ADVERTISEMENT

BDA - ಅಕ್ರಮವಾಗಿ ಬದಲಿ ಜಾಗ ಮಂಜೂರು: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 19:54 IST
Last Updated 2 ಜುಲೈ 2022, 19:54 IST
   

ಬೆಂಗಳೂರು: ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಅಕ್ರಮವಾಗಿ ಬದಲಿ ಜಾಗ ಪಡೆದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ(ಬಿಡಿಎ) ₹100 ಕೋಟಿಯಷ್ಟು ನಷ್ಟವುಂಟು ಮಾಡಿರುವ ಆರೋಪದಲ್ಲಿ ನಾಗರಾಜ್ ಎಂಬ ವ್ಯಕ್ತಿ ಮತ್ತು ಬಿಡಿಎ ಅಧಿಕಾರಿಗಳ ವಿರುದ್ಧ ಬಿಎಂಟಿಎಫ್ ಎಫ್‌ಐಆರ್ ದಾಖಲಿಸಿದೆ.

ಈಸ್ಟ್ ಆಫ್ ಎನ್‌ಜಿಇಎಫ್ ಬಡಾವಣೆ ನಿರ್ಮಾಣಕ್ಕೆ ಬಾಣಸವಾಡಿ ಗ್ರಾಮದ ಸರ್ವೆ ಸಂಖ್ಯೆ 73ರಲ್ಲಿ ಈರಣ್ಣ ಎಂಬುವರ ‌4 ಎಕರೆ 13 ಗುಂಟೆ ಜಮೀನನ್ನು 1986ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಪರಿಹಾರವನ್ನು ಸಿವಿಲ್ ನ್ಯಾಯಾಲಯದಲ್ಲಿ ಬಿಡಿಎ ಠೇವಣಿ ಇಟ್ಟಿತ್ತು.

ಈರಣ್ಣ ಅವರ ಬಳಿ ನಾಗರಾಜ್ ಎಂಬ ವ್ಯಕ್ತಿ ಜಿಪಿಎ (ಜನರಲ್ ಪವರ್‌ ಆಫ್‌ ಅಟಾರ್ನಿ–ಕಾರ್ಯನಿರ್ವಾಹಕನ ವ್ಯವಹಾರಗಳನ್ನು ಪ್ರತಿನಿಧಿಸುವ ಅಧಿಕಾರ ಹೊಂದಿರುವವರು) ಬರೆಯಿಸಿಕೊಂಡು ಜಮೀನು ತನ್ನದೇ ಎಂದು ಪ್ರತಿಪಾದಿಸಿ ಕಂದಾಯ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡಿದ್ದರು.

ADVERTISEMENT

‘ಈ ನಿವೇಶನಗಳನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿದ್ದು, ಬದಲಿ ನಿವೇಶನ ನೀಡಬೇಕು’ ಎಂದು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಬಿಡಿಎ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.

ಬದಲಿ ನಿವೇಶನಗಳನ್ನು ಮಂಜೂರು ಮಾಡುವಂತೆ ಬಿಡಿಎಗೆ ಮತ್ತೆ ಅರ್ಜಿ ಸಲ್ಲಿಸಿದ್ದರು. ಎರಡು ಬಾರಿ ಅರ್ಜಿ ತಿರಸ್ಕರಿಸಿದ್ದ ಬಿಡಿಎ, 2012ರಲ್ಲಿ ನಿವೇಶನ ನೀಡಲು ಒಪ್ಪಿತ್ತು. ಅರ್ಕಾವತಿ ಬಡಾವಣೆಯ ವಿವಿಧ ಸರ್ವೆ ನಂಬರ್‌ಗಳಲ್ಲಿ 4 ಎಕರೆ 13 ಗುಂಟೆ ಜಮೀನು ಮಂಜೂರು ಮಾಡಿತ್ತು. ಕೆಲವು ನಿವೇಶನಗಳು ಬಫರ್ ವಲಯದಲ್ಲಿವೆ ಎಂದು ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದ ನಾಗರಾಜ್, ಬೇರೆ ಕಡೆ ಜಾಗ ನೀಡಬೇಕೆಂದು ಕೋರಿದ್ದರು.

ಥಣಿಸಂದ್ರ ಸೇರಿ ಪ್ರಮುಖ ಸ್ಥಳಗಳಲ್ಲಿ ನಾಗರಾಜ್ ಹೆಸರಿಗೆ 2014ರಲ್ಲಿ ಬಿಡಿಎ ಜಾಗ ನೀಡಿತ್ತು. ದೊಡ್ಡ ಪ್ರಮಾದ ಆಗಿರುವುದನ್ನು ಗಮನಿಸಿದ ಬಿಡಿಎ ಅಧ್ಯಕ್ಷ ಎಸ್‌.ಆರ್.ವಿಶ್ವನಾಥ್, ಸೂಕ್ತ
ತನಿಖೆ ನಡೆಸಿ ವರದಿ ನೀಡುವಂತೆ ಬಿಡಿಎ ಕಾರ್ಯಪಡೆಗೆ ಸೂಚನೆ ನೀಡಿದ್ದರು.

ತನಖೆ ನಡೆಸಿದ ಡಿವೈಎಸ್‌ಪಿ ರವಿಕುಮಾರ್ ಮತ್ತು ಇನ್‌ಸ್ಪೆಕ್ಟರ್‌ ಶ್ರೀನಿವಾಸ್, ಅಕ್ರಮ ನಡೆದಿರುವ ಬಗ್ಗೆ ವರದಿ ನೀಡಿದ್ದರು. ಅಲ್ಲದೇ ಬಿಎಂಟಿಎಫ್‌ಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.