ADVERTISEMENT

ನಾಗರಿಕ ಸೇವೆ ಗುಣಮಟ್ಟದ ಕಡೆ ಬಿಡಿಎ ಗಮನಹರಿಸಲಿ: ಶಾಸಕ ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 15:58 IST
Last Updated 9 ಸೆಪ್ಟೆಂಬರ್ 2025, 15:58 IST
   

ಬೆಂಗಳೂರು: ‘ಕರ್ನಾಟಕ ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದ (ಕೆ–ರೇರಾ) ವ್ಯಾಪ್ತಿಯಿಂದ ತನ್ನನ್ನು ಹೊರಗಿಡಬೇಕು ಎಂಬ ಅರ್ಥಹೀನ ಮತ್ತು ದಿಕ್ಕು ತಪ್ಪಿಸುವ ವಾದ ಮುಂದುವರಿಸುವ ಬದಲು, ನಾಗರಿಕ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವ ಕಡೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಗಮನಹರಿಸಬೇಕು’ ಎಂದು ಶಾಸಕ ಎಸ್.ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ.

ಈ ಸಂಬಂಧ ರೇರಾ ಅಧ್ಯಕ್ಷ ರಾಕೇಶ್ ಸಿಂಗ್ ಅವರಿಗೆ ಪತ್ರ ಬರೆದಿರುವ ಅವರು, ‘ಆಧುನಿಕ ನಗರವನ್ನು ನಿರ್ಮಿಸುವ ಅಥವಾ ಯೋಜನೆಗಳನ್ನು ರೂಪಿಸುವ ಅಥವಾ ವಸತಿ ಬಡಾವಣೆಗಳನ್ನು ನಿರ್ಮಿಸುವ ಕಾರ್ಯವನ್ನು ನಿಸ್ಸಂಶಯವಾಗಿ ನಿರ್ವಹಿಸುತ್ತಿದೆಯೇ? ಇಲ್ಲ ಖಾಸಗಿ ಡೆವಲಪರ್‌ಗಳ ರೀತಿ ಲಾಭದ ಉದ್ದೇಶವನ್ನು ಹೊಂದಿ ಫ್ಲ್ಯಾಟ್‌ಗಳನ್ನು ಮರಾಟ ಮಾಡಿ ಲಾಭಗಳಿಸುವ ಸಂಸ್ಥೆಯಾಗಿ ಉಳಿದುಕೊಂಡಿದೆಯೇ? ಎಂಬುದರ ಬಗ್ಗೆ ಜನರಿಗೆ ಸ್ಪಷ್ಟಪಡಿಸಬೇಕು’ ಎಂದು ಬಿಡಿಎ ಅನ್ನು ಒತ್ತಾಯಿಸಿದ್ದಾರೆ. 

‘ಬಿಡಿಎ ಮಾರಾಟ ಮಾಡುವ ನಿವೇಶನ ಮತ್ತು ಫ್ಲ್ಯಾಟ್‌ಗಳ ಬೆಲೆಯು ಖಾಸಗಿ ಡೆವಲಪರ್‌ಗಳು ಅಭಿವೃದ್ಧಿಪಡಿಸಿದ ನಿವೇಶನಗಳ ಬೆಲೆಗೆ ಸಮಾನವಾಗಿರುತ್ತದೆ. ಕೆಲವೊಮ್ಮ ಖಾಸಗಿ ನಿವೇಶನಗಳ ದರಕ್ಕಿಂತಲ್ಲೂ ಹೆಚ್ಚು. ಕಾರ್ಯ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಖಾಸಗಿ ಡೆಲವಪರ್ಸ್‌ಗಳಿಗಿಂತ ತೀರಾ ಹಿಂದೆ ಬಿದ್ದಿದ್ದು, ಇದು ಗ್ರಾಹಕರ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಬಿಡಿಎ ಸರ್ಕಾರಿ ಸಂಸ್ಥೆ ಎಂಬ ನೆಪ ಹೇಳಿ ದೇಶದ ಕಾನೂನು ಮೀರಿ ಯಾವುದೇ ಸವಲತ್ತು ಪಡೆಯುವುದು ಹಿತವಲ್ಲ. ಬಿಎಸ್‌ಎನ್‌ಎಲ್ ಅನ್ನು ಟ್ರಾಯ್ ನಿಯಂತ್ರಿಸುತ್ತದೆ. ಯುನೈಟೆಡ್‌, ಓರಿಯಂಟಲ್, ನ್ಯೂ ಇಂಡಿಯಾ ಅಶ್ಯೂರೆನ್ಸ್‌ನಂತಹ ಸಾರ್ವಜನಿಕ ವಲಯದ ಕಂಪನಿಗಳು ಐಆರ್‌ಡಿಎಐ ನಿಯಮಗಳ ಅಡಿ ನಿಯಂತ್ರಿಸಲ್ಪಡುತ್ತವೆ. ರೇರಾ ಕಾಯ್ದೆಯಿಂದ ವಿನಾಯಿತಿ ನೀಡುವಂತೆ ಒತ್ತಾಯಿಸುವ ಮೊದಲು ಇದನ್ನು ತಿಳಿದುಕೊಳ್ಳಬೇಕು’ ಎಂದಿದ್ದಾರೆ.

‘ನಗರವನ್ನು ವಿಸ್ತರಿಸುವ ಭರದಲ್ಲಿ ಬಿಡಿಎ ಆಕ್ರಮಣಕಾರಿ ಕಾರ್ಯ ಯೋಜನೆ ಹಾಕಿಕೊಂಡು ಹೊಸ ಬಡಾವಣೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ, ಈ ರೀತಿ ಅಭಿವೃದ್ಧಿಪಡಿಸುವ ಬಡಾವಣೆಗಳಲ್ಲಿ ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿದೆ. ಉದಾಹರಣೆಗೆ ಬಿಎಸ್‌ಕೆ 6ನೇ ಹಂತ, ಅರ್ಕಾವತಿ ಮತ್ತು ಕೆಂಪೇಗೌಡ ಬಡಾವಣೆಗಳ ವಸತಿ ಯೋಜನೆ ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿದೆ. ಇಲ್ಲಿ ನಿವೇಶನ ಪಡೆದವರು ಹಕ್ಕು ಸ್ವಾಮ್ಯದ ವಿವಾದ, ಅರಣ್ಯ ಇಲಾಖೆ ಆಕ್ಷೇಪಣೆಗಳು, ರಸ್ತೆಗಳ ಕೊರತೆ, ಒಳಚರಂಡಿ ಮತ್ತು ಕುಡಿಯುವ ನೀರು ಸೇರಿ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಕೊನೆಗಾಣಿಸಲು ಮನಸ್ಸು ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.