ADVERTISEMENT

ಆಯುಕ್ತರ ಕಣ್ತಪ್ಪು– ಅಧಿಕಾರಿಗಳಿಗೆ ಪೀಕಲಾಟ

ದಯಾನಂದ ಭಂಡಾರಿ ಕ್ರಮದಿಂದ ಬಿಡಿಎಗೆ ನಷ್ಟವಾಗಿಲ್ಲ: ನಗರಾಭಿವೃದ್ಧಿ ಇಲಾಖೆಗೆ ಪತ್ರ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 16:29 IST
Last Updated 9 ಫೆಬ್ರುವರಿ 2022, 16:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬದಲಿ ನಿವೇಶನದ ರೂಪದಲ್ಲಿ ಮೂಲೆ ನಿವೇಶನವನ್ನು ಹಂಚಿಕೆ ಮಾಡುವ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟುಮಾಡಿರುವ ಆರೋಪದ ಮೇರೆಗೆ ಪ್ರಾಧಿಕಾರದ ಉಪಕಾರ್ಯದರ್ಶಿ–2 ಆಗಿದ್ದ ದಯಾನಂದ ಭಂಡಾರಿ ಅವರನ್ನು ಭ್ರಷ್ಟಾಚಾರ ನಿಗ್ರಹದಳದಿಂದ (ಎಸಿಬಿ) ತನಿಖೆಗೆ ಒಳಪಡಿಸಲು ಶಿಫಾರಸು ಮಾಡಿ 2022ರ ಜ. 17ರಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದ ಪ್ರಾಧಿಕಾರದ ಆಯುಕ್ತ ಎಂ.ಬಿ.ರಾಜೇಶ ಗೌಡ, ಈಗ ಅದನ್ನು ಅಲ್ಲಗಳೆದಿದ್ದಾರೆ.

‘ಈ ಪ್ರಕರಣದಲ್ಲಿ ದಯಾನಂದ ಭಂಡಾರಿ ಲೋಪ ಕಂಡುಬಂದಿಲ್ಲ. ಈ ಪ್ರಕರಣದಲ್ಲಿ ಪ್ರಾಧಿಕಾರಕ್ಕೆ ಯಾವುದೇ ಆರ್ಥಿಕ ನಷ್ಟವಾಗಿಲ್ಲ. ಹಾಗಾಗಿ,ಕಣ್ತಪ್ಪಿನಿಂದ ಕಳುಹಿಸಲಾದ ವರದಿಯನ್ನು ಪರಿಗಣಿಸಬಾರದು. ಈ ಪ್ರಕರಣದಲ್ಲಿ ಅಧಿಕಾರಿ ಹಾಗೂ ನೌಕರರ ವಿರುದ್ಧದ ತನಿಖೆ ನಡೆಸಲು ಅನುಮತಿ ನೀಡುವ ಅವಶ್ಯಕತೆ ಇಲ್ಲ’ ಎಂದು ಬಿಡಿಎ ಆಯುಕ್ತರು ಫೆ.01ರಂದು ನಗರಾಭಿವೃದ್ಧಿ ಇಲಾಖೆಗೆ ಮತ್ತೊಂದು ಪತ್ರ ಕಳುಹಿಸಿದ್ದಾರೆ.

ದಯಾನಂದ ಭಂಡಾರಿ,ದಕ್ಷಿಣ ವಲಯದಲ್ಲಿ ಕಾರ್ಯಪಾಲಕ ಎಂಜಿನಿಯರ್‌ (ಇ.ಇ) ಆಗಿದ್ದ ಎನ್‌.ವಿಶ್ವನಾಥ್‌ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಆಗಿದ್ದ ಎಚ್.ಎಸ್.ಮಂಜುನಾಥ್ ಅವರನ್ನು ವಿಚಾರಣೆಗೆ ಒಳಪಡಿಸಲು ಶಿಫಾರಸು ಮಾಡಿದ್ದರು. ಇದನ್ನು ಆಧರಿಸಿ ‘ಪ್ರಜಾವಾಣಿ’ ಜ.28ರ ಸಂಚಿಕೆಯಲ್ಲಿ ‘ಮೂಲೆ ನಿವೇಶನ ಬದಲಿ ನಿವೇಶನವಾಗಿ ಹಂಚಿಕೆ!’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ADVERTISEMENT

‘ಶ್ರೀನಿವಾಸಗೌಡ ಅವರಿಗೆ ಬನಶಂಕರಿ ಬಡಾವಣೆಯ ಆರನೇ ಹಂತದ 4ನೇ ಬ್ಲಾಕ್‌ನಲ್ಲಿ 12x18 ಮೀಟರ್‌ನ ನಿವೇಶನವನ್ನು (ಸಂಖ್ಯೆ 927) ಉಪಕಾರ್ಯದರ್ಶಿ–4 ವಿಭಾಗವು 2003-04ರಲ್ಲಿ ಹಂಚಿಕೆ ಮಾಡಿತ್ತು. ಇದು ಮೂಲೆ ನಿವೇಶನವಾಗಿದ್ದರಿಂದ ಹಂಚಿಕೆಯನ್ನು ರದ್ದುಪಡಿಸಿ, ಅದೇ ಬಡಾವಣೆಯಲ್ಲಿ ಇನ್ನೊಂದು ನಿವೇಶನವನ್ನು (ಸಂಖ್ಯೆ 1116/ಎ) ಬದಲಿಯಾಗಿ ನೀಡಲಾಗಿತ್ತು. ಇದಕ್ಕೆ 2005ರ ನ.26ರಂದು ಸ್ವಾಧೀನ‍ಪತ್ರ ನೀಡಲಾಗಿತ್ತು. ‘ತನಗೆ ಮಂಜೂರಾದ ನಿವೇಶನವು ಕಲ್ಲುಬಂಡೆಗಳಿಂದ ಕೂಡಿದೆ. ಬನಶಂಕರಿ ಬಡಾವಣೆಯ ಆರನೇ ಹಂತದ 1ನೇ ಬ್ಲಾಕ್‌ನ ನಿವೇಶನ (1293) ನಿವೇಶನ ನೀಡಬೇಕು ಎಂದುಶ್ರೀನಿವಾಸ ಗೌಡರು 2015ರ ನ.3ರಂದು ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.’

‘ಈ ಬಗ್ಗೆ ವರದಿ ನೀಡುವಂತೆ ಉಪಕಾರ್ಯದರ್ಶಿ–4 ಅವರು ದಕ್ಷಿಣ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರನ್ನು ಕೋರಿದ್ದರು. ಇಇ ವಿಶ್ವನಾಥ್ ಹಾಗೂ ಎಇಇ ಮಂಜುನಾಥ್ ವರದಿ ನೀಡಿದ್ದು, ನಿವೇಶನ ಸಂಖ್ಯೆ 1116/ಎ ಕಲ್ಲುಬಂಡೆಗಳಿಂದ ಕೂಡಿರುವುದನ್ನು ಖಚಿತಪಡಿಸಿದ್ದರು.’

ಬಿಡಿಎ ಆಯುಕ್ತರ ಅಧ್ಯಕ್ಷತೆಯಲ್ಲಿ 2016ರ ಜ.2ರಂದು ನಡೆದ ನಿವೇಶನ ಹಂಚಿಕೆ ಸಮಿತಿಯ ಸಭೆಯಲ್ಲಿ ಬನಶಂಕರಿ ಬಡಾವಣೆಯ 6ನೇ ಹಂತದ 1ನೇ ಬ್ಲಾಕ್‌ನಲ್ಲಿ ಶ್ರೀನಿವಾಸ ಗೌಡರಿಗೆ ಬದಲಿ ನಿವೇಶನ (ಸಂಖ್ಯೆ 1293) ಹಂಚಿಕೆ ಮಾಡಲು ತೀರ್ಮಾನಿಸಲಾಗಿತ್ತು. ದಯಾನಂದ ಭಂಡಾರಿ ಅವರು ಈ ಸಭೆಯ ತೀರ್ಮಾನದಂತೆ ನಿವೇಶನ ಸಂಖ್ಯೆ 1293ರ ಹಂಚಿಕೆ ಪತ್ರ ನೀಡಿದ್ದರು. ಆದರೆ, ಹಂಚಿಕೆಯ ನಂತರದ ಯಾವುದೇ ಕ್ರಮವನ್ನು ಮುಂದುವರಿಸಿಲ್ಲ. ನಿವೇಶನ ಸಂಖ್ಯೆ 1293 ಅನ್ನು ಬದಲಿ ನಿವೇಶನವನ್ನಾಗಿ ಹಂಚಿಕೆ ಮಾಡಲು ದಯಾನಂದ ಭಂಡಾರಿ ಪ್ರಸ್ತಾವನೆ ಮಂಡಿಸಿಲ್ಲ. ಇದನ್ನು ಸಿದ್ಧಪಡಿಸಿದ್ದು ಉಪಕಾರ್ಯದರ್ಶಿ–4 ವಿಭಾಗ’ ಎಂದು ಆಯುಕ್ತರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.