ADVERTISEMENT

₹ 70 ಕೋಟಿಗೂ ಅಧಿಕ ಮೌಲ್ಯದ ಬಿಡಿಎ ಜಮೀನು ಅಕ್ರಮ ಪರಭಾರೆ

3 ಎಕರೆ 32 ಗುಂಟೆಯಲ್ಲಿ ಬಡಾವಣೆ ನಿರ್ಮಿಸಿ ಮಾರಾಟ l ಆರು ಮಂದಿ ವಿರುದ್ಧ ಎಫ್‌ಐಆರ್‌

ವಿ.ಎಸ್.ಸುಬ್ರಹ್ಮಣ್ಯ
Published 20 ಜುಲೈ 2022, 19:40 IST
Last Updated 20 ಜುಲೈ 2022, 19:40 IST
ಬಿಡಿಎ
ಬಿಡಿಎ   

ಬೆಂಗಳೂರು: ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡಿದ್ದ ಸುಮಾರು ₹ 70 ಕೋಟಿಗೂ ಹೆಚ್ಚು ಮೌಲ್ಯದ 3 ಎಕರೆ 32 ಗುಂಟೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿರುವ ಆರೋಪದ ಮೇಲೆ ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ಆರು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

‘ಬಿಡಿಎ ಸ್ವಾಧೀನದಲ್ಲಿದ್ದ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿ, ಬಳಿಕ ಖರೀದಿದಾರರು ಅನಧಿಕೃತವಾಗಿ ಬಡಾವಣೆ ನಿರ್ಮಿಸಿ ಮಾರಾಟ ಮಾಡಿದ್ದಾರೆ’ ಎಂದು ಬಿಡಿಎ ಅಧಿಕಾರಿಗಳು ದೂರು ನೀಡಿದ್ದರು. ಜಮೀನಿನ ಮೂಲ ಮಾಲೀಕರ ಕುಟುಂಬದ ಸದಸ್ಯರಾದ ಮುನಿಕೃಷ್ಣಪ್ಪ, ಪುಟ್ಟಮ್ಮ, ವೆಂಕಟೇಶ, ವಜ್ರಪ್ಪ ಹಾಗೂ ಅವರಿಂದ ಜಮೀನು ಖರೀದಿಸಿ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡಿರುವ ಟ್ರಿಂಕೋ ಇನ್‌ಫ್ರಾ ಪ್ರೈವೇಟ್‌ ಲಿಮಿಟೆಡ್‌ನ ಪಾಲುದಾರರಾದ ವಸಂತಕುಮಾರ್‌ ಡಿ. ಮತ್ತು ಪ್ರಸಾದ್‌ ಎಂ.ಎಸ್‌. ಎಂಬುವವರ ವಿರುದ್ಧ ಪೊಲೀಸರು, ಆಸ್ತಿ ನಾಶ, ವಂಚನೆ ಮತ್ತು ಅತಿಕ್ರಮ ಪ್ರವೇಶ ಆರೋಪಗಳಡಿ ಜೂನ್‌ 24ರಂದು ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಮನವರ್ತೆ ಕಾವಲ್‌ ಗ್ರಾಮದ ಸರ್ವೆ ನಂಬರ್‌ 7 ರಲ್ಲಿ 92 ಎಕರೆ ಜಮೀನನ್ನು ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿ‌ಕೊಳ್ಳಲು 2002 ರಲ್ಲಿ ಬಿಡಿಎ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ನಂತರ ಪರಿಹಾರ ದರ ನಿಗದಿ ಮಾಡಿ, ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು.

ADVERTISEMENT

ಸರ್ವೆ ನಂಬರ್‌ 7/15ರಲ್ಲಿನ 3.32 ಎಕರೆ ಜಮೀನು ಸ್ವಾಧೀನ ಪ್ರಶ್ನಿಸಿ ಪಾಪಮ್ಮ ಎಂಬುವವರ ಹೆಸರಿನಲ್ಲಿತ್ತು. ಅವರ ಮಕ್ಕಳಾದ ಮುನಿಕೃಷ್ಣಪ್ಪ, ಪುಟ್ಟಮ್ಮ, ವೆಂಕಟೇಶ್‌ ಮತ್ತು ವಜ್ರಪ್ಪ ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ನಲ್ಲಿ ಏಕಸದಸ್ಯ ಪೀಠ ಭೂಮಾಲೀಕರ ಪರ ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಬಿಡಿಎ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಿಭಾಗೀಯ ಪೀಠ 2019ರಲ್ಲಿ ತಿರಸ್ಕರಿಸಿತ್ತು.

ಹೈಕೋರ್ಟ್‌ ವಿಭಾಗೀಯ ಪೀಠದ ತೀರ್ಮಾನ ಪ್ರಶ್ನಿಸಿ ಬಿಡಿಎ ಸುಪ್ರೀಂ ಕೋರ್ಟ್‌ಗೆ 2021ರಲ್ಲಿ ಅರ್ಜಿ ಸಲ್ಲಿಸಿತ್ತು. ವಿಚಾರಣೆ ಆರಂಭಿಸಿರುವ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ವಿಭಾಗೀಯ ಪೀಠದ ಆದೇಶಕ್ಕೆ ತಡೆ ನೀಡಿತ್ತು. ಬಳಿಕ ಆ ಜಮೀನಿನಲ್ಲಿ ಫಲಕ ಅಳವಡಿಸಿದ್ದ ಬಿಡಿಎ ಅಧಿಕಾರಿಗಳು, ಭೂಸ್ವಾಧೀನಕ್ಕೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಮಾಹಿತಿ ಪ್ರಕಟಿಸಿದ್ದರು.

ನಿವೇಶನ ಸೃಜಿಸಿ ಮಾರಾಟ: ‘ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಮುನಿಕೃಷ್ಣಪ್ಪ ಮತ್ತು ಇತರರು ಅಕ್ರಮವಾಗಿ ಜಮೀನು ಮಾರಾಟ ಮಾಡಿದ್ದಾರೆ. ಪ್ರಸಾದ್‌ ಮತ್ತು ವಸಂತಕುಮಾರ್‌, ಬಿಡಿಎ ಆ ಜಮೀನನಲ್ಲಿ ‘ಟ್ರಿಂಕೋ ಮನವರ್ತೆ’ ಎಂಬ ಹೆಸರಿನಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಿಸಿ ಬಿಡಿಎ ಸ್ವಾಧೀನದಲ್ಲಿದ್ದ ಆಸ್ತಿಯನ್ನು ಸಾರ್ವಜನಿಕರಿಗೆ ಮಾರಾಟ ಮಾಡಿದ್ದಾರೆ’ ಎಂದು ಬಿಡಿಎ ಬನಶಂಕರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪಿ. ಗಂಗಾಧರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ನಕಲಿ ದಾಖಲೆಗಳ ಬಳಕೆ

‘ಮಾರಾಟ ಮಾಡಿರುವ ಜಮೀನಿನ ಭೂಪರಿವರ್ತನೆ ಆದೇಶವನ್ನು ಬೆಂಗಳೂರು ಉಪ ವಿಭಾಗಾಧಿಕಾರಿ ಕಚೇರಿಯಿಂದ ನೀಡಲಾಗಿತ್ತು ಎಂಬಂತೆ ನಕಲಿ ದಾಖಲೆ ಸೃಷ್ಟಿರುವುದು ದಾಖಲೆಗಳ ತಪಾಸಣೆ ವೇಳೆ ಪತ್ತೆಯಾಗಿದೆ. ಭೂಸ್ವಾಧೀನಕ್ಕೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿನ ಇರುವಾಗಲೇ ಬಿಬಿಎಂಪಿಯಲ್ಲಿ ಅರ್ಜಿ ಸಲ್ಲಿಸಿ, ಸುಳ್ಳು ಮಾಹಿತಿ ನೀಡಿ ಖಾತೆ ಪಡೆಯಲಾಗಿದೆ.ಬಿಬಿಎಂಪಿ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸದೇ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಕಂಡುಬಂದಿದೆ’ ಎಂದು ಬಿಡಿಎ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.