ADVERTISEMENT

ಹೆಬ್ಬಾಳ: ಬೇಕಾಗಿದೆ ಬಿಎಂಟಿಸಿ ಬಸ್‌ ನಿಲ್ದಾಣ

ಹೆಬ್ಬಾಳ ಮೇಲ್ಸೇತುವೆ ಕೆಳಗಿನ ಚೌರಾಸ್ತಾ ಗೌಜು

ಬಿ.ಎಸ್.ಷಣ್ಮುಖಪ್ಪ
Published 15 ಏಪ್ರಿಲ್ 2022, 1:47 IST
Last Updated 15 ಏಪ್ರಿಲ್ 2022, 1:47 IST
ಧನಲಕ್ಷ್ಮಿ
ಧನಲಕ್ಷ್ಮಿ   

ಬೆಂಗಳೂರು: 'ಕೃಷಿ ವಿಶ್ವವಿದ್ಯಾಲಯದ ಬೃಹತ್‌ ಕ್ಯಾಂಪಸ್‌ ಪ್ರದೇಶ ಮತ್ತು ಸುಂದರ ಹೆಬ್ಬಾಳ ಕೆರೆಯ ಮಧ್ಯದಲ್ಲಿರುವ ಮೇಲ್ಸೇತುವೆಯ ಕೆಳಗೆ ಕೃಷಿ ವಿವಿ ಜಾಗದಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣವೊಂದು ನಿರ್ಮಾಣವಾದರೆ ಅತ್ಯಂತ ಉಪಕಾರವಾಗುತ್ತದೆ‘ ಎಂಬುದು ಸ್ಥಳೀಯರ ಹಕ್ಕೊತ್ತಾಯ.

ಬಳ್ಳಾರಿ ರಸ್ತೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಮಾರ್ಗಮಧ್ಯೆ ಸಿಗುವ ಹೆಬ್ಬಾಳ ಬಿಎಂಟಿಸಿ ಬಸ್‌ ನಿಲ್ದಾಣ ಅತ್ಯಂತ ಜನನಿಬಿಡ. ಈ ಬಸ್‌ ನಿಲ್ದಾಣದಿಂದಲೇ ಮುಂದಕ್ಕೆ ಸಾಗುವ ಮೇಲ್ಸೇತುವೆ ಮತ್ತು ಇದರ ಕೆಳಭಾಗವೂ ಸಾಕಷ್ಟು ಪ್ರತಿಷ್ಠಿತ ಪ್ರದೇಶಗಳನ್ನು ಸಂಧಿಸುವ ಬಳಸು ದಾರಿ.

ವಿಮಾನ ನಿಲ್ದಾಣ ಮಾರ್ಗದಿಂದ ಮೇಲ್ಸೇತುವೆ ಮೇಲೆ ಹಾದು ಭೂಪಸಂದ್ರ ಕಡೆ ಸಾಗಬೇಕಾದ ವಾಹನಗಳು ಎಡಕ್ಕೆ ಸರ್ವಿಸ್‌ ರಸ್ತೆಯಲ್ಲಿ ಇಳಿದರೆ ಮಸ್ಜಿದ್‌ ಎ ಅಜಂ ಮದರಸಾದ ಅರೇಬಿಯಾ ಶಂಶುಲ್‌ ಉಲುಮ್‌ ಮಸೀದಿ ಸಿಗುತ್ತದೆ. ಇದರ ಎದುರು ನಿಂತರೆ ಅಲ್ಲೊಂದು ಪುಟ್ಟ ಜಗತ್ತೇ ಅನಾವರಣವಾಗುತ್ತದೆ.

ADVERTISEMENT

ಸಂಪರ್ಕ ಕೇಂದ್ರ: ಚೌರಾಸ್ತಾ (ನಾಲ್ಕು ರಸ್ತೆಗಳು ಕೂಡುವ ಜಾಗ) ಸ್ವರೂಪದ ಈ ಕೇಂದ್ರವು ಪಶ್ಚಿಮಕ್ಕೆ ಭೂಪಸಂದ್ರ, ಪೂರ್ವಕ್ಕೆ ವಿ.ನಾಗೇನಹಳ್ಳಿ, ಉತ್ತರಕ್ಕೆ ವಿಮಾನ ನಿಲ್ದಾಣ ಹಾಗೂ ದಕ್ಷಿಣಕ್ಕೆ ಮೇಖ್ರಿ ಸರ್ಕಲ್‌ ಕಡೆ ಸಂಪರ್ಕ ಕಲ್ಪಿಸುತ್ತದೆ. ಈ ಮಸೀದಿಯ ನೂರು ಮೀಟರ್‌ ಅಂತರದಲ್ಲೇ ರೈಲ್ವೇ ಹಳಿಯೂ ಇದ್ದು ಪಾದಚಾರಿಗಳಿಗೆ ಇದೇ ಸಂಪರ್ಕ ಬಿಂದು.

ಈ ಪ್ರದೇಶದಲ್ಲಿ ಬಿಎಂಟಿಸಿಯ ಕೆ–2 ಹಾಗೂ 279ರ ಸಂಖ್ಯೆಯ ಬಸ್‌ಗಳೂ ನಿಲ್ಲುತ್ತವೆ. ಅಷ್ಟೇಕೆ ಇದು ರಾಜರಾಜೇಶ್ವರಿ ಆಟೊ ರಿಕ್ಷಾ ನಿಲ್ದಾಣವೂ ಕೂಡಾ. ತರಕಾರಿ ಮಾರುಕಟ್ಟೆ, ಬಟ್ಟೆ ಬರೆ ವ್ಯಾಪಾರಿಗಳು, ಸರಕು ಸಾಗಣೆ ವಾಹನಗಳು, ಟ್ಯಾಕ್ಸಿ ಕಾರುಗಳು ನಿಲ್ಲುವುದಕ್ಕೂ ಜಾಗವೇ ಆಗಿದೆ...!

ಸಂಶೋಧನಾ ಕೇಂದ್ರಗಳು: ಈ ಬಸ್‌ಗಳು ನಿಲ್ಲುವುದು ಸೀದಾ ಮೇಲ್ಸೇತುವೆ ಕೆಳಗಿನ ಜಾಗದಲ್ಲಿ. ಇದರಿಂದಾಗಿ ಇದು ಸದಾ ದಟ್ಟಣೆಯ ತಾಣ. ಈ ತಾಣದ ಎದುರಿಗೆ, ಒಂದೆಡೆ ಶತಮಾನೋತ್ಸವದ ಸಂಭ್ರಮ ಕಂಡಿರುವ ಹೆಬ್ಬಾಳ ಕೃಷಿ ಶಾಲೆಯ ಮುಖ್ಯ ಸಂಶೋಧನಾ ಕೇಂದ್ರವಿದ್ದರೆ ಮತ್ತೊಂದೆಡೆ ಬೀಜ ಪರೀಕ್ಷಾ ಪ್ರಯೋಗಾಲಯವಿದೆ.

’ಕೇಂದ್ರೀಯ ಅಬಕಾರಿ ಬಡಾವಣೆಗೆ ತಿರುವು ಪಡೆದುಕೊಳ್ಳುವ ತನಕ ಮತ್ತು ಭೂಪಸಂದ್ರ ಮುಖ್ಯ ರಸ್ತೆಗೆ ಸಾಗುವ ಮಧ್ಯದಲ್ಲಿ ಎಲ್ಲಾದರೂ ಒಂದೆಡೆ ಕೃಷಿ ವಿಶ್ವವಿದ್ಯಾಲಯದ ಕಿಂಚಿತ್‌ ಭಾಗದಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣ ಮಾಡಿದರೆಈ ಭಾಗದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಕಡಿಮೆ ಮಾಡಬಹುದು‘ ಎನ್ನುತ್ತಾರೆ ಇಲ್ಲಿಂದ ಪ್ರತಿನಿತ್ಯ ಸಿಟಿ ಸಿವಿಲ್‌ ಕೋರ್ಟ್‌ಗೆ ಸಂಚರಿಸುವ ಉದ್ಯೋಗಿ ಬಿ. ರೂಪಾ.

ರಾಜರಾಜೇಶ್ವರಿ ಆಟೊ ನಿಲ್ದಾಣದ ರಿಕ್ಷಾ ಚಾಲಕ ವಾಸುದೇವ್‌, ’ಇಲ್ಲಿಂದ ವಿದ್ಯಾನಿಕೇತನ ಶಾಲೆಗೆ ಹೋಗುವ ಮಕ್ಕಳು, ಭೂಪಸಂದ್ರ, ನಾಗಶೆಟ್ಟಿಹಳ್ಳಿ ಮತ್ತು ಸಂಜಯನಗರದ ಕಡೆ ಸಾಗುವವರು ಈ ದಾರಿಯನ್ನು ಬಳಸುತ್ತಾರೆ. ಆದರೆ, ಇಲ್ಲಿ ಬಸ್‌ಗಳು ಯಾವಾಗಲೂ ರಸ್ತೆ ಮಧ್ಯದಲ್ಲೇ (ಮೇಲ್ಸೇತುವೆ ಕೆಳಗೆ) ನಿಂತಿರಬೇಕಾಗುತ್ತದೆ‘ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.