಿದೆ ಎಂಬ ಆರೋಪ ವ್ಯಕ್ತವಾಗಿದೆ.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ತರಾತುರಿಯರಲ್ಲಿ ₹541 ಕೋಟಿ ಮೊತ್ತದ ಟೆಂಡರ್‌ ಅಂತಿಮಗೊಳಿಸಲು ಬಿಎಸ್‌ಡಬ್ಲ್ಯುಎಂಎಲ್‌ ಯತ್ನಿಸುತ್ತಿದೆ ಎಂದು ದೂರಲಾಗಿದೆ.

ADVERTISEMENT

ಪ್ರಾಥಮಿಕವಾಗಿ ತ್ಯಾಜ್ಯ ಸಂಗ್ರಹ, ಸಾಗಣೆ, ನಿರ್ದಿಷ್ಟ ಸ್ಥಳದಲ್ಲಿ ಎರಡನೇ ಹಂತದ ತ್ಯಾಜ್ಯ ವಿಂಗಡಣೆ ಸೇರಿದಂತೆ ಎಲ್ಲ ರೀತಿಯ ತ್ಯಾಜ್ಯ ನಿರ್ವಹಣೆಗಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಕಂಪನಿ (ಬಿಎಸ್‌ಡಬ್ಲ್ಯುಎಂಎಲ್‌) 2022ರ ಸೆಪ್ಟೆಂಬರ್‌ನಲ್ಲಿ 89 ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆದಿತ್ತು. ಆಗ ತಾಂತ್ರಿಕ ಬಿಡ್‌ ತೆರೆದ ಸಂದರ್ಭದಲ್ಲಿ ಹಲವು ಬಿಡ್‌ದಾರರು ಅರ್ಹತೆ ಹೊಂದಿರಲಿಲ್ಲ ಎಂದು ಟೆಂಡರ್‌ ರದ್ದುಪಡಿಸಲಾಗಿತ್ತು.

2023ರ ಜನವರಿಯಲ್ಲಿ ಎರಡನೇ ಬಾರಿಗೆ ಟೆಂಡರ್‌ ಆಹ್ವಾನಿಸಿತ್ತು. ಅರ್ಹತಾ ಸುತ್ತಿನಲ್ಲಿ ಕೆಲವರನ್ನು ಕ್ಷುಲ್ಲಕ ಕಾರಣಕ್ಕಾಗಿ ಅನರ್ಹಗೊಳಿಸಿದ್ದರಿಂದ ವಿಷಯ ಕೋರ್ಟ್‌ ಹಂತಕ್ಕೆ ತಲುಪಿತು. ವಿಧಾನಸಭೆ ಚುನಾವಣೆ ನೀತಿ ಸಂಹಿತೆ, ವಾರ್ಡ್‌ ಮರುವಿಂಗಡಣೆ ಎಲ್ಲ ಮುಗಿದ ಮೇಲೆ ಆ ಟೆಂಡರ್‌ನ ಆರ್ಥಿಕ ಬಿಡ್‌ ತೆರೆಯಲು ಬಿಎಸ್‌ಡಬ್ಲ್ಯುಎಂಎಲ್‌ ಇದೀಗ ಮುಂದಾಗಿದೆ.

‘89 ಪ್ಯಾಕೇಜ್‌ಗಳಲ್ಲಿ 243 ವಾರ್ಡ್‌ಗಳಿಗೆ ₹541 ಕೋಟಿ ವೆಚ್ಚದಲ್ಲಿ ಟೆಂಡರ್‌ ಕರೆಯಲಾಗಿದೆ. ಇದೀಗ ಅದಕ್ಕೂ ಮಿಗಿಲಾಗಿ, ಶೇ 50ಕ್ಕೂ ಹೆಚ್ಚಿನ ಮೊತ್ತಕ್ಕೆ ಬಿಡ್‌ ಮಾಡಿದ್ದಾರೆ. ಅಷ್ಟು ಮೊತ್ತಕ್ಕೇ ಗುತ್ತಿಗೆ ನೀಡಲು ಬಿಎಸ್‌ಡಬ್ಲ್ಯುಎಂಎಲ್‌ ಮುಂದಾಗಿದೆ. ವಾರ್ಡ್‌ಗಳು ಕಡಿಮೆಯಾದರೆ ಹಣ ಕಡಿಮೆ ಆಗಬೇಕು. ಆದರೆ ಹೆಚ್ಚು ಹಣ ವ್ಯಯ ಮಾಡಲು ಮುಂದಾಗುತ್ತಿದೆ’ ಎಂದು ಗುತ್ತಿಗೆದಾರರು ದೂರಿದರು.

‘ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದ ಅಧಿಕಾರಿಗಳು ರೂಪಿಸಿದ್ದ 89 ಪ್ಯಾಕೇಜ್‌ಗಳ ಟೆಂಡರನ್ನೇ ಬಿಎಸ್‌ಡಬ್ಲ್ಯುಎಂಎಲ್‌ ಅಧಿಕಾರಿಗಳು ಅನುಮೋದಿಸಲು ಹೊರಟಿದ್ದಾರೆ. ಆಗಿನ ರಾಜಕಾರಣಿಗಳು ಅವರಿಗೆ ಅನುಕೂಲವಾಗುವ ಗುತ್ತಿಗೆದಾರರಿಗೆ ಟೆಂಡರ್‌ ನೀಡಲು ಪ್ಯಾಕೇಜ್‌ಗಳನ್ನು ರಚಿಸಿದ್ದರು. ಅದನ್ನು ಕಾಂಗ್ರೆಸ್‌ನವರೆಲ್ಲರೂ ವಿರೋಧಿಸಿದ್ದೆವು. ಇದೀಗ ಕಾಂಗ್ರೆಸ್‌ ಸರ್ಕಾರ ಕೂಡ ಬಿಎಸ್‌ಡಬ್ಲ್ಯುಎಂಎಲ್‌ ಅಧಿಕಾರಿಗಳ ಮೋಡಿಗೆ ಬಿದ್ದು, ಹಿಂದಿನ ಟೆಂಡರ್‌ಗೇ ಅನುಮೋದನೆ ನೀಡಲು ಮುಂದಾಗಿದೆ’ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಪಿ.ಆರ್‌. ರಮೇಶ್‌ ದೂರಿದರು.

‘ಸರ್ಕಾರ 243 ವಾರ್ಡ್‌ಗಳ ರಚನೆಯನ್ನು ವಾಪಸ್‌ ಪಡೆದು ಅಧಿಸೂಚಿಸಿದ ಮೇಲೆ, 243 ವಾರ್ಡ್‌ಗಳಂತೆಯೇ ಪ್ಯಾಕೇಜ್‌ ಟೆಂಡರ್‌ ಕರೆದಿರುವುದು ಅಕ್ರಮ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು ಇದನ್ನು ಪರಿಶೀಲಿಸಿ, ಪಾಲಿಕೆಗಾಗುವ ನೂರಾರು ಕೋಟಿ ಹೆಚ್ಚಿನ ಹೊರೆಯನ್ನು ತಪ್ಪಿಸಬೇಕು’ ಎಂದು ಆಗ್ರಹಿಸಿದರು.

ಹಿಂದಿದ್ದ ಅಧಿಕಾರಿಗಳಿಂದ ಟೆಂಡರ್‌!

‘ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಟೆಂಡರ್‌ ಪ್ಯಾಕೇಜ್‌ಗಳನ್ನು ಹಿಂದಿದ್ದ ಅಧಿಕಾರಿಗಳು ನಿರ್ಧರಿಸಿ ಪ್ರಕಟಿಸಿದ್ದಾರೆ. 243 ವಾರ್ಡ್‌ಗಳನ್ನು 89 ಪ್ಯಾಕೇಜ್‌ಗಳಲ್ಲಿ ವಿಂಗಡಿಸಲಾಗಿದೆ. ಇದನ್ನು 225 ವಾರ್ಡ್‌ಗಳಿಗೆ ಟೆಂಡರ್‌ ನಂತರ ಮರುಹೊಂದಾಣಿಕೆ ಮಾಡಬೇಕು. ವಾಹನಗಳ ಆಧಾರದಲ್ಲಿ ಟೆಂಡರ್‌ ಕರೆದಿರುವುದರಿಂದ ಅದನ್ನು ಗುತ್ತಿಗೆ ನೀಡಿದ ಮೇಲೆ ಪರಿಷ್ಕರಣೆ ಮಾಡಬೇಕು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಕಂಪನಿಯ (ಬಿಎಸ್‌ಡಬ್ಲ್ಯುಎಂಎಲ್‌) ಎಂಜಿನಿಯರ್‌ ತಿಳಿಸಿದರು.

₹541 ಕೋಟಿ ವೆಚ್ಚದ ಈ ಟೆಂಡರ್‌ ಪ್ಯಾಕೇಜ್‌ ಅವೈಜ್ಞಾನಿಕವಾಗಿದ್ದು ಇದನ್ನು ರದ್ದುಗೊಳಿಸಬೇಕು
–ಪಿ.ಆರ್‌. ರಮೇಶ್‌, ವಿಧಾನಪರಿಷತ್‌ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.