ADVERTISEMENT

ನವೀನ ಹೂಡಿಕೆ ಮಾದರಿಗೆ ಬಿಡಿಎ ಮೊರೆ ?

ಪಿಆರ್‌ಆರ್‌ಗೆ ಸಂಪನ್ಮೂಲ ಕ್ರೋಡೀಕರಣ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2018, 16:41 IST
Last Updated 1 ಅಕ್ಟೋಬರ್ 2018, 16:41 IST
   

ಬೆಂಗಳೂರು: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್‌) ಯೋಜನೆಯನ್ನು ಮತ್ತೆ ಕೈಗೆತ್ತಿಕೊಂಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಭೂಸ್ವಾಧೀನಕ್ಕೆ ತಗಲುವ ವೆಚ್ಚವನ್ನು ಹೊಂದಿಸಲು ನವೀನ ಹೂಡಿಕೆ ಮಾದರಿಯ ಮೊರೆ ಹೋಗಲಿದೆಯೇ?

ಈ ಯೋಜನೆಗೆ ಸಚಿವ ಸಂಪುಟದ ಒಪ್ಪಿಗೆ ಪಡೆಯಲು ಬಿಡಿಎ ಸಲ್ಲಿಸಿರುವ ಪ್ರಸ್ತಾವದಲ್ಲಿ ಈ ಅಂಶಗಳಿವೆ.

ಈ ಯೋಜನೆಗೆ ಬಂಡವಾಳ ಹೂಡಲು ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ಆಸಕ್ತಿ ತೋರಿದೆ. ಆದರೆ, ಭೂಸ್ವಾಧೀನಕ್ಕೆ ತಗಲುವ ವೆಚ್ಚವನ್ನು ಸಂಸ್ಥೆ ಭರಿಸದು. ಹಾಗಾಗಿ ಬಿಡಿಎ ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿದೆ.
‘ಸರ್ಕಾರ ಈ ಯೋಜನೆಗೆ ಅನುದಾನ ಒದಗಿಸದಿದ್ದರೆ ನವೀನ ಹೂಡಿಕೆ ಅನುಸರಿಸುವುದು ಅನಿವಾರ್ಯ’ ಎನ್ನುತ್ತಾರೆ ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಬಿ.ಎಸ್‌.ಶಿವಕುಮಾರ್‌.

ADVERTISEMENT

‘ನಮ್ಮ ಮೆಟ್ರೊ’ ಯೋಜನೆಯ ಕಾಮಗಾರಿಗೆ ಬಂಡವಾಳ ಕ್ರೋಡೀಕರಿಸಲು ಬೆಂಗಳೂರು ಮೆಟ್ರೊ ನಿಗಮ (ಬಿಎಂಆರ್‌ಸಿಎಲ್‌) ನವೀನ ಹೂಡಿಕೆ ವಿಧಾನದ ಮೊರೆ ಹೋಗಿತ್ತು. ಈ ವಿಚಾರದಲ್ಲಿ ತಕ್ಕಮಟ್ಟಿನ ಯಶಸ್ಸನ್ನೂ ಗಳಿಸಿತ್ತು. ಬಿಡಿಎ ಕೂಡಾ ಅದೇ ಹಾದಿ ಹಿಡಿದಿದೆ.

‘ಅಭಿವೃದ್ಧಿ ಹಕ್ಕುಗಳ ಹಸ್ತಾಂತರ (ಟಿಡಿಆರ್‌) ಹಾಗೂ ಪ್ರೀಮಿಯಂ ಎಫ್‌ಎಆರ್‌ ನೀಡುವುದು ಮುಂತಾದ ಅನೇಕ ಮಾರ್ಗಗಳು ನಮ್ಮ ಮುಂದಿವೆ’ ಎಂದು ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.

ಯೋಜನೆಯ ಮೂಲಸ್ವರೂಪದಲ್ಲಿ ಭಾರಿ ಬದಲಾವಣೆ ಮಾಡಿರುವ ಬಿಡಿಎ ನೆಲಮಟ್ಟದ ರಸ್ತೆ, ಎತ್ತರಿಸಿದ ರಸ್ತೆ ಹಾಗೂ ಅದರ ಮೇಲೆ ಮೆಟ್ರೊ ಮಾರ್ಗವನ್ನು ನಿರ್ಮಿಸಲಿದೆ. ಈ ವಿನ್ಯಾಸ ಅನುಸರಿಸಿದರೆ ಬಿಡಿಎಗೆ ಸುಮಾರು ಶೇ 40ರಷ್ಟು ಕಡಿಮೆ ಬಂಡವಾಳ ಸಾಕಾಗುತ್ತದೆ. ಇತ್ತೀಚೆಗೆ ನಡೆದ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲೂ ಪರಿಷ್ಕೃತ ವಿನ್ಯಾಸಕ್ಕೆ ಹಸಿರು ನಿಶಾನೆ ಸಿಕ್ಕಿದೆ.

‘ಮೂಲ ಯೋಜನೆಗೆ ಹೋಲಿಸಿದರೆ ಪರಿಷ್ಕೃತ ಯೋಜನೆಗೆ ಶೇ 40ರಷ್ಟು ಕಡಿಮೆ ಭೂಮಿ ಸಾಕಾಗುತ್ತದೆ. ಹಿಂದಿನ ವಿನ್ಯಾಸದ ಪ್ರಕಾರ ಭೂಸ್ವಾಧೀನಕ್ಕೆ ಅಂದಾಜು ₹ 8,500 ಕೋಟಿ ವೆಚ್ಚವಾಗುತ್ತಿತ್ತು. ಆದರೆ ಈಗ ₹ 4,500 ಕೋಟಿ ಸಾಕಾಗುತ್ತದೆ’ ಎಂದು ಶಿವಕುಮಾರ್‌, ಮಾಹಿತಿ ನೀಡಿದರು.

100 ಮೀಟರ್‌ ಅಗಲದ ಪಿಆರ್‌ಆರ್‌ ನಿರ್ಮಾಣಕ್ಕೆ ಸಂಬಂಧಿಸಿ 2006ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. 65 ಕಿ.ಮೀ. ಉದ್ದದ ರಸ್ತೆಗೆ ಒಟ್ಟು 1,810 ಎಕರೆ 19 ಗುಂಟೆ ಭೂಸ್ವಾಧೀನ ಮಾಡಲು ಬಿಡಿಎ ಉದ್ದೇಶಿಸಿತ್ತು. ಯೋಜನೆಯ ಅಂದಾಜು ವೆಚ್ಚ ಆರಂಭದಲ್ಲಿ ₹ 500 ಕೋಟಿ ಇತ್ತು. 2012ರಲ್ಲಿ ಇದು ₹ 5,800 ಕೋಟಿಗೆ ಹೆಚ್ಚಿತ್ತು. ಭೂಮಿ ಬಿಟ್ಟುಕೊಡುವ ರೈತರಿಗೆ 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರವಾಗಿ ನೀಡಬೇಕಾಗಿ ಬಂದಿದ್ದರಿಂದ ಯೋಜನೆ ವೆಚ್ಚ ಮತ್ತಷ್ಟು ಹೆಚ್ಚಳವಾಯಿತು.

ಪರಿಷ್ಕೃತ ವಿನ್ಯಾಸದ ಪ್ರಕಾರ 60 ಮೀಟರ್‌ ಅಗಲದ ರಸ್ತೆ ನಿರ್ಮಾಣಕ್ಕೆ ಮಾತ್ರ ಬಿಡಿಎ ಭೂಸ್ವಾಧೀನ ಮಾಡಿಕೊಳ್ಳಲಿದೆ. ಇಲ್ಲಿ ಎಂಟು ಲೇನ್‌ಗಳ ಎತ್ತರಿಸಿದ ರಸ್ತೆ, ನೆಲ ಮಟ್ಟದಲ್ಲಿ 4 ಲೇನ್‌ ರಸ್ತೆ (ಏಕಮುಖ ಸಂಚಾರದ ತಲಾ 2 ಲೇನ್‌ಗಳು) ಹಾಗೂ ಆ ರಸ್ತೆಯ ಎರಡೂ ಕಡೆ ಸರ್ವಿಸ್‌ ರಸ್ತೆಗಳು (ತಲಾ 2 ಲೇನ್‌) ನಿರ್ಮಾಣವಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.