ADVERTISEMENT

₹ 330 ಕೋಟಿ ವೆಚ್ಚದಲ್ಲಿ ವಾಣಿಜ್ಯ ಮಳಿಗೆ ನವೀಕರಣ ಪ್ರಸ್ತಾವ

ಪ್ರಭಾವಿಗಳ ಕೈವಾಡದ ಆರೋಪ: ಬಿಡಿಎಗೆ ಹೈಕೋರ್ಟ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 19:32 IST
Last Updated 12 ಜೂನ್ 2019, 19:32 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವ್ಯಾಪ್ತಿಯಲ್ಲಿರುವ ವಾಣಿಜ್ಯ ಮಳಿಗೆಗಳನ್ನು ₹ 330 ಕೋಟಿ ವೆಚ್ಚದಲ್ಲಿ ನವೀಕರಣ ಮತ್ತು ಪುನರ್‌ ನಿರ್ಮಾಣ ಮಾಡುವ ಪ್ರಸ್ತಾವಕ್ಕೆ ತಡೆ ನೀಡಬೇಕು’ ಎಂದು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಬಿಡಿಎಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಜಿ.ಎಂ.ಪಾಳ್ಯದ ಹಿರಿಯ ನಾಗರಿಕ ನೆಲ್ಲೀರ ಎಂ. ಸುಬ್ಬಯ್ಯ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಹಾಗೂ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿದ್ದು, 2019ರ ಜುಲೈ 5ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಬಿಡಿಎಗೆ ನಿರ್ದೇಶಿಸಿದೆ.

ಆಕ್ಷೇಪಣೆ ಏನು: ‘ಬಿಡಿಎ ವ್ಯಾಪ್ತಿಯಲ್ಲಿ 68 ಲೇ ಔಟ್‌ಗಳಿವೆ. ಇಲ್ಲಿನ ವಾಣಿಜ್ಯ ಮಳಿಗೆಗಳನ್ನು ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ₹ 330 ಕೋಟಿ ವೆಚ್ಚದಲ್ಲಿ ನವೀಕರಿಸುವ ಪ್ರಸ್ತಾವದ ಹಿಂದೆ ಪ್ರಭಾವಿ ಶಕ್ತಿಗಳ ಕೈವಾಡವಿದೆ’ ಎಂಬುದು ಅರ್ಜಿದಾರ ಆರೋಪ.

ADVERTISEMENT

‘68 ಲೇ ಔಟ್‌ಗಳಲ್ಲಿ ಅನೇಕ ವಾಣಿಜ್ಯ ಮಳಿಗೆಗೆ ಮೀಸಲಾದ ನಿವೇಶನಗಳನ್ನು ವಾಸದ ನಿವೇಶನಗಳಾಗಿ ಅಕ್ರಮ
ವಾಗಿ ಪರಿವರ್ತಿಸಲಾಗಿದೆ. ಅಂತೆಯೇ ಅಗತ್ಯಕ್ಕಿಂತ ಹೆಚ್ಚಿನ ಮಾಲ್‌ಗಳು ಹಾಗೂ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಪುನಃ ಈಗ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ವಾಣಿಜ್ಯ ಮಳಿಗೆ ನಿರ್ಮಿಸುವ ಉದ್ದೇಶ ಸಾರ್ವಜನಿಕರ ತೆರಿಗೆ ಹಣ ದುರುಪಯೋಗಪಡಿಸಿಕೊಂಡಂತೆ’ ಎಂಬುದು ಅರ್ಜಿದಾರರ ಆರೋಪ.

‘ಬಿಡಿಎ ವಾಣಿಜ್ಯ ಮಳಿಗೆಗಳ ಅಕ್ರಮಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಕಾರ್ಯಾಲಯಕ್ಕೂ ಮನವಿ ಸಲ್ಲಿಸಿದ್ದೇನೆ. ಅಲ್ಲಿಂದ ಬಂದಿರುವ ನಿರ್ದೇಶನಗಳನ್ನು ರಾಜ್ಯ ಸರ್ಕಾರ ಪಾಲಿಸಿಲ್ಲ. ಬಹಳಷ್ಟು ಬಿಡಿಎ ವಾಣಿಜ್ಯ ಮಳಿಗೆಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಸ್ಥಳೀಯ ಆಕ್ಷೇಪಣೆಗಳನ್ನು ಕಡೆಗಣಿಸಲಾಗಿದೆ‘ ಎಂದು ಸುಬ್ಬಯ್ಯ ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.

‘ಅಧಿಕಾರಿಗಳ ಸಂಘಟಿತ ಅಪರಾಧ’

‘ಬಿಡಿಎ ಮತ್ತು ಕಂದಾಯ ಅಧಿಕಾರಿಗಳು ಸರ್ಕಾರದ ಕೋಟ್ಯಂತರ ಮೊತ್ತದ ಸ್ಥಿರಾಸ್ತಿ ಕಬಳಿಸುವಲ್ಲಿ ಅಕ್ರಮ ಕೂಟ ರಚಿಸಿಕೊಂಡಿದ್ದು ಸಂಘಟಿತ ಅಪರಾಧ ಎಸಗುತ್ತಿದ್ದಾರೆ’ ಎಂಬುದು ಅರ್ಜಿದಾರರ ಆರೋಪ.

‘ಮಂಜೂರಾತಿ ನಕ್ಷೆ, ಖಾತೆ, ಖಾತೆ ಪ್ರಮಾಣ ಪತ್ರ, ತೆರಿಗೆ ರಶೀದಿಗಳ ನಕಲು ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಲಾಗುತ್ತಿದೆ. ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ಹೈಕೋರ್ಟ್‌ ಮತ್ತು ನಗರಾಭಿವೃದ್ಧಿ ಇಲಾಖೆ ನೀಡಿದ ಆದೇಶಗಳನ್ನು ನಿರ್ಲಕ್ಷಿಸಲಾಗಿದೆ’ ಎಂದೂ ಆಕ್ಷೇಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.