ADVERTISEMENT

ಬಿಡಿಎ ಜಮೀನು ಮರುಮಂಜೂರಾತಿಯಲ್ಲಿ ಅಕ್ರಮ; ಇಬ್ಬರು ನೌಕರರಿಗೆ ನೋಟಿಸ್‌

ಪ್ರವೀಣ ಕುಮಾರ್ ಪಿ.ವಿ.
Published 5 ಜನವರಿ 2021, 19:30 IST
Last Updated 5 ಜನವರಿ 2021, 19:30 IST
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ   

ಬೆಂಗಳೂರು: ಮಡಿವಾಳ ಗ್ರಾಮದ ಸರ್ವೆ ನಂಬರ್‌ 53ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸ್ವಾಧೀನಪಡಿಸಿಕೊಂಡಿದ್ದ ಜಮೀನಿನಲ್ಲಿ 33 ಗುಂಟೆ ಜಮೀನಿನ ಮರುಮಂಜೂರಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬಿಡಿಎ ಆಯುಕ್ತ ಎಚ್‌.ಆರ್‌.ಮಹದೇವ್‌ ಅವರು ಉಪಕಾರ್ಯದರ್ಶಿ –1 ಅವರ ಕಚೇರಿಯ ವಿಷಯ ನಿರ್ವಾಹಕ ಭಯ್ಯಾ ರೆಡ್ಡಿ ಹಾಗೂ ಮೇಲ್ವಿಚಾರಕ ಗಂಗಾಧರ್‌ ಅವರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದಾರೆ.

ಈಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರಾಗಿರುವ ವಸಂತ ಕುಮಾರ್‌ ಅವರು ಬಿಡಿಎ ಉಪಾಯುಕ್ತರಾಗಿದ್ದಾಗ ಈ ಅಕ್ರಮ ನಡೆದಿದೆ. ಹಾಗಾಗಿ ಅವರಿಂದಲೂ ಆಯುಕ್ತರು ಸ್ಪಷ್ಟೀಕರಣ ಕೇಳಿದ್ದಾರೆ.

ಮಡಿವಾಳದಲ್ಲಿ1 ಎಕರೆ 20 ಗುಂಟೆ ಈ ಜಮೀನನ್ನು ಬಿಡಿಎ 1979ರ ಡಿ.16ರಂದು ಸ್ವಾಧೀನಪಡಿಸಿಕೊಂಡಿತ್ತು. 1980ರ ಮೇ 1ರಂದು ಭೂಮಾಲೀಕರಿಗೆ ನೀಡಬೇಕಾದ ಪರಿಹಾರವನ್ನು ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿತ್ತು. ಈ ಜಮೀನಿನ ಮಾಲೀಕರಾದ ರಾಮಯ್ಯ ರೆಡ್ಡಿ ಮತ್ತು ಗುಲ್ಲಮ್ಮ ಎಂಬುವರು ಈ ಪರಿಹಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಿಟಿ ಸಿವಿಲ್‌ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಪ್ರತಿ ಎಕರೆಗೆ ಮಾರುಕಟ್ಟೆ ದರಕ್ಕಿಂತ ₹ 6 ಸಾವಿರ ಹೆಚ್ಚುವರಿ ದರವನ್ನು ನಿಗದಿಪಡಿಸಿ ಪರಿಹಾರ ನೀಡುವಂತೆ 1992ರ ಜ. 17ರಂದು ಆದೇಶ ಮಾಡಿತ್ತು. ಆ ಬಳಿಕ ಪಹಣಿಯಲ್ಲೂ ಈ ಜಾಗ ಬಿಡಿಎ ಸ್ವತ್ತು ಎಂದು ನಮೂದಾಗಿತ್ತು.

ADVERTISEMENT

ಬ್ಯಾಂಕ್‌ ಆಫೀಸರ್ಸ್‌ ಆ್ಯಂಡ್‌ ಅಫೀಷಿಯಲ್ಸ್‌ ಎಚ್‌ಬಿಸಿಎಸ್‌ ಸೊಸೈಟಿಗೆ ಸರ್ವೆನಂಬರ್‌ 53 ಹಾಗೂ ಆಸುಪಾಸಿನ ಜಾಗವನ್ನು ಬಿಡಿಎ 1984ರಲ್ಲಿ ಸಗಟು ಹಂಚಿಕೆ ಮಾಡಿತ್ತು. ಸರ್ವೆ ನಂಬರ್‌ 53ರ ಜಾಗದಲ್ಲಿದ್ದ ಮೂಲಸೌಕರ್ಯ ನಿವೇಶನವನ್ನು ಗ್ಲಿಟೆಕ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಗೆ ಬಿಡಿಎ ಶುದ್ಧ ಕ್ರಯಪತ್ರ ಮಾಡಿಕೊಟ್ಟಿತ್ತು. ಈ ನಡುವೆ, ರಾಮಯ್ಯ ರೆಡ್ಡಿ ಮತ್ತು ನಾಗಮ್ಮ ಕೋರಿಕೆ ಮೇರೆಗೆ ಪ್ರಾಧಿಕಾರದ ಸಭೆಯಲ್ಲಿ ಸರ್ವೆ ನಂಬರ್‌ 53ರಲ್ಲಿ 33 ಗುಂಟೆ ಜಮೀನಿನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಚರ್ಚಿಸಲಾಗಿತ್ತು. ಬಳಿಕ ತ್ರಿಸದಸ್ಯ ಸಮಿತಿ ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಭೂಪರಿಹಾರ ಪಾವತಿಸಿರುವುದರಿಂದ ಭೂಸ್ವಾಧೀನ ಪ್ರಕ್ರಿಯೆಯಿಂದ ಈ ಜಾಗ ಕೈಬಿಡಲು ಅವಕಾಶ ಇಲ್ಲ ಎಂದು ಶಿಫಾರಸು ಮಾಡಿತ್ತು. ಆ ಪ್ರಕಾರ ಈ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಪ್ರಾಧಿಕಾರದ ಸಭೆಯಲ್ಲಿ 1993ರ ಸೆ. 27ರಂದು ತೀರ್ಮಾನ ಕೈಗೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ರಾಮಯ್ಯ ರೆಡ್ಡಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಜಾಗ ಬ್ಯಾಂಕ್‌ ಆಫೀಸರ್ಸ್‌ ಆ್ಯಂಡ್‌ ಅಫೀಷಿಯಲ್ಸ್‌ ಎಚ್‌ಬಿಸಿಎಸ್‌ ಸೊಸೈಟಿಗೆ ಹಂಚಿಕೆಯಾದ ವಿಚಾರ ಮರೆಮಾಚಿ, ತಾವೇ 33 ಗುಂಟೆ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸವಿರುವುದಾಗಿ ಹೇಳಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. 2014ರಲ್ಲಿ ಹೈಕೋರ್ಟ್‌ ಅರ್ಜಿದಾರರಿಗೆ 33 ಗುಂಟೆ ಜಮೀನು ಮರುಮಂಜೂರಾತಿ ಮಾಡುವಂತೆ ಆದೇಶ ಮಾಡಿತ್ತು.

’ಭೂಮಾಲಿಕರು ಅದಾಗಲೇ ಹೆಚ್ಚುವರಿ ಪರಿಹಾರ ಪಡೆದಿರುವುದರಿಂದ ಬದಲಿ ನಿವೇಶನ ಅಥವಾ ಮರುಮಂಜೂರಾತಿ ಸವಲತ್ತು ಪಡೆಯಲು ಅರ್ಹರಲ್ಲ. ಈ ರೀತಿ ಕ್ರಮ ಜರುಗಿಸಲು ಭೂಸ್ವಾಧೀನ ಕಾಯ್ದೆಯಲ್ಲೂ ಅವಕಾಶವಿಲ್ಲ. ಈ ವಿಚಾರವನ್ನು ಸಿಬ್ಬಂದಿ ನ್ಯಾಯಾಲಯದ ಗಮನಕ್ಕೆ ತರಲು ಕ್ರಮಕೈಗೊಂಡಿಲ್ಲ. ಈ ವಿವಾದಿತ ಜಮೀನಿನಲ್ಲಿ ರಾಮಯ್ಯ ಅವರು ಯಾವುದೇ ಮನೆ ನಿರ್ಮಿಸಿಕೊಂಡಿಲ್ಲ. ಈ ಜಾಗ ಖಾಲಿ ಇದೆ‘ ಎಂದು ಸರ್ವೇಯರ್‌ ಹಾಗೂ ಎಂಜಿನಿಯರ್‌ಗಳು ಅಭಿಪ್ರಾಯ ನೀಡಿದ್ದರು. ಆದರೂ, ‘ವಿವಾದಿತ ನಿವೇಶನದಲ್ಲಿ ರಾಮಯ್ಯ ರೆಡ್ಡಿ ಮನೆ ನಿರ್ಮಿಸಿಕೊಂಡಿರುವುದರಿಂದ ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲ’ ಎಂದು ಕಾನೂನು ಅಧಿಕಾರಿಗಳು ತಪ್ಪುಗ್ರಹಿಕೆಯಿಂದ ಅಭಿಪ್ರಾಯ ನೀಡಿದ್ದರು. ಅದನ್ನು 2015ರ ಜ 21ರಂದು ಬಿಡಿಎ ಆಯುಕ್ತರು ಅನುಮೋದಿಸಿದ್ದರು.

ರಾಮಯ್ಯ ರೆಡ್ಡಿ ಅವರ ಮಕ್ಕಳಾದ ತಿಮ್ಮರಾಯಪ್ಪ, ಆರ್‌.ಸುಂದರ ರೆಡ್ಡಿ ಹಾಗೂ ನಾಗಮ್ಮ ಅವರ ಜಿಪಿಎ ಹೊಂದಿದ್ದ ಶ್ರೀನಿವಾಸ ರೆಡ್ಡಿ ಅವರಿಂದ 10 ಗುಂಟೆ ಜಮೀನನ್ನು (ತಲಾ 5 ಗುಂಟೆ) ಎನ್‌.ಶಫೀಕ್‌ ಅಹಮದ್‌ ಮತ್ತು ಶಮೀಲ್‌ ಅಹಮದ್‌ ಖರೀದಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಉಪನೋಂದಣಾಧಿಕಾರಿ ಕಚೇರಿಯಲ್ಲಿ 1999ರ ಸೆ. 08ರಂದು ನೋಂದಣಿ ಮಾಡಲಾಗಿದೆ. ಈ 10 ಗುಂಟೆ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಅವರು ಕೋರಿದ್ದರು. ಈ ವಿಚಾರಗಳೆಲ್ಲವೂ ಉಪಾಯುಕ್ತರಿಗೆ ಹಾಗೂ ಸಿಬ್ಬಂದಿಗೆ ತಿಳಿದಿತ್ತು.

ಸರ್ವೆ ನಂಬರ್‌ 53ರಲ್ಲಿ 1999ರಲ್ಲಿ ಮಾರಾಟ ಮಾಡಲಾದ ಜಮೀನನ್ನೂ ಸೇರಿಸಿಕೊಂಡು ವ್ಯಕ್ತಿಯೊಬ್ಬರ ಹೆಸರಿಗೆ 2014ರ ನ. 7ರಂದು ತಿಮ್ಮರಾಯಪ್ಪ, ಮುರಳಿ, ಜಿ.ಪ್ರೇಮ ಮತ್ತು ನಾಗಮ್ಮ ತಿಲಕನಾಥರೆಡ್ಡಿ ಅವರು ಪ್ರಾಧಿಕಾರ ಸ್ವಾಧೀನ ಪಡಿಸಿಕೊಂಡ 1 ಎಕರೆ 18 ಗುಂಟೆ ಜಮೀನಿಗೆ ಜಿಪಿಎ ನೀಡಿದ್ದಾರೆ. ಅವರ ಹೆಸರಿನ 2049 ಚದರ ಅಡಿ ಜಾಗಕ್ಕೆ ಪ್ರತಿಯಾಗಿ ಆದರೂ 0.20 ಗುಂಟೆ ಜಮೀನಿಗೆ ಮರುಮಂಜೂರಾತಿ ಹಾಗೂ 0–13 ಗುಂಟೆ ಜಮೀನಿಗೆ ಬೇರೆ ಬಡಾವಣೆಯಲ್ಲಿ ಅಕ್ರಮವಾಗಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ.

ಉಪಾಯುಕ್ತರು ಆರ್‌ ಆ್ಯಂಡ್‌ ಆರ್‌ ವಿಭಾಗದಿಂದ ಸ್ಪಷ್ಟ ಮಾಹಿತಿ ಪಡೆಯದೆ ನೇರವಾಗಿ ಉಪಕಾರ್ಯದರ್ಶಿ–1 ಅವರ ಕಚೇರಿಗೆ ರವಾನಿಸಿದ್ದಾರೆ. ಮರುಮಂಜೂರಾತಿ ಮಾಡಬೇಕಾದ 13 ಗುಂಟೆ ಜಾಗಕ್ಕೆ ಅಭಿವೃದ್ಧಿಪಡಿಸಿ 15 ಸಾವಿರ ಚ.ಅಡಿ ಜಾಗವನ್ನು ನಿಯಮಬಾಹಿರವಾಗಿ ಹಂಚಿಕೆ ಮಾಡಿದ್ದಾರೆ ಎಂದೂ ಆರೋಪಿಸಲಾಗಿದೆ.

ಬಿಡಿಎ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದ ಜಮೀನಿಗೆ ಮರುಮಂಜೂರಾತಿ ಮಾಡಬಾರದು ಎಂದು 1986ರ ಮೇ 8ರಂದು ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿತ್ತು. ಅದನ್ನು ಪಾಲಿಸಿಲ್ಲ. ಖಚಿತ ಅಳತೆ ವರದಿ ನೀಡುವ ವಿಚಾರದಲ್ಲೂ ಸಿಬ್ಬಂದಿ ಜಿಪಿಎ ಹೊಂದಿದ್ದ ವ್ಯಕ್ತಿ ಜೊತೆ ಶಾಮೀಲಾಗಿ ಅಕ್ರಮ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.