ಬಿಬಿಎಂಪಿ
ಬೆಂಗಳೂರು: ಬಿಬಿಎಂಪಿಯ ಪಶ್ಚಿಮ ವಲಯದ 44 ವಾರ್ಡ್‌ಗಳಲ್ಲಿ 354 ವಾಣಿಜ್ಯ ಮಳಿಗೆಗಳು ‘ವ್ಯಾಪಾರ ಪರವಾನಗಿ’ (ಟ್ರೇಡ್ ಲೈಸೆನ್ಸ್) ಇಲ್ಲದೆ ವಹಿವಾಟು ನಡೆಸುತ್ತಿವೆ.
2023ರ ಏಪ್ರಿಲ್‌ನಲ್ಲಿ 354 ಮಳಿಗೆಗಳು ‘ಟ್ರೇಡ್ ಲೈಸೆನ್ಸ್’ಗೆ ಪಡೆಯಲು ಅರ್ಜಿ ಸಲ್ಲಿಸಿದ್ದವು. ಆದರೆ, ಈ ವಾಣಿಜ್ಯ ಮಳಿಗೆಗಳಿಗೆ ವಲಯ ಆರೋಗ್ಯ ಅಧಿಕಾರಿ ಡಾ. ಸವಿತಾ ಅವರು ಪರವಾನಗಿ ನೀಡದೆ, ಅರ್ಜಿ ತಿರಸ್ಕರಿಸಿದ್ದರು. ಆದರೂ ಈ ಮಳಿಗೆಗಳು ಕಳೆದ ವರ್ಷ ಏಪ್ರಿಲ್‌ನಿಂದಲೇ ವಹಿವಾಟು ನಡೆಸುತ್ತಿವೆ. ಪಾಲಿಕೆಗೆ ಪರವಾನಗಿಯ ಶುಲ್ಕವೂ ಬಂದಿಲ್ಲ, ಅಕ್ರಮವಾಗಿ ವಹಿವಾಟು ನಡೆಯುತ್ತಿದ್ದರೂ ಅವರ ಮೇಲೆ ಕ್ರಮ ತೆಗೆದುಕೊಂಡಿಲ್ಲ.
‘44 ವಾರ್ಡ್‌ಗಳಲ್ಲಿ ವಾಣಿಜ್ಯ ಮಳಿಗೆಗಳು, ಹೋಟೆಲ್‌ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಪರವಾನಗಿ ಇಲ್ಲದೆಯೇ ವಹಿವಾಟುಗಳನ್ನು ನಡೆಸುತ್ತಲೇ ಇವೆ. ಅವುಗಳ ಮಾಲೀಕರಿಗೆ ಪರವಾನಗಿ ಕೊಟ್ಟಿದ್ದರೆ ಪಾಲಿಕೆಗೆ ನಾಲ್ಕೈದು ಕೋಟಿಯಷ್ಟು ಆದಾಯವಾದರೂ ಬರುತ್ತಿತ್ತು. ಅದನ್ನೂ ನೀಡದ ಡಾ. ಸವಿತಾ ಅವರು, ಅಕ್ರಮವಾಗಿ ನಡೆಯುತ್ತಿರುವ ಮಳಿಗೆಗಳ ಮೇಲೆ ಕ್ರಮವನ್ನೂ ಕೈಗೊಂಡಿಲ್ಲ. ಆದ್ದರಿಂದ ಆರೋಗ್ಯ ಅಧಿಕಾರಿ ಮೇಲೆ ಕ್ರಮ ಕೈಗೊಂಡು, ಪಾಲಿಕೆಗೆ ಉಂಟಾಗಿರುವ ನಷ್ಟವನ್ನು ಅವರಿಂದ ವಸೂಲಿ ಮಾಡಬೇಕು’ ಎಂದು ಬಿಬಿಎಂಪಿಯ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್ ಅವರು ಆರೋಗ್ಯ ಇಲಾಖೆಯ ವಿಶೇಷ ಆಯುಕ್ತರು ಮತ್ತು ವಲಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
354 ಅರ್ಜಿಗಳ ಸಂಖ್ಯೆ, ಸಲ್ಲಿಸಿದ ದಿನಾಂಕ, ರದ್ದಾದ ದಿನ, ಯಾವ ಲಾಗಿನ್‌ನಿಂದ ರದ್ದಾಗಿದೆ ಎಂಬ ಎಲ್ಲ ವಿವರಗಳನ್ನು ‘ಮಾಹಿತಿ ಹಕ್ಕು ಕಾಯ್ದೆಯಡಿ’ ಪಡೆದಿರುವ ರಮೇಶ್ ಅವರು, ಅವುಗಳ ಸಹಿತ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.