ADVERTISEMENT

‘ಬೇರೆಡೆಯಿಂದ ಟ್ಯಾಂಕರ್‌ ವ್ಯವಸ್ಥೆ’

ಕುಡಿಯುವ ನೀರು ಪೂರೈಕೆ: ಮರು ಟೆಂಡರ್ ಕರೆದ ಪಾಲಿಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 20:30 IST
Last Updated 10 ಏಪ್ರಿಲ್ 2019, 20:30 IST
   

ಬೆಂಗಳೂರು: ‘ನಗರದ ಜನತೆಯ ಕುಡಿಯುವ ನೀರಿನ ಬವಣೆ ನೀಗಬೇಕು ಎಂಬ ಉದ್ದೇಶದಿಂದ ನಾವು ಟ್ಯಾಂಕರ್‌ ಮೂಲಕ ಉಚಿತವಾಗಿ ನೀರು ಪೂರೈಕೆಗೆ ಮುಂದಾಗಿದ್ದೇವೆ. ನಗರದ ಟ್ಯಾಂಕರ್‌ ಮಾಲೀಕರು ಇದಕ್ಕೆ ಸಹಕರಿಸದಿದ್ದರೆ ಬೇರೆ ಊರುಗಳಿಂದ ಟ್ಯಾಂಕರ್‌ ತರಿಸಲೂ ಗೊತ್ತಿದೆ’

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಟ್ಯಾಂಕರ್‌ ಮಾಲೀಕರಿಗೆ ನೀಡಿರುವ ಎಚ್ಚರಿಕೆ ಇದು.

ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುವ ಸಲುವಾಗಿಪಾಲಿಕೆ ಮೊದಲ ಬಾರಿ ಟೆಂಡರ್‌ ಆಹ್ವಾನಿಸಿದಾಗ ವಾಹನ ಮಾಲೀಕರು ಯಾರೂ ಭಾಗವಹಿಸಿರಲಿಲ್ಲ. ಹಾಗಾಗಿ ಪಾಲಿಕೆ ಬುಧವಾರ ಮರುಟೆಂಡರ್‌ ಕರೆದಿದೆ. ಅರ್ಜಿ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಿದೆ.

ADVERTISEMENT

‘ನಗರದಲ್ಲಿರುವ ಟ್ಯಾಂಕರ್ ಮಾಲೀಕರನ್ನೇ ಬಳಸಿಕೊಂಡು ನೀರು ಪೂರೈಸುವುದು ನಮ್ಮ ಉದ್ದೇಶ. ಅವ್ಯವಹಾರಕ್ಕೆ ಆಸ್ಪದ ಕೊಡಬಾರದು ಎಂಬ ಕಾರಣಕ್ಕೆ ವಾಹನದಲ್ಲಿ ಜಿಪಿಎಸ್‌ ಅಳವಡಿಸಿರಬೇಕು ಎಂಬ ಷರತ್ತು ವಿಧಿಸಿದ್ದೇವೆ. ಇಟಿಎಸ್‌ ಕೋಟಿಂಗ್‌ ಇರುವ ಟ್ಯಾಂಕರ್‌ಗಳಿಗೆ ಮಾತ್ರ ಅವಕಾಶ ನೀಡಿರುವುದು ನೀರು ಕಲುಷಿತಗೊಳ್ಳಬಾರದು ಎಂಬ ದೃಷ್ಟಿಯಿಂದ. ಹಾಗಾಗಿ ಈ ಷರತ್ತುಗಳಲ್ಲಿ ವಿನಾಯಿತಿ ನೀಡಲು ಸಾಧ್ಯವಿಲ್ಲ’ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

‘ಈ ಬಾರಿಯೂ ನಗರದಲ್ಲಿರುವ ಟ್ಯಾಂಕರ್‌ ಮಾಲೀಕರು ಟೆಂಡರ್‌ನಲ್ಲಿ ಭಾಗವಹಿಸದಿದ್ದರೆ ಬೇರೆ ಕಡೆಯಿಂದ ವಾಹನಗಳನ್ನು ತರಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಕೆಲವು ಟ್ಯಾಂಕರ್‌ ಮಾಲೀಕರಿಗೆ ಟೆಂಡರ್‌ನಲ್ಲಿ ಭಾಗವಹಿಸುವ ಆಸಕ್ತಿ ಇದೆ. ನೀರು ಪೂರೈಕೆ ದಂದೆಯಲ್ಲಿ ತೊಡಗಿರುವ ಇತರ ವಾಹನ ಮಾಲೀಕರಿಂದ ಬೆದರಿಕೆ ಇರುವುದರಿಂದ ಅವರು ಟೆಂಡರ್‌ಗೆ ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಯಾರೂ ಭಯ ಪಡುವ ಅಗತ್ಯ ಇಲ್ಲ. ಏನೇ ಸಂದೇಹಗಳಿದ್ದರೂ ಇದೇ 15ರಂದು ನಡೆಯುವ ಬಿಡ್‌ ಪೂರ್ವ ಸಭೆಯಲ್ಲಿ ಮುಕ್ತವಾಗಿ ಚರ್ಚಿಸಬಹುದು’ ಎಂದು ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್‌ ಒಬ್ಬರು ತಿಳಿಸಿದರು.

‘ಟ್ಯಾಂಕರ್‌ ಮಾಲೀಕರಿಂದ ಸುಲಿಗೆ’

ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿರುವವರು ಮನಬಂದಂತೆ ದರ ವಿಧಿಸಿ ಸುಲಿಗೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ.

‘ನೀರಿನ ಬವಣೆಯನ್ನು ಟ್ಯಾಂಕರ್‌ ಮಾಲೀಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಒಂದು ಟ್ಯಾಂಕರ್‌ ನೀರಿಗೆ ₹ 1500ರಿಂದ ₹ 2500ರವರೆಗೂ ದರ ವಿಧಿಸುತ್ತಿದ್ದಾರೆ. ನಾವು ಚೌಕಾಸಿಗೆ ಮುಂದಾದರೆ ಟ್ಯಾಂಕರ್‌ ಮಾಲೀಕರು ಕರೆಯನ್ನೇ ಕಡಿತಗೊಳಿಸುತ್ತಾರೆ. ನಮಗೆ ನೀರು ಬೇಕೆಂದರೆ ಅವರು ಹೇಳಿದಷ್ಟು ದುಡ್ಡು ಕೊಡುವುದು ಅನಿವಾರ್ಯ. ಇದೊಂದು ದಂದೆಯಾಗಿಬಿಟ್ಟಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು’ ಎಂದು ರಾಜರಾಜೇಶ್ವರಿ ನಗರದ ಲೋಕೇಶ್‌ ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.