ADVERTISEMENT

‘1 ಲಕ್ಷ ಮನೆ ನಿರ್ಮಾಣದಲ್ಲಿ ಬಿಡಿಎ ಪಾತ್ರ ಮಹತ್ವದ್ದು’: ವಿ. ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 5:23 IST
Last Updated 5 ಜನವರಿ 2022, 5:23 IST
   

ಬೆಂಗಳೂರು: ರಾಜೀವ್‍ಗಾಂಧಿ ವಸತಿ ನಿಗಮವು ನಗರದಲ್ಲಿ ನಿರ್ಮಿಸುತ್ತಿರುವ 1 ಲಕ್ಷ ಮನೆಗಳ ನಿರ್ಮಾಣದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪಾತ್ರ ಮಹತ್ವದ್ದು. ಬಿಡಿಎ ಹಾಗೂ ಇತರ ಇಲಾಖೆಗಳು ಪರಸ್ಪರ ಸಮನ್ವಯದಿಂದ ಈ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನಕ್ಕೆ ಸಹಕರಿಸಬೇಕು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ನಗರದಲ್ಲಿ 1 ಲಕ್ಷ ಮನೆಗಳ ನಿರ್ಮಾಣ ಕುರಿತು ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಟ್ಟಡ ನಕ್ಷೆ ಮಂಜೂರಾತಿ, ಈ ವೇಳೆ ಎದುರಾಗುವ ಕಾನೂನು ತೊಡಕುಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಗೋವಿಂದರಾಜ ನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಡಿಎ ಅನುಷ್ಠಾನಗೊಳಿಸುತ್ತಿರುವ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಿದ ಸಚಿವರು, ‘ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಮತ್ತೆ ಕೈಗೆತ್ತಿಕೊಳ್ಳಬೇಕು. ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ತಿಳಿಸಿದರು.

ADVERTISEMENT

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ‘ಈ ಕುರಿತು ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಬಿಡಿಎ ಆಯುಕ್ತ ಎಂ.ಬಿ.ರಾಜೇಶ್‍ಗೌಡ, ಎಂಜಿನಿಯರಿಂಗ್ ಸದಸ್ಯ ಶಾಂತರಾಜಣ್ಣ, ಆರ್ಥಿಕ ಸದಸ್ಯ ರಾಮ್‍ಪ್ರಸಾದ್, ನಗರ ಯೋಜಕ ಧನಂಜಯ ರೆಡ್ಡಿ ಹಾಗೂ ರಾಜೀವ್‍ಗಾಂಧಿ ವಸತಿ ನಿಗಮದ ಹಿರಿಯ ಅಧಿಕಾರಿಗಳು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.