ADVERTISEMENT

ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡಿ: ಅನಂತ ಹೆಗಡೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 13:51 IST
Last Updated 11 ಡಿಸೆಂಬರ್ 2025, 13:51 IST
ಬೇಡ್ತಿ ನದಿ 
ಬೇಡ್ತಿ ನದಿ    

ಬೆಂಗಳೂರು: ‘ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆ ಅವೈಜ್ಞಾನಿಕವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದನ್ನು ಕೈಬಿಡಬೇಕು’ ಎಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಆಗ್ರಹಿಸಿದರು. 

ಗುರುವಾರ ಇಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ಬೇಡ್ತಿ ಹಾಗೂ ಅಘನಾಶಿನಿ ನದಿಗಳನ್ನು ತಿರುಗಿಸಿ, ಆ ನೀರನ್ನು ಬಯಲುಸೀಮೆಗೆ ಹರಿಸುವ ನದಿ ತಿರುವು ಯೋಜನೆಯಿಂದ ಸ್ಥಳೀಯರ ಜನಜೀವನ ಅಸ್ತವ್ಯಸ್ತವಾಗಲಿದೆ. ಇಲ್ಲಿನ ಕೃಷಿ, ಪರಿಸರ, ಭವಿಷ್ಯದ ಸುರಕ್ಷತೆಯ ಮೇಲೆ ಪರಿಣಾಮ ಬೀರಲಿದೆ’ ಎಂದು ತಿಳಿಸಿದರು. 

‘ಬೇಡ್ತಿ–ಅಘನಾಶಿನಿ ನದಿಗಳು ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಹಾಗೂ ಕೆಳಗಿನ ಪ್ರದೇಶಗಳ ಜನವಸತಿ, ಕೃಷಿಭೂಮಿ, ಕಾಡು, ಗೋಮಾಳ, ಕೆರೆಗಳಿಗೆ ನಿರಂತರ ನೀರು ಒದಗಿಸುವ ಜಲಮೂಲವಾಗಿವೆ. ಈ ಯೋಜನೆಯಿಂದ ನದಿಗಳಲ್ಲಿ ಹರಿಯಬೇಕಾದ ಕನಿಷ್ಠ ಸ್ವಾಭಾವಿಕ ಪ್ರವಾಹವೂ ಕಣ್ಮರೆಯಾಗಿ, ನೀರಿನ ಕೊರತೆ ಉಂಟಾಗಲಿದೆ. ಈಗಾಗಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲಾಗಿದ್ದು, ಕಾಮಗಾರಿ ಪ್ರಾರಂಭಿಸಿದರೆ ಕಾಡು ಪ್ರದೇಶ ಹಾಗೂ ಜೀವವೈವಿಧ್ಯತೆ ನಾಶವಾಗಲಿದೆ’ ಎಂದರು.  

ADVERTISEMENT

‘‌ಈ ಯೋಜನೆಯಿಂದ ಬೇಡ್ತಿ–ಅಘನಾಶಿನಿ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಲಿದೆ. ಅಲ್ಲದೆ ಅಂಕೋಲಾ ತಾಲ್ಲೂಕಿನ ಗಂಗಾವಳಿ, ಕುಮಟಾ ತಾಲ್ಲೂಕಿನ ಅಘನಾಶಿನಿ ನದಿ ತಪ್ಪಲಿನ ಪ್ರದೇಶಗಳ ಅಳಿವೆಗಳಿಗೆ ನೀರಿನ ಕೊರತೆಯಾಗಿ, ಅಲ್ಲಿನ ಕಾಂಡ್ಲಾ ಕಾಡು ನಾಶವಾಗಲಿದೆ. ಜಲಚರಗಳ ವಂಶಾಭಿವೃದ್ಧಿ ತಾಣಕ್ಕೂ ಧಕ್ಕೆಯಾಗಲಿದೆ. ಈಗಾಗಲೇ ತಲೆದೋರಿರುವ ಕರಾವಳಿಯ ಮತ್ಸ್ಯಕ್ಷಾಮ ಹೆಚ್ಚಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪತ್ರಕರ್ತ ತಿಮ್ಮಪ್ಪ ಭಟ್, ಸಮಿತಿಯ ಸದಸ್ಯರಾದ ರಮೇಶ್ ಭಟ್ ಸುದ್ದಿಗೋಷ್ಠಿಯಲ್ಲಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.