ADVERTISEMENT

ಎಸ್‌ಟಿಪಿ ನಿರ್ಮಾಣಕ್ಕೆ ₹ 3.5 ಕೋಟಿ– ಭರವಸೆ

ಆಲೂರು, ಹುಣ್ಣೆಗೆರೆ ವಸತಿ ಯೋಜನೆ: ಬಿಡಿಎ ಅಧ್ಯಕ್ಷ ಭೇಟಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 16:24 IST
Last Updated 9 ಜನವರಿ 2021, 16:24 IST
ಹುಣ್ಣಿಗೆರೆಯಲ್ಲಿ ಬಿಡಿಎ ನಿರ್ಮಿಸುತ್ತಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯದ ಕಾಮಗಾರಿಯನ್ನು ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌  ಶನಿವಾರ ಪರಿಶೀಲಿಸಿದರು
ಹುಣ್ಣಿಗೆರೆಯಲ್ಲಿ ಬಿಡಿಎ ನಿರ್ಮಿಸುತ್ತಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯದ ಕಾಮಗಾರಿಯನ್ನು ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌  ಶನಿವಾರ ಪರಿಶೀಲಿಸಿದರು   

ಬೆಂಗಳೂರು: ಆಲೂರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ಅಪಾರ್ಟ್‌ಮೆಂಟ್ ಸಮುಚ್ಚಯಕ್ಕೆ ತ್ಯಾಜ್ಯನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಿಸಲು ₹ 3.5 ಕೋಟಿ ಅನುದಾನ ಒದಗಿಸುವುದಾಗಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್ ಭರವಸೆ ನೀಡಿದರು.

‌ಅವರು ಆಲೂರಿನಲ್ಲಿ ಬಿಡಿಎ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ಶನಿವಾರ ಭೇಟಿ ನೀಡಿ ನಿವಾಸಿಗಳ ಅಹವಾಲು ಆಲಿಸಿದರು.

‘ಆಲೂರಿನ ಅಪಾರ್ಟ್‌ಮೆಂಟ್‌ ಸಮುಚ್ಚಯಕ್ಕೆ ಮೂಲಸೌಕರ್ಯವನ್ನು ಆದ್ಯತೆ ಮೇಲೆ ಪೂರೈಸಲಾಗುತ್ತದೆ. ಈ ಬಗ್ಗೆ ಮುಂದಿನ ವಾರ ನಡೆಯಲಿರುವ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಮೂಲಸೌಕರ್ಯ ಕೊರತೆ ಬಗ್ಗೆ ಬಿಡಿಎ ಆಯುಕ್ತರ ಜತೆ ಚರ್ಚಿಸುತ್ತೇನೆ. ಎಸ್‌ಟಿಪಿಯ ಟೆಂಡರ್ ಪ್ರಕ್ರಿಯೆಗಳನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ ಕಾಮಗಾರಿಯನ್ನೂ ಶೀಘ್ರವೇ ಆರಂಭಿಸಲು ಸೂಚಿಸುತ್ತೇನೆ’ ಎಂದರು.

ADVERTISEMENT

ಇಲ್ಲಿನ 1 ಬಿಎಚ್‌ಕೆ ಫ್ಲ್ಯಾಟ್ ಗಳಲ್ಲಿ ನೀರು ಸೋರಿಕೆ ಆಗುತ್ತಿದೆ. ಈ ಅಪಾರ್ಟ್‌ಮೆಂಟ್‌ ಸಮುಚ್ಚಯಕ್ಕೆ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿಲ್ಲ ಎಂದು ನಿವಾಸಿಗಳು ಅಹವಾಲು ತೋಡಿಕೊಂಡರು.

‘ಪ್ರತಿಯೊಂದು ಫ್ಲ್ಯಾಟ್‌ಗೂ ಪ್ರತ್ಯೇಕ ತೊಟ್ಟಿ ಅಳವಡಿಸುವಂತೆ ಬಿಡಿಎ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನೀರು ಸೋರಿಕೆ ತಡೆಯಲು ದುರಸ್ತಿ ಕಾಮಗಾರಿಯನ್ನು ತಕ್ಷಣವೇ ಆರಂಭಿಸುವಂತೆ ತಾಕೀತು ಮಾಡಿದರು.

ಹುಣ್ಣಿಗೆರೆ ವಸತಿ ಯೋಜನೆ ಪ್ರದೇಶಕ್ಕೂ ಭೇಟಿ ನೀಡಿದ ಅಧ್ಯಕ್ಷರು ಅಲ್ಲಿನ ಅಪಾರ್ಟ್‌ಮೆಂಟ್ ಸಮುಚ್ಚಯ ಹಾಗೂ ಸ್ವತಂತ್ರ ವಿಲ್ಲಾ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿದರು.

‘ಬಿಡಿಎ ಪಾಲಿಗೆ ಇದು ಮಹತ್ವಾಕಾಂಕ್ಷಿ ಮತ್ತು ಮಾದರಿ ಯೋಜನೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ವಸತಿ ಹಂಚಿಕೆಗೆ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ತಿಳಿಸಿದರು.

ಆವರಣ ಗೋಡೆ ನಿರ್ಮಾಣಕ್ಕೆ ತಕರಾರು–ಇತ್ಯರ್ಥ

ಆಲೂರಿನ ಬಿಡಿಎ ಅಪಾರ್ಟ್‌ಮೆಂಟ್ ಸಮುಚ್ಚಯದ ಆವರಣದಲ್ಲಿ ತಡೆಗೋಡೆ ನಿರ್ಮಿಸಲು ಭೂಮಾಲೀಕರೊಬ್ಬರು ತಕರಾರು ತೆಗೆದು, ಪ್ರಕರಣವನ್ನೂ ದಾಖಲಿಸಿದ್ದಾರೆ. ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳು ಈ ವಿಚಾರವನ್ನು ಬಿಡಿಎ ಅಧ್ಯಕ್ಷರ ಗಮನಕ್ಕೆ ತಂದರು. ತಕರಾರು ತೆಗದಿರುವ ರೈತರನ್ನು ತಕ್ಷಣವೇ ಕರೆಯಿಸಿದ ಅಧ್ಯಕ್ಷರು ಆವರಣ ಗೋಡೆ ನಿರ್ಮಿಸಲು ಅವಕಾಶ ಮಾಡಿಕೊಡುವಂತೆ ಕೋರಿದರು. ಇದಕ್ಕೆ ಸಮ್ಮತಿಸಿದ ರೈತ ಜಂಟಿ ಸರ್ವೆ ನಡೆಸಿದ ನಂತರ ಭೂಮಿಯನ್ನು ಬಿಟ್ಟುಕೊಡುವುದಾಗಿ ವಾಗ್ದಾನ ಮಾಡಿದರು.

ಕಂದಾಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ವಾರದೊಳಗೆ ಜಂಟಿ ಸರ್ವೆ ನಡೆಸಿ ಗೋಡೆ ನಿರ್ಮಾಣ ಆರಂಭಿಸುವಂತೆ ಅಧಿಕಾರಿಗಳಿಗೆ ವಿಶ್ವನಾಥ್‌ ಸೂಚನೆ ನೀಡಿದರು. ಅಪಾರ್ಟ್‌ಮೆಂಟ್‌ ಸಮುಚ್ಚಯಕ್ಕೆ ರಸ್ತೆ ನಿರ್ಮಾಣ, ಉದ್ಯಾನ ಮತ್ತು ಮಕ್ಕಳಿಗೆ ಆಟೋಟ ಚಟುವಟಿಕೆಗೆ ಪರಿಕರಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.