ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕಿನ ಕೋನದಾಸಪುರದಲ್ಲಿ ಸುಸಜ್ಜಿತವಾದ ಬಹೂಪಯೋಗಿ ಟೌನ್ ಶಿಪ್ ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧರಿಸಿದೆ.
ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.
ಸಭೆಯ ನಿರ್ಧಾರಗಳ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ‘ಖಾಸಗಿ ಸಹಭಾಗಿತ್ವದಲ್ಲಿ ಈ ಟೌನ್ ಶಿಪ್ ನಿರ್ಮಿಸಲು ಉದ್ದೇಶಿಸಲಾಗಿದೆ. 4 ಬಿಎಚ್‌ಕೆ ಮನೆಗಳಿರುವ ಅಪಾರ್ಟ್‌ಮೆಂಟ್ ಸಮುಚ್ಚಯಗಳು, ವಾಣಿಜ್ಯ ಸಂಕೀರ್ಣಗಳು, ಮನೋರಂಜನಾ ತಾಣ, ವ್ಯಾಯಾಮ ಘಟಕಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗುತ್ತದೆ. ಖಾಸಗಿ ಟೌನ್ ಶಿಪ್‌ಗೆ ಸರಿಸಮನಾದ ಸೌಲಭ್ಯಗಳನ್ನು ಇಲ್ಲಿ ಒದಗಿಸಲಿದ್ದೇವೆ. ಈ ಯೋಜನೆಗೆ ಸರ್ಕಾರದ ಅನುಮೋದನೆ ಸಿಕ್ಕಿದ ತಕ್ಷಣವೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ತಿಳಿಸಿದರು.
‘ಬಿಡಿಎ ರಚಿಸಿರುವ 64 ಬಡಾವಣೆಗಳಲ್ಲಿ ಲಭ್ಯವಿರುವ ಜಮೀನುಗಳ ಪರಿಶೋಧನೆ (ಲ್ಯಾಂಡ್ ಆಡಿಟ್) ನಡೆಸಲಾಗಿದೆ. ಇವುಗಳಲ್ಲಿ 357 ಎಕರೆಗಳಷ್ಟು ಜಮೀನು ಹಂಚಿಕೆಯಾಗದೇ ಉಳಿದಿರುವುದು ಕಂಡುಬಂದಿದೆ. ಈ ಜಮೀನನ್ನು ಹರಾಜಿನ ಮೂಲಕ ಮಾರಾಟ ಮಾಡುವ ಪ್ರಸ್ತಾಪಕ್ಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು’ ಎಂದರು.
‘ಆಲೂರಿನಲ್ಲಿ ನಿರ್ಮಿಸಲಾಗಿರುವ 1 ಬಿಎಚ್‌ಕೆ ವಸತಿ ಸಮುಚ್ಚಯಕ್ಕೆ ಆವರಣ ಗೋಡೆ ನಿರ್ಮಾಣ ಮತ್ತು ಹತ್ತಿರದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆಗಳ ನಿರ್ಮಾಣಕ್ಕೆ ₹ 1 ಕೋಟಿ ಮಂಜೂರು ಮಾಡಲು ಒಪ್ಪಿಗೆ ನೀಡಲಾಯಿತು’ ಎಂದು ಅವರು ಮಾಹಿತಿ ನೀಡಿದರು.
‘ಬನಶಂಕರಿ ಬಡಾವಣೆಯಲ್ಲಿ 100 ಅಡಿ ಮತ್ತು 80 ಅಡಿ ರಸ್ತೆಗಳ ಇಕ್ಕೆಲಗಳಲ್ಲಿ ಇರುವ ಬೀದಿದೀಪಗಳ ಕಂಬಗಳನ್ನು ರಸ್ತೆಯ ಮಧ್ಯಭಾಗಕ್ಕೆ ಸ್ಥಳಾಂತರಿಸಿ ಹೊಸದಾಗಿ ಎಲ್ಇಡಿ ದೀಪಗಳನ್ನು ಅಳವಡಿಸಲಾಗುತ್ತದೆ. ಪ್ರಮುಖ ವೃತ್ತಗಳಲ್ಲಿ ಹೈ–ಮಾಸ್ಟ್ ದೀಪಗಳನ್ನು ಅಳವಡಿಸಲಾಗುತ್ತದೆ. ₹ 2.75 ಕೋಟಿ ವೆಚ್ಚದ ಈ ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು’ ಎಂದರು.
ಪ್ರಾಧಿಕಾರದ ಎಲ್ಲ ಚಟುವಟಿಕೆಗಳನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಿಸಲು ಹೊಸ ತಂತ್ರಾಂಶ ಅಭಿವೃದ್ಧಿಪಡಿಸಲು ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಖಾಲಿ ಇರುವ ಹುದ್ದೆಗಳಿಗೆ ಕೋವಿಡ್ ನಿಯಂತ್ರಣಕ್ಕೆ ಬಂದ ಬಳಿಕ ನೇಮಕಾತಿ ಮಾಡಿಕೊಳ್ಳಲು ಸಭೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದೆ. ಪ್ರಾಧಿಕಾರದ 2021-22 ನೇ ಸಾಲಿನ ₹ 2,252 ಕೋಟಿ ಗಾತ್ರದ ಬಜೆಟ್‌ಗೂ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಪಿಆರ್‌ಆರ್– ಅನುಮೋದನೆ ಕೋರಲು ನಿರ್ಧಾರ
‘ಬಹುನಿರೀಕ್ಷಿತ ಬೆಂಗಳೂರು ಪೆರಿಫರೆಲ್ ವರ್ತುಲ ರಸ್ತೆ ಯೋಜನೆಯ ಪರಿಷ್ಕೃತ ನೀಲನಕ್ಷೆಯನ್ನು ಬಿಡಿಎ ರೂಪಿಸಿದೆ. ಈ ಯೋಜನೆ ಅನುಷ್ಠಾನಕ್ಕೆ ದೇಶ–ವಿದೇಶಗಳ ಹಲವು ಕಂಪನಿಗಳು ಆಸಕ್ತಿ ತೋರಿರುವ ಕಾರಣ ಜಾಗತಿಕ ಟೆಂಡರ್ ಕರೆಯಲು ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ವಿಶ್ವನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.