ADVERTISEMENT

ನಿಯೋಜಿತ ಪೊಲೀಸ್‌ ಸಿಬ್ಬಂದಿ ಬಿಡುಗಡೆ– ಪತ್ರ ಸಮರ

ನಿಯೋಜನೆ ರದ್ದುಪಡಿಸಿದ ನಗರ ಪೊಲೀಸ್‌ ಕಮಿಷನರೇಟ್‌ * ಸಿಬ್ಬಂದಿ ಕೊರತೆ ಇದೆ– ಬಿಡಿಎ ವಾದ

ಪ್ರವೀಣ ಕುಮಾರ್ ಪಿ.ವಿ.
Published 9 ನವೆಂಬರ್ 2020, 15:41 IST
Last Updated 9 ನವೆಂಬರ್ 2020, 15:41 IST
   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಜಾರಿ ದಳದಲ್ಲಿ ನಿಯೋಜನೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಯನ್ನು ಮಾತೃ ಇಲಾಖೆಗೆ ಕಳುಹಿಸುವ ಕುರಿತು ಬಿಡಿಎ ಹಾಗೂ ನಗರ ಪೊಲೀಸ್‌ ಕಮಿಷನರೇಟ್‌ ನಡುವೆ ಪತ್ರ ಸಮರ ನಡೆಯುತ್ತಿದೆ.

ಸತತ ಐದು ವರ್ಷಗಳಿಗಿಂತ ಹೆಚ್ಚು ಕಾಲ ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿಯನ್ನು ಮಾತೃ ಇಲಾಖೆಯ ಸೇವೆಗೆ ಮರಳಿಸುವಂತೆ ಪೊಲೀಸ್‌ ಕಮಿಷನರ್‌ ಕಚೇರಿ ಬಿಡಿಎ ಆಯುಕ್ತರಿಗೆ ಪತ್ರ ಬರೆದಿದೆ. ಆದರೆ, ನುರಿತ ಸಿಬ್ಬಂದಿ ಕೊರತೆಯಿರುವುದರಿಂದ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಮಾತೃ ಇಲಾಖೆಗೆ ಕಳುಹಿಸಲು ಬಿಡಿಎ ಒಪ್ಪುತ್ತಿಲ್ಲ.

ನಿಯೋಜನೆ ಅವಧಿ ಮುಗಿದ ಬಳಿಕವೂ ಬಿಡಿಎಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 14 ಮಂದಿ ಸಿಬ್ಬಂದಿಯ ನಿಯೋಜನಾ ಆದೇಶವನ್ನು ಆಗಿನ ನಗರ ಪೊಲೀಸ್‌ ಆಯುಕ್ತ ಭಾಸ್ಕರ ರಾವ್‌ ಅವರು 2020ರ ಮಾ.5ರಂದು ರದ್ದುಪಡಿಸಿದ್ದರು. ಅಷ್ಟೂ ಸಿಬ್ಬಂದಿ ಇಲಾಖೆಗೆ ವರದಿ ಮಾಡಿಕೊಂಡ ಬಳಿಕ ಹೊಸತಾಗಿ ಸಿಬ್ಬಂದಿಯನ್ನು ನಿಯೋಜನೆ ಮಾಡುವುದಾಗಿ ಆದೇಶದಲ್ಲಿ ತಿಳಿಸಿದ್ದರು. ಆ ಬಳಿಕ 8 ಸಿಬ್ಬಂದಿ ಮಾತೃ ಇಲಾಖೆಯಲ್ಲಿ ವರದಿ ಮಾಡಿಕೊಂಡಿದ್ದರು.

ADVERTISEMENT

ಇನ್ನುಳಿದ ಆರು ಸಿಬ್ಬಂದಿಯನ್ನು ಮಾತೃ ಇಲಾಖೆಯಲ್ಲಿ ವರದಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್‌ ಕಮಿಷನರ್‌ ಕಚೇರಿ ಅಧಿಕಾರಿಗಳು ಬಿಡಿಎ ಆಯುಕ್ತರಿಗೆ ಜೂನ್‌ 11ರಂದು ಪತ್ರ ಬರೆದಿದ್ದರು. ಆ ಬಳಿಕವೂ ಈ ಆರು ಮಂದಿ ಸಿಬ್ಬಂದಿ ಪೊಲೀಸ್‌ ಕಮಿಷನರೇಟ್‌ನಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರಲಿಲ್ಲ. ಹಾಗಾಗಿ ಜೂ.22ರಂದು ಪೊಲೀಸ್‌ ಆಯುಕ್ತರ ಕಚೇರಿಯಿಂದ ಮತ್ತೆ ಬಿಡಿಎ ವಿಶೇಷ ಜಾರಿ ದಳದ ಪೊಲೀಸ್‌ ವರಿಷ್ಠಾಧಿಕಾರಿಗೆ ಪತ್ರ ಬರೆದು, ‘ಮಾತೃ ಇಲಾಖೆಗೆ ವರದಿ ಮಾಡಿಕೊಳ್ಳದ ಆರು ಮಂದಿ ಸಿಬ್ಬಂದಿಗೆ ಜೂನ್‌ ತಿಂಗಳ ವೇತನ ತಡೆ ಹಿಡಿಯಲಾಗಿದೆ. ಜೂನ್‌ ತಿಂಗಳ ವೇತನ ಪಾವತಿಸಿದರೆ ನೀವೇ ಹೊಣೆಗಾರರಾಗುತ್ತೀರಿ’ ಎಂದು ಸೂಚಿಸಿತ್ತು.

ಇಷ್ಟೆಲ್ಲ ಆಗಿಯೂಬಿ.ಎಸ್‌ ನಾಗೇಂದ್ರ ಹಾಗೂ ಸಿ.ಆರ್‌.ಮಂಜು ಅವರು ಇನ್ನೂ ಮಾತೃ ಇಲಾಖೆಗೆ ವರದಿ ಮಾಡಿಕೊಂಡಿಲ್ಲ. ಈ ಬಗ್ಗೆ ಪೊಲೀಸ್‌ ಇಲಾಖೆಯ ಕೇಂದ್ರಸ್ಥಾನ–1ರ ಐಜಿಪಿ ಆರ್‌.ಹಿತೇಂದ್ರ ಅವರು ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಈ ಇಬ್ಬರು ಸಿಬ್ಬಂದಿಯನ್ನು ಬಿಡಿಎ ಕರ್ತವ್ಯದಿಂದ ಬಿಡುಗಡೆಗೊಳಿಸಿ ಮಾತೃ ಇಲಾಖೆಗೆ ಕಳುಹಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಡಿಎ ವಿಶೇಷ ಜಾರಿದಳ ವಿಭಾಗದ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಶಿವಕುಮಾರ್‌ ಗುನಾರೆ, ‘ನಮ್ಮಲ್ಲೂ ಸಿಬ್ಬಂದಿ ಕೊರತೆ ತೀವ್ರವಾಗಿದೆ. ಐದು ವರ್ಷ ಮೀರಿದವರ ಸೇವೆ ಬಿಡಿಎಗೆ ಅವಶ್ಯಕತೆ ಇದ್ದರೆ ಸರ್ಕಾರದಿಂದ ಅನುಮೋದನೆ ಪಡೆಯುವಂತೆ ಪೊಲೀಸ್‌ ಕಮಿಷನರ್‌ ಅವರ ಕಚೇರಿಯು ಈ ಹಿಂದೆ ಸೂಚಿಸಿದೆ. ಆ ಪ್ರಕಾರ ಸರ್ಕಾರದ ಅನುಮೋದನೆಗಾಗಿ ಪತ್ರ ಬರೆದಿದ್ದೇವೆ’ ಎಂದರು.

ಫೋರ್ಜರಿ ಪ್ರಕರಣ ಪತ್ತೆ ಹಚ್ಚಿದ್ದಕ್ಕಾಗಿ ಒತ್ತಡ?

‘ಬಿಡಿಎ ವಿಶೇಷ ಜಾರಿ ದಳದ ಕಾರ್ಯವೈಖರಿ ಪೊಲೀಸ್‌ ಇಲಾಖೆಯ ಕಾರ್ಯವೈಖರಿಗಿಂತ ಭಿನ್ನ. ಇದಕ್ಕೆ ಅನುಭವ ಇರುವ ಸಿಬ್ಬಂದಿ ಇದ್ದರೆ ಒಳ್ಳೆಯದು. ಇತ್ತೀಚೆಗೆ ಫೋರ್ಜರಿ ಪ್ರಕರಣಗಳನ್ನು ಬೆಳಕಿಗೆ ತರುವಲ್ಲಿ ಈ ಇಬ್ಬರು ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಭಾವಿಸಿ ಕೆಲವರು ಇವರನ್ನು ಬಿಡಿಎ ಕರ್ತವ್ಯದಿಂದ ಬಿಡುಗಡೆಗೊಳಿಸುವ ಹುನ್ನಾರ ನಡೆಸುತ್ತಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

‘ಐದು ವರ್ಷಕ್ಕಿಂತ ಹೆಚ್ಚು ಕಾಲ ಬಿಡಿಎ ವಿಶೇಷ ಜಾರಿ ದಳದಲ್ಲಿದ್ದ ಅನೇಕ ಸಿಬ್ಬಂದಿ ಈಗಾಗಲೇ ಮಾತೃ ಇಲಾಖೆಗೆ ಮರಳಿದ್ದಾರೆ. ಆದರೆ ಈ ಇಬ್ಬರು ಸಿಬ್ಬಂದಿ ಮಾತ್ರ ರಾಜಕೀಯ ಒತ್ತಡ ತಂದು ಇಲ್ಲೇ ಉಳಿದಿದ್ದಾರೆ’ ಎಂಬ ಆರೋಪವೂ ಇವರಿಬ್ಬರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.