ADVERTISEMENT

ಗ್ರೇಡ್‌ ಸಪರೇಟರ್‌ಗೆ ಜಮೀನು: ದೇವಸ್ಥಾನ ತೆರವಿಗೆ ವಿರೋಧ

ಬೆಂಗಳೂರು ವಿಶ್ವವಿದ್ಯಾಲಯದ ಜಾಗದಲ್ಲಿ ಬಿಬಿಎಂಪಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2022, 21:46 IST
Last Updated 20 ಫೆಬ್ರುವರಿ 2022, 21:46 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಗ್ರೇಡ್‌ ಸಪರೇಟರ್ ನಿರ್ಮಿಸಲು ಬೆಂಗಳೂರು ವಿಶ್ವವಿದ್ಯಾಲಯದ ಜಾಗದಲ್ಲಿರುವ ಗಣೇಶ ದೇವಸ್ಥಾನ ತೆರವುಗೊಳಿಸಲು ಮುಂದಾಗಿರುವ ಕ್ರಮಕ್ಕೆ ಕೆಲ ಉದ್ಯೋಗಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನಕ್ಕೆ ಯಾವುದೇ ರೀತಿ ಹಾನಿಯಾಗದಂತೆ ಖಾಲಿ ಇರುವ ಜಮೀನಿನಲ್ಲಿ ಮಾತ್ರ ಗ್ರೇಡ್‌ ಸಪರೇಟರ್‌ ನಿರ್ಮಾಣ ಕಾರ್ಯ ಕೈಗೊಳ್ಳಬೇಕು ಎಂದು ವಿಶ್ವವಿದ್ಯಾಲಯ ಷರತ್ತು ವಿಧಿಸಿತ್ತು. ಆದರೆ, ಬಿಬಿಎಂಪಿ ಷರತ್ತು ಉಲ್ಲಂಘಿಸುತ್ತಿದೆ ಎಂದು ದೂರಿದ್ದಾರೆ.

ಕೆಂಗೇರಿ ಹೊರವರ್ತುಲ ರಸ್ತೆಯಲ್ಲಿರುವ ಉಲ್ಲಾಳ ಮುಖ್ಯ ರಸ್ತೆ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಮುಖ್ಯ ರಸ್ತೆಯ ಜಂಕ್ಷನ್‌ನಲ್ಲಿ ಗ್ರೇಡ್‌ ಸಪರೇಟರ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಸುಪರ್ದಿಯಲ್ಲಿರುವ ಮಲ್ಲತ್ತಹಳ್ಳಿ ಗ್ರಾಮದಲ್ಲಿನ ಒಟ್ಟು 6095.14 ಚ.ಮೀ. (1 ಎಕರೆ 20.23 ಗುಂಟೆ) ವಿಸ್ತೀರ್ಣದ ಸರ್ಕಾರಿ ಗೋಮಾಳ ಜಾಗವನ್ನು ಬಿಬಿಎಂಪಿ ಪಡೆದಿತ್ತು. ಈ ಜಮೀನನ್ನು ಬಿಬಿಎಂಪಿಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಹಲವು ಷರತ್ತುಗಳನ್ನು ವಿಧಿಸಿತ್ತು.

ADVERTISEMENT

‘ಜಮೀನಿನ ಸ್ವಾಧೀನ ಅಥವಾ ಮಾಲೀಕತ್ವವನ್ನು ವಿಶ್ವವಿದ್ಯಾಲಯವೇ ಉಳಿಸಿಕೊಳ್ಳಲಿದೆ. ಗ್ರೇಡ್‌ ಸಪರೇಟರ್‌ ನಿರ್ಮಾಣಕ್ಕಾಗಿ ತೆರವುಗೊಳಿಸಬೇಕಾಗುವ ಹತ್ತು ವಸತಿ ಗೃಹಗಳಿಗೆ ಬದಲಾಗಿ ಬೆಂಗಳೂರು ವಿಶ್ವವಿದ್ಯಾಲಯವೇ ಗುರುತಿಸಿದ ಜಾಗದಲ್ಲಿ ಬಿಬಿಎಂಪಿ ತನ್ನ ಸ್ವಂತ ಖರ್ಚಿನಲ್ಲಿ ನಿರ್ಮಿಸಿ ಹಸ್ತಾಂತರಿಸಬೇಕು’ ಎಂದು ಕುಲಸಚಿವರು ಸೂಚಿಸಿದ್ದರು.

ಜತೆಗೆ, ‘ಗ್ರೇಡ್‌ ಸಪರೇಟರ್‌ ನಿರ್ಮಾಣಕ್ಕಾಗಿ ಪ್ರಸ್ತಾಪಿಸಲಾಗಿರುವ ಜಮೀನಿನಲ್ಲಿರುವ ದೇವಸ್ಥಾನದ ಕಟ್ಟಡಕ್ಕೆ ಹಾನಿಯಾಗದಂತೆ ಖಾಲಿ ಇರುವ ಜಮೀನಿನಲ್ಲಿ ಮಾತ್ರ ಉದ್ದೇಶಿತ ನಿರ್ಮಾಣ ಕಾರ್ಯ ಕೈಗೊಳ್ಳಬೇಕು. ಈ ಯೋಜನೆಗೆ ತೆರವುಗೊಳಿಸಬೇಕಾಗುವ ದೇವಸ್ಥಾನ ಜಾಗದ ತಡೆಗೋಡೆಯನ್ನು ಪಾಲಿಕೆ ವತಿಯಿಂದಲೇ ನಿರ್ಮಾಣ ಮಾಡತಕ್ಕದ್ದು’ ಎಂದು ಕುಲಸಚಿವರು 2021ರ ಸೆ.17ರಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಬರೆದಿದ್ದ ಪತ್ರದಲ್ಲಿ ಉಲ್ಲೇಖಿಸಿದ್ದರು.

ಉನ್ನತ ಶಿಕ್ಷಣ ಇಲಾಖೆಯು ಸಹ ದೇವಸ್ಥಾನದ ಕಟ್ಟಡಕ್ಕೆ ಹಾನಿ ಮಾಡದಂತೆ 2021ರ ಜನವರಿ 25ರಂದು ಸಹ ಈ ಬಗ್ಗೆ ನಿರ್ದೇಶನ ನೀಡಿತ್ತು.

‘ಸರ್ಕಾರ ಮತ್ತು ವಿಶ್ವವಿದ್ಯಾಲಯದ ಷರತ್ತುಗಳನ್ನು ಬಿಬಿಎಂಪಿ ಗಮನಿಸುತ್ತಿಲ್ಲ. ಸುಮಾರು 20 ವರ್ಷಗಳ ಹಿಂದೆ ಉದ್ಯೋಗಿಗಳು ಸೇರಿ ಗಣೇಶ ದೇವಸ್ಥಾನವನ್ನು ನಿರ್ಮಿಸಿದ್ದರು. ದೇವಸ್ಥಾನದ ಆವರಣದ ಗೋಡೆ ಮಾತ್ರ ಒಡೆಯಬಹುದು ಎಂದು ಸೂಚಿಸಲಾಗಿತ್ತು. ಆದರೆ, ಬಿಬಿಎಂಪಿ ತರಾತುರಿಯಲ್ಲಿ ದೇವಸ್ಥಾನ ತೆರವುಗೊಳಿಸಲು ಮುಂದಾಗಿದೆ’ ಎಂದು ಉದ್ಯೋಗಿಗಳು ದೂರಿದ್ದಾರೆ.

‘ಖಾಸಗಿ ಜಾಗ ಪಡೆದರೆ ಹೆಚ್ಚಿನ ಪರಿಹಾರ ನೀಡಬೇಕು ಎನ್ನುವ ಉದ್ದೇಶದಿಂದ ವಿಶ್ವವಿದ್ಯಾಲಯದ ಜಾಗವನ್ನು ಪಡೆಯಲು ಬಿಬಿಎಂಪಿ ಮುಂದಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಷರತ್ತಿನಂತೆ ವಸತಿ ಗೃಹಗಳನ್ನು ಸಹ ಇನ್ನೂ ನಿರ್ಮಿಸಿಲ್ಲ. ಆದರೆ, ಕಾಮಗಾರಿಯನ್ನು ಆರಂಭಿಸಬೇಕಾಗಿರುವುದರಿಂದ ಶೀಘ್ರ ಬಾಡಿಗೆ ಮನೆಗಳಿಗೆ ಸ್ಥಳಾಂತರವಾಗುವಂತೆ ಒತ್ತಡ ಹೇರಲಾಗುತ್ತಿದೆ’ ಎಂದು ದೂರಿದ್ದಾರೆ.

‘ಅದ್ಭುತವಾದ ದೇವಸ್ಥಾನ ನಿರ್ಮಿಸಲಾಗುವುದು’

‘ಈಗಿರುವ ದೇವಸ್ಥಾನದ ಬದಲು ಹೊಸದಾಗಿ ಭವ್ಯವಾದ ಮತ್ತು ಅದ್ಭುತವಾದ ಗಣೇಶ ದೇವಸ್ಥಾನವನ್ನು ನಿರ್ಮಿಸಿಕೊಡಲಾಗುವುದು’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಹೊಸ ದೇವಸ್ಥಾನವನ್ನು ಕಲ್ಲಿನಿಂದ ನಿರ್ಮಿಸಿಕೊಡಲಾಗುವುದು. ಈ ಬಗ್ಗೆ ಯಾವುದೇ ಅನುಮಾನಗಳು ಬೇಡ’ ಎಂದು ಸ್ಪಷ್ಟಪಡಿಸಿದ್ದಾರೆ.

‘10 ವಸತಿ ಗೃಹಗಳನ್ನು ಹೊಸದಾಗಿ ನಿರ್ಮಿಸಿಕೊಡಲಾಗುವುದು. ಈಗಿರುವ ವಸತಿ ಗೃಹಗಳು ಒಂದು ಕೊಠಡಿಯ ಚಿಕ್ಕ ಮನೆಗಳಿವೆ. ಇವುಗಳ ಬದಲು ಎರಡು ಕೊಠಡಿಯ ದೊಡ್ಡ ಮನೆಗಳನ್ನು ನಿರ್ಮಿಸಿಕೊಡಲು ಉದ್ದೇಶಿಸಲಾಗಿದೆ. ಇವುಗಳನ್ನು ನಿರ್ಮಿಸಲು ಆರು ತಿಂಗಳು ಬೇಕಾಗುವುದರಿಂದ ಸದ್ಯ ಖಾಲಿ ಇರುವ ವಸತಿ ಗೃಹಗಳಿಗೆ ಸ್ಥಳಾಂತರವಾಗುವಂತೆ ಉದ್ಯೋಗಿಗಳಿಗೆ ಸೂಚಿಸಲಾಗಿದೆ. ಒಂದು ವೇಳೆ, ಅಲ್ಲಿಗೆ ತೆರಳು ಇಷ್ಟವಾಗದಿದ್ದಲ್ಲಿ ಬಾಡಿಗೆ ಮನೆಗೆ ಸ್ಥಳಾಂತರವಾಗುವಂತೆ ಕೋರಲಾಗಿದೆ. ಮನೆ ಬಾಡಿಗೆ ಮತ್ತು ಮುಂಗಡವನ್ನು ಸಹ ಬಿಬಿಎಂಪಿ ಪಾವತಿಸಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.