ಬಿಬಿಎಂಪಿ
ಬೆಂಗಳೂರು: ದುಬಾರಿ ಬೆಲೆಯ 20 ಕಸ ಗುಡಿಸುವ (ಮೆಕ್ಯಾನಿಕಲ್ ಸ್ವೀಪಿಂಗ್) ಯಂತ್ರಗಳನ್ನು ವಿದೇಶದಿಂದ ಬಾಡಿಗೆಗೆ ಪಡೆಯಲು ಬಿಬಿಎಂಪಿ ಮುಂದಾಗಿದೆ. ಅದಕ್ಕಾಗಿ ಮುಂದಿನ ಏಳು ವರ್ಷಕ್ಕೆ ₹ 764 ಕೋಟಿ ವ್ಯಯಿಸಲು ನಿರ್ಧರಿಸಿದೆ.
ಈ ಯಂತ್ರಗಳ ಮೂಲಕ ಕಸ ಗುಡಿಸಲು ಪ್ರತಿ ಕಿಲೋಮೀಟರ್‌ಗೆ ಅಂದಾಜು ₹ 1,000 ಬಾಡಿಗೆ ದರ ನಿಗದಿಪಡಿಸಬಹುದು ಎಂದು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿರುವ ಆರ್‌ಐಟಿಇಎಸ್ ಲಿಮಿಟೆಡ್ ಸಂಸ್ಥೆ ತಿಳಿಸಿದೆ.
ರಸ್ತೆಗಳನ್ನು ದೂಳಿನಿಂದ ಮುಕ್ತಗೊಳಿಸಲು 2024-25ರ ಬಜೆಟ್‌ನಲ್ಲಿ ಬಿಬಿಎಂಪಿಯು ‘ಬ್ರ್ಯಾಂಡ್ ಬೆಂಗಳೂರು’ ಕಾರ್ಯಕ್ರಮದ ಅಡಿಯಲ್ಲಿ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ ಖರೀದಿಗೆ ₹ 30 ಕೋಟಿ ಮೀಸಲಿಟ್ಟಿತ್ತು. ಇದು ಮುಂದಿನ ಆರ್ಥಿಕ ವರ್ಷದಲ್ಲಿ ದುಪ್ಪಟ್ಟಾಗಲಿದೆ ಎಂದು ಬಿಬಿಎಂಪಿ ಅಂದಾಜಿಸಿದೆ. ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಕ್ಕಾಗಿ ಮೊದಲ ಎರಡು ವರ್ಷ ₹ 60 ಕೋಟಿ ವ್ಯಯವಾಗುತ್ತದೆ. ಆನಂತರದ ಐದು ವರ್ಷಗಳಲ್ಲಿ ಈ ವೆಚ್ಚ ಪ್ರತಿ ವರ್ಷ ಮೂರು ಪಟ್ಟು ಹೆಚ್ಚಾಗಲಿದೆ ಎಂದು ಅಂದಾಜು ಮಾಡಲಾಗಿದೆ.
2017-18ನೇ ಸಾಲಿನಲ್ಲಿ ಖರೀದಿಸಿದ್ದ 26 ಯಂತ್ರಗಳು ಪ್ರಸ್ತುತ ಬಳಕೆಯಲ್ಲಿವೆ. ಹೊಸ ಯಂತ್ರಗಳನ್ನು ಖರೀದಿಸಲು ಪೌರಕಾರ್ಮಿಕರು ಪ್ರಸ್ತಾವ ಮುಂದಿಟ್ಟಿದ್ದರು. ಪ್ರತಿ ಯಂತ್ರಕ್ಕೆ ₹ 1.8 ಕೋಟಿ ನೀಡಬೇಕಿದ್ದು, ಪ್ರತಿ ತಿಂಗಳ ಅಂದಾಜು ವೆಚ್ಚ ₹6 ಲಕ್ಷ ವ್ಯಯವಾಗುತ್ತದೆ. ಈ ಯಂತ್ರಗಳು ಭಾರತದಲ್ಲಿಯೇ ತಯಾರಾಗುವಂಥವು. ವೆಚ್ಚವೂ ಕಡಿಮೆಯಾಗಿದೆ. ಆಮದು ಮಾಡಿಕೊಳ್ಳಲು ನಿರ್ಧರಿಸಿರುವ ಯಂತ್ರಗಳ ವೆಚ್ಚವು ಭಾರತದ ಯಂತ್ರಗಳಿಗಿಂತ ಹಲವಾರು ಪಟ್ಟು ಅಧಿಕವಾಗಿದೆ. ಈ ಆರ್ಥಿಕ ಹೊರೆಯನ್ನು ನಿಭಾಯಿಸಲು ಬಿಬಿಎಂಪಿಗೆ ಕಷ್ಟವಾಗಬಹುದು ಎಂದು ಸಾರ್ವಜನಿಕರು ಪ್ರತಿಕ್ರಿಯಿಸಿದ್ದಾರೆ.
ರಸ್ತೆಗಳನ್ನು ಗುಡಿಸಲು 17 ಸಾವಿರ ಉದ್ಯೋಗಿಗಳಿದ್ದಾರೆ. ಅವರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಅಲ್ಲದೇ ವಿದೇಶಿ ಯಂತ್ರಗಳು ಭಾರತದ ರಸ್ತೆಗಳಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡದೇ ಆಮದು ಮಾಡಿಕೊಳ್ಳಲು ಮುಂದಾಗುವ ಅಗತ್ಯ ಇರಲಿಲ್ಲ. ಇದು ಮೇಕ್ ಇನ್ ಇಂಡಿಯಾಕ್ಕೆ ವಿರುದ್ಧವಾದ ಕ್ರಮ ಎಂದು ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಇದು ಆರ್ಥಿಕ ಮಿತವ್ಯಯಕ್ಕೆ ಪೂರಕವಾದ ಕ್ರಮ’ ಎಂದು ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಈ ಪ್ರಸ್ತಾವವನ್ನು ಸಮರ್ಥಿಸಿಕೊಂಡಿದ್ದಾರೆ.
‘ರೈಟ್ಸ್ ಲಿಮಿಟೆಡ್ ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನಂತಹ ಎರಡು ಸಲಹಾ ಸಂಸ್ಥೆಗಳಿಂದ ಬೆಲೆ ಕುರಿತು ಅಧ್ಯಯನ ಮಾಡಲಾಗಿದೆ. ಪ್ರಮುಖ ರಸ್ತೆಗಳನ್ನು ದೂಳು ಮುಕ್ತ ಮಾಡಲು ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳ ಅಗತ್ಯವಿದೆ’ ಎಂದು ತಿಳಿಸಿದರು.
‘ದೂಳು ಗುಡಿಸಲು ₹ 764 ಕೋಟಿ ವೆಚ್ಚ ಮಾಡುವ ಅಗತ್ಯವಿದೆಯೇ’ ಎಂದು ಸಮಾಜಸೇವಕ ವಿ. ರಾಮಪ್ರಸಾದ್ ಅಚ್ಚರಿ ವ್ಯಕ್ತಪಡಿಸಿದರು.
ಪ್ರಾಯೋಗಿಕ ಅಧ್ಯಯನ ಎಲ್ಲಿ ನಡೆದಿದೆ? ಈ ವೆಚ್ಚವನ್ನು ಸರಿ ಹೊಂದಿಸಲು ಪೌರಕಾರ್ಮಿಕರ ಸಂಖ್ಯೆಯನ್ನು ಕಡಿಮೆಗೊಳಿಸುವ ಯೋಜನೆ ಏನಾದರೂ ಇದೆಯೇ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.