ADVERTISEMENT

₹1 ಸಾವಿರ ಕೋಟಿ ಅನುದಾನ ಕೇಳಲು ಬಿಡಿಎ ಸಿದ್ಧ

ಬಜೆಟ್‌ಪೂರ್ವ ಸಭೆಯಲ್ಲಿ ಪ್ರಸ್ತಾವ ಮಂಡಿಸಲು ಅಧಿಕಾರಿಗಳ ತಯಾರಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 19:53 IST
Last Updated 16 ಜನವರಿ 2019, 19:53 IST

ಬೆಂಗಳೂರು: ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರದಿಂದ ₹1 ಸಾವಿರ ಕೋಟಿ ಅನುದಾನ ಕೇಳಲು ಮುಂದಾಗಿದೆ.

ವಿವಿಧ ಇಲಾಖೆಗಳಿಗೆ ಬೇಕಾದ ಅನುದಾನ ನಿಗದಿಪಡಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಬಜೆಟ್‌ಪೂರ್ವ ಸಭೆಯಲ್ಲಿ ಈ ಪ್ರಸ್ತಾವ ಮಂಡಿಸುವುದಕ್ಕೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ನಗರದಲ್ಲಿ 65 ಕಿಲೋಮೀಟರ್‌ ಉದ್ದದ ಹೊರ ವರ್ತುಲ ರಸ್ತೆ ನಿರ್ಮಾಣ ಹೊರತುಪಡಿಸಿ ಉಳಿದ ಕಾಮಗಾರಿಗಳಿಗೆ ₹1 ಸಾವಿರ ಕೋಟಿ ಕೇಳಲು ಬಿಡಿಎ ನಿರ್ಧರಿಸಿದೆ ಎಂದು ಪ್ರಾಧಿಕಾರದ ಮೂಲಗಳು ಹೇಳಿವೆ.

ಹೆಬ್ಬಾಳ, ಗೊರಗುಂಟೆಪಾಳ್ಯ ಫ್ಲೈ ಓವರ್‌ನ ವಿಸ್ತರಣೆ ಮಾಡುವ ಜತೆಗೆ ಸಂಪರ್ಕ ರಸ್ತೆಯನ್ನೂ ಕಲ್ಪಿಸುವುದಕ್ಕಾಗಿ ಅನುದಾನ ಕೇಳಲು ಬಿಡಿಎ ನಿರ್ಧರಿಸಿದೆ. ‘ಗೊರಗುಂಟೆ ಪಾಳ್ಯ ಫ್ಲೈಓವರ್‌ನಲ್ಲಿ ವಿಸ್ತರಣೆ ಕಾಮಗಾರಿ ಕೈಗೊಳ್ಳುವುದಾದರೆ ಇನ್ನಷ್ಟು ಹಣ ಬೇಕಾಗುತ್ತದೆ. ಏಕೆಂದರೆ ಇಲ್ಲಿ ಖಾಸಗಿಯವರಿಗೆ ಸೇರಿದ ಭೂಮಿ ಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ. ಈ ಮೊತ್ತದ ಬಳಕೆ ಪ್ರಸ್ತಾವಿತ ಉಕ್ಕಿನ ಸೇತುವೆಗೆ ಹೆಬ್ಬಾಳ ಫ್ಲೈಓವರ್‌ ಸಂಪರ್ಕಿಸುವ ಕಾಮಗಾರಿಯನ್ನು ಒಳಗೊಂಡಿರುವುದಿಲ್ಲ’ ಎಂದು ಬಿಡಿಎ ಮೂಲಗಳು ಹೇಳಿವೆ.

ADVERTISEMENT

‘ಬೆಳ್ಳಂದೂರು ಸಹಿತ ಬಿಡಿಎ ಸ್ವಾಧೀನದಲ್ಲಿರುವ ಕೆರೆಗಳ ಪುನಶ್ಚೇತನಕ್ಕಾಗಿಯೂ ಅನುದಾನ ಕೋರಲಾಗುವುದು. ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗುವುದು. ಈ ಕೆರೆಗಳ ಮೇಲೆ ಕಾಳಜಿವಹಿಸಲು ಸ್ಥಳೀಯರ ಗುಂಪುಗಳನ್ನು ರಚಿಸಲಾಗುವುದು. ನಗರದ ಕೆರೆಗಳ ನಿರ್ವಹಣೆಯನ್ನು ಸಮುದಾಯದ ಉಸ್ತುವಾರಿಗೆ ಬಿಡಲಾಗುವುದು. ಪ್ರತಿ ಬಾರಿ ಕೆರೆಗಳನ್ನು ಪುನರುಜ್ಜೀವನಗೊಳಿಸಿದಾಗ ನಿರ್ವಹಣೆ, ಕಾಳಜಿ ಕೊರತೆಯಿಂದಾಗಿ ಮತ್ತೆ ಅವು ಹಳೆ ಸ್ಥಿತಿಗೆ ಹೋದ ಉದಾಹರಣೆಗಳಿವೆ. ಈ ಬಾರಿ ಹೀಗಾಗಬಾರದು’ ಎಂದು ಮೂಲಗಳು ವಿವರಿಸಿವೆ.

ಹೊರ ವರ್ತುಲ ರಸ್ತೆಗೆ ಮತ್ತೆ ₹4 ಸಾವಿರ ಕೋಟಿ ಕೇಳಲು ಬಿಡಿಎ ಸಿದ್ಧತೆ ನಡೆಸಿದೆ. ಸಚಿವ ಸಂಪುಟ ಈ ರಸ್ತೆ ಕಾಮಗಾರಿಗೆ ಈಗಾಗಲೆ ₹2,500 ಕೋಟಿ ಮಂಜೂರು ಮಾಡಿದೆ. ಭೂಸ್ವಾಧೀನ ಮತ್ತು ಕಾಮಗಾರಿ ವೇಗವರ್ಧನೆಗಾಗಿ ಇನ್ನಷ್ಟು ಹಣ ಬೇಕಿದೆ. ಹೀಗಾಗಿ ಈ ಕಾಮಗಾರಿಗೆ ಒಟ್ಟು ₹6,500 ಕೋಟಿ ಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.