ADVERTISEMENT

ಅನುದಾನಕ್ಕೆ ಪಟ್ಟು: ಬಗೆಹರಿಯದ ಬಿಕ್ಕಟ್ಟು

ಬೆಳ್ಳಹಳ್ಳಿ ಮುಖ್ಯರಸ್ತೆಯಲ್ಲಿ ಎರಡು ದಿನದಿಂದ ನಿಂತಿರುವ 300ಕ್ಕೂ ಹೆಚ್ಚು ಕಾಂಪ್ಯಾಕ್ಟರ್‌ಗಳು 

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 22:30 IST
Last Updated 18 ಫೆಬ್ರುವರಿ 2026, 22:30 IST
ಸಾಲುಗಟ್ಟಿ ನಿಂತಿರುವ ತ್ಯಾಜ್ಯ ತುಂಬಿದ ಕಾಂಪ್ಯಾಕ್ಟರ್‌ಗಳು
ಸಾಲುಗಟ್ಟಿ ನಿಂತಿರುವ ತ್ಯಾಜ್ಯ ತುಂಬಿದ ಕಾಂಪ್ಯಾಕ್ಟರ್‌ಗಳು   

ಬೆಂಗಳೂರು: ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಮಹದೇವಪುರ ಹಾಗೂ ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದ ರಾಜಕೀಯ ಮುಖಂಡರು ಪಟ್ಟುಬಿಡದೇ ಇದ್ದಿದ್ದರಿಂದ, ತ್ಯಾಜ್ಯ ತುಂಬಿದ 300ಕ್ಕೂ ಹೆಚ್ಚು ಕಾಂಪ್ಯಾಕ್ಟರ್‌ಗಳು ಬೆಳ್ಳಹಳ್ಳಿ ಮುಖ್ಯರಸ್ತೆಯಲ್ಲಿ ಸಾಲುಗಟ್ಟಿ ನಿಂತಿವೆ.

ನಗರದಿಂದ ಮಿಶ್ರತ್ಯಾಜ್ಯ ಸಂಗ್ರಹಿಸಿಕೊಂಡ ಕಾಂಪ್ಯಾಕ್ಟರ್‌ಗಳು ಬೆಳ್ಳಹಳ್ಳಿ– ಮಿಟ್ಟಗಾನಹಳ್ಳಿ– ಕಣ್ಣೂರು ಭಾಗದಲ್ಲಿರುವ ಭೂಭರ್ತಿ ಪ್ರದೇಶದಲ್ಲಿ ವಿಲೇವಾರಿ ಮಾಡುತ್ತವೆ. ಇವುಗಳನ್ನು ಮಂಗಳವಾರ ಬೆಳಿಗ್ಗೆಯಿಂದ ತಡೆ ಹಿಡಿಯಲಾಗಿದ್ದು, ಬುಧವಾರ ರಾತ್ರಿಯವರೆಗೂ ವಿಲೇವಾರಿಗೆ ಗ್ರಾಮಸ್ಥರು ಅವಕಾಶ ನೀಡಿಲ್ಲ. ಹೀಗಾಗಿ, ನಗರದ ಹಲವು ಭಾಗಗಳಲ್ಲಿ ತ್ಯಾಜ್ಯ ಸಂಗ್ರಹ, ವಿಲೇವಾರಿ ಸ್ಥಗಿತಗೊಂಡಿದೆ.

‘ಬೆಂಗಳೂರಿನ ಕಸವನ್ನು ಇಲ್ಲಿ ವಿಲೇವಾರಿ ಮಾಡಬೇಕೆಂದರೆ ನಮ್ಮ ಭಾಗದ ಗ್ರಾಮಗಳ ಅಭಿವೃದ್ಧಿಗೆ ಅನುದಾನ ನೀಡಬೇಕು’ ಎಂದು ಒತ್ತಾಯಿಸಿ ಮಹದೇವಪುರದ ಶಾಸಕಿ ಮಂಜುಳಾ ಹಾಗೂ ಮಾಜಿ ಶಾಸಕ ಅರವಿಂದ ಲಿಂಬಾವಳಿ ಅವರು ಮಂಗಳವಾರ ಒತ್ತಾಯಿಸಿದ್ದರು. ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್‌) ಅಧಿಕಾರಿಗಳು ಸಭೆ ನಡೆಸಿ, ಅನುದಾನದ ಭರವಸೆ ನೀಡಿದ್ದರು.

ADVERTISEMENT

ಮಹದೇವಪುರ ಹಾಗೂ ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರಕ್ಕೆ ತಲಾ ₹90 ಕೋಟಿ ಅನುದಾನವನ್ನು ಬಿಎಸ್‌ಡಬ್ಲ್ಯುಎಂಎಲ್‌ ಬುಧವಾರ ಬೆಳಿಗ್ಗೆ ಬಿಡುಗಡೆ ಮಾಡಿದೆ. ಇದಕ್ಕೆ ಒಪ್ಪಿ, ಮಂಜುಳಾ, ಅರವಿಂದ ಲಿಂಬಾವಳಿ ಅವರು ತ್ಯಾಜ್ಯ ವಿಲೇವಾರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ಬೆಳ್ಳಹಳ್ಳಿ ಮುಖ್ಯರಸ್ತೆಯ ಭಾಗ ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು, ‘ನಮಗೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕು’ ಎಂದು ಸಚಿವ ಕೃಷ್ಣಬೈರೇಗೌಡರ ಬೆಂಬಲಿಗರು ಒತ್ತಾಯಿಸಿ, ಲಾರಿಗಳಿಂದ ತ್ಯಾಜ್ಯ ವಿಲೇವಾರಿಯಾಗದಂತೆ ಬುಧವಾರ ಮಧ್ಯಾಹ್ನದಿಂದ ತಡೆದಿದ್ದಾರೆ.

‘ಬ್ಯಾಟರಾಯನಪುರದ ರಾಜಕೀಯ ಮುಖಂಡರು ₹ 300 ಕೋಟಿಗೂ ಹೆಚ್ಚು ಅನುದಾನ ನೀಡಬೇಕು ಎಂದು ಬೇಡಿಕೆ ಇರಿಸಿದ್ದಾರೆ. ಆದರೆ ಅಷ್ಟು ದೊಡ್ಡ ಮೊತ್ತ ನೀಡಲು ಸಾಧ್ಯವಿಲ್ಲ. ಇದನ್ನು ಪರಿಪರಿಯಾಗಿ ಹೇಳಿದರೂ, ಆ ಮುಖಂಡರು ಒಪ್ಪುತ್ತಿಲ್ಲ. ನೀವು ಹಣ ನೀಡುವವರೆಗೂ ಲಾರಿ ಮುಂದಕ್ಕೆ ಹೋಗಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಬ್ಯಾಟರಾಯನಪುರದ ರಾಜಕೀಯ ಮುಖಂಡರ ಮನವೊಲಿಸುವ ಪ್ರಕ್ರಿಯೆ ಬುಧವಾರ ರಾತ್ರಿಯವರೆಗೂ ನಡೆದರೂ ಅದು ಸಫಲವಾಗಲಿಲ್ಲ. ಹೀಗಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮಾಹಿತಿ ನೀಡಲಾಗಿದ್ದು, ಅವರು ಸಚಿವ ಕೃಷ್ಣ ಬೈರೇಗೌಡರೊಂದಿಗೆ ಮಾತುಕತೆ ನಡೆಸಿ, ತ್ಯಾಜ್ಯ ವಿಲೇವಾರಿಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಕಳೆದ ವರ್ಷದ ಮಾರ್ಚ್‌ನಲ್ಲಿಯೂ ತ್ಯಾಜ್ಯ ವಿಲೇವಾರಿಗೆ ತಡೆ ಹಾಕಲಾಗಿತ್ತು. ಗ್ರಾಮಗಳ ಅಭಿವೃದ್ಧಿಯಾಗಬೇಕು, ದ್ರವತ್ಯಾಜ್ಯ ತೆರವುಗೊಳಿಸಬೇಕು ಎಂದು ರಾಜಕೀಯ ಪಕ್ಷಗಳ ಸ್ಥಳೀಯ ಮುಖಂಡರು ಒತ್ತಾಯಿಸಿದ್ದರು. ಅಲ್ಲದೆ, ಅನುದಾನದ ಬೇಡಿಕೆಯನ್ನೂ ಇರಿಸಿದ್ದರು. ಹೀಗೆ, ವರ್ಷದ ಹಲವು ಸಂದರ್ಭದಲ್ಲಿ ಇಂತಹ ತಡೆಯಾಗುತ್ತಿದ್ದು, ಇದಕ್ಕೆ ಶಾಶ್ವತವಾದ ಕಾನೂನೂನಾತ್ಮಕ ಕ್ರಮವಾಗಬೇಕಿದೆ’ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.

ಎರಡು ವಿಧಾನಸಭೆ ಕ್ಷೇತ್ರಕ್ಕೆ ತಲಾ ₹90 ಕೋಟಿ ಅನುದಾನ ಹೆಚ್ಚು ಹಣಕ್ಕೆ ಬ್ಯಾಟರಾಯನಪುರ ಕ್ಷೇತ್ರದ ಮುಖಂಡರ ಒತ್ತಾಯ ಕಳೆದ ವರ್ಷವೂ ತಡೆ, ಅನುದಾನಕ್ಕೆ ಬೇಡಿಕೆ

ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳಿಂದ ಕಸ ವಿಲೇವಾರಿಯಾಗುತ್ತಿಲ್ಲ. ಲಾರಿಗಳಲ್ಲಿ ಕಸ ತುಂಬಿಹೋಗಿದೆ. ಬೆಂಗಳೂರನ್ನು ಸರ್ಕಾರ ಗಾರ್ಬೇಜ್‌ ಸಿಟಿ ಮಾಡಿದೆ
ಆರ್‌. ಅಶೋಕ ವಿರೋಧ ಪಕ್ಷದ ನಾಯಕ

ಬ್ಲ್ಯಾಕ್‌ಮೇಲ್‌ ಮಾಡಿದರೆ ಹುಷಾರ್: ಡಿಕೆಶಿ

‘ತ್ಯಾಜ್ಯ ವಿಲೇವಾರಿಗೆ ಅಡ್ಡಿಪಡಿಸಿ ಅನುದಾನಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದರೆ ಹುಷಾರ್‌. ಅವರ ಮೇಲೆ ಎಸ್ಮಾ ಸೇರಿದಂತೆ ಎಲ್ಲ ರೀತಿಯ ಕಾನೂನು ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎಚ್ಚರಿಸಿದರು. ‘ಗೌರವದಿಂದ ಇದ್ದರೆ ಸರಿ. ಇಲ್ಲ ಅಂದರೆ ಕಸ ವಿಲೇವಾರಿಗೆ ಅಡ್ಡಿಪಡಿಸುವವರು ಶಾಸಕರಾದರೂ ಸರಿ ಬೇರೆ ಯಾರೇ ಆಗಿದ್ದರೂ ಸಹ ಎಸ್ಮಾ ಕಾಯ್ದೆ ಅಡಿ ಯಾವುದೇ ಕರುಣೆ ಇಲ್ಲದೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಶಾಸಕರ ಮನೆ ಮುಂದೆ ಅಥವಾ ಬಿಜೆಪಿ ಕಚೇರಿ ಎದುರು ಕಸವನ್ನು ತೆಗೆದುಕೊಂಡು ಹೋಗಿ ಸುರಿಯಬೇಕಾಗುತ್ತದೆ’ ಎಂದರು. ‘ಶಾಸಕರು ಕಸ ಹಾಕಬಾರದು ಹಾಗೂ ನಮಗೆ ಅನುದಾನ ಬೇಕು ಎಂದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಮಂಗಳವಾರದಂದು ಅರವಿಂದ ಲಿಂಬಾವಳಿ ಬುಧವಾರದಂದು ದೊಡ್ಡಬಳ್ಳಾಪುರ ಶಾಸಕರು. ಹೀಗೆ ಮಾಡಿದರೆ ಕಸ ಎಲ್ಲಿಗೆ ಹೋಗಬೇಕು? ಕಸವು ಆರ್‌.ಅಶೋಕ್‌ ವಿಜಯೇಂದ್ರ ಅಥವಾ ಬಿಜೆಪಿ ಕಚೇರಿಗೆ ಹೋಗಬೇಕಾಗುತ್ತದೆ’ ಎಂದು ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದರು. ‘ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ? ಈ ಹಿಂದಿನಿಂದ ಏನು ಕೆಲಸ ಮಾಡಿಕೊಂಡು ಬರಲಾಗುತ್ತಿತ್ತೊ ಅದೇ ಕೆಲಸವನ್ನು ಈಗಲೂ ಮಾಡಿಕೊಂಡು ಬರಲಾಗುತ್ತಿದೆ. ಅವರ ಕ್ಷೇತ್ರಗಳಿಗೆ ಅನುದಾನ ಬೇಕು ಎಂದು ಹೀಗೆ ಮಾಡುತ್ತಿದ್ದಾರೆ. ಕಸದ ಲಾರಿಯಿಂದ ಅಪಘಾತ ಆಗಬಾರದಿತ್ತು ಆಗಿದೆ. ಅದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಕಸ ವಿಲೇವಾರಿ ನಿಲ್ಲಿಸಿರುವುದು ಸರಿಯಲ್ಲ. ಎಸ್‌.ಟಿ.ಸೋಮಶೇಖರ್‌ ಶಿವಣ್ಣ ಕೃಷ್ಣಬೈರೇಗೌಡ ಅವರ ಕ್ಷೇತ್ರಗಳಲ್ಲೂ ಕಸ ವಿಲೇವಾರಿ ಮಾಡಲಾಗುತ್ತಿದೆ’ ಎಂದು ತಿಳಿಸಿದರು. ‘ಹೊಸದಾಗಿ ಎರಡು ಜಾಗಗಳನ್ನು ಖರೀದಿ ಮಾಡಲಾಗಿದೆ. ಅಲ್ಲಿ ಕಸ ವಿಲೇವಾರಿಗೆ ಕಾನೂನಿನ ಪ್ರಕಾರ ಟೆಂಡರ್‌ ಕರೆಯಲಾಗಿದೆ. ಒಂದಷ್ಟು ಕಾನೂನಾತ್ಮಕ ವಿಚಾರಗಳನ್ನು ಬಗೆಹರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

ಎಸ್ಮಾದಡಿ ಬಂಧನವಾಗಲು ಸಿದ್ಧ: ಧೀರಜ್ ಮುನಿರಾಜು

‘ನನಗೆ ಅನುದಾನ ಕಸದ ಅಗತ್ಯ ಇಲ್ಲ. ಎಸ್ಮಾ ಕಾಯ್ದೆ ಹಾಕಿ ನನ್ನನ್ನು ಬಂಧಿಸುವುದಾದರೆ ಬಂಧಿಸಲಿ. ತಾಲ್ಲೂಕಿನ ಜನತೆಗಾಗಿ ನೀರು- ವಾಯು ಮಾಲಿನ್ಯ ತಪ್ಪಿಸಲು ಅವೈಜ್ಞಾನಿಕವಾಗಿ ಭೂಮಿಗೆ ಕಸ ಭರ್ತಿ ಮಾಡುವ ಪದ್ಧತಿಯನ್ನು ತಪ್ಪಿಸಲು ಮುಂದಾಗಿರುವ ನನ್ನನ್ನು ಬಂಧಿಸಿ ಆರು ತಿಂಗಳು ಜೈಲಿಗೆ ಕಳುಹಿಸಿದರೂ ನಾನು ಅದಕ್ಕೆ ಸಿದ್ಧ’ ಎಂದು ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದ ಶಾಸಕ ಧೀರಜ್‌ ಮುನಿರಾಜು ಹೇಳಿದರು. ‘ಉಪ ಮುಖ್ಯಮಂತ್ರಿಯವರು ಕಸದ ವಿಚಾರ ಮಾತನಾಡುವಾಗ ಬ್ಲ್ಯಾಕ್‍ಮೇಲ್ ಪದ ಬಳಸಿದ್ದಾರೆ. ಈ ಮೂಲಕ ಚುನಾಯಿತ ಪ್ರತಿನಿಧಿ ದೊಡ್ಡಬಳ್ಳಾಪುರ ಕ್ಷೇತ್ರದ ಜನತೆಗೆ ಅವಮಾನ ಮಾಡಬಾರದು’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ‘ದೊಡ್ಡಬಳ್ಳಾಪುರ ಕ್ಷೇತ್ರದ ಜನರು ಏನು ಪಾಪ ಮಾಡಿದ್ದಾರೆ? ಇಲ್ಲಿಗೆ ವೈದ್ಯಕೀಯ ತ್ಯಾಜ್ಯ ಏಕೆ ಕಳಿಸುತ್ತಿದ್ದಾರೆ. ಬಲ್ಕ್‌ವೇಸ್ಟ್ ಕಮರ್ಷಿಯಲ್ ತ್ಯಾಜ್ಯಕ್ಕೆ ಕಳಿಸುವಂತಿಲ್ಲ; 20 ಬಲ್ಕ್ ವಾಹನ ಕಳಿಸುತ್ತಿದ್ದಾರೆ. ಆದರೂ ಎಂಎಸ್‌ಜಿಪಿ ಘಟಕಕ್ಕೆ 70 ವಾಹನ ಹೋಗಲು ಬಿಟ್ಟಿದ್ದೇವೆ’ ಎಂದರು. ‘ತಾಲ್ಲೂಕಿನ ಜನತೆಯ ಪರವಾದ ಹೋರಾಟವನ್ನು ನಾನು ನಿಲ್ಲಿಸುವುದಿಲ್ಲ. ನಿಗದಿಪಡಿಸಿದ ಕಸದ ವಾಹನ ‘ಒಎಂ’ ಕಾಪಿಯಲ್ಲಿ ಏನಿದೆಯೋ ಅದನ್ನು ಬಿಟ್ಟು ಉಳಿದ ಹೆಚ್ಚುವರಿ ವಾಹನಗಳನ್ನು ನಾನು ನಿಲ್ಲಿಸುತ್ತೇನೆ’ ಎಂದು ತಿಳಿಸಿದರು.

ಹೆದರುವ ಪ್ರಶ್ನೆಯೇ ಇಲ್ಲ: ವಿಜಯೇಂದ್ರ

‘ಉಪ ಮುಖ್ಯಮಂತ್ರಿಯವರ ಗೊಡ್ಡು ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ. ಇವರ ಯೋಗ್ಯತೆಗೆ ಸುರಂಗ ರಸ್ತೆ ಸಿಂಗಪುರ ದುಬೈ ಮಾಡುವುದನ್ನು ಬಿಟ್ಟು ಗುಂಡಿ ಮುಚ್ಚುವ ಕೆಲಸ ಮೊದಲು ಮಾಡಲಿ. ಕಸ ವಿಲೇವಾರಿ ರಾಜ್ಯ ಸರ್ಕಾರದ ಜವಾಬ್ದಾರಿ. ತಾವೇ ಬೆಂಗಳೂರಿನ ಉಸ್ತುವಾರಿ ಸಚಿವರು. ಅದನ್ನು ಹೇಗೆ ಸರಿಪಡಿಸಬೇಕೆಂಬ ಕುರಿತು ಗಮನ ಕೊಡಲಿ. ಈ ರೀತಿ ದರ್ಪ ಸವಾಲು ಹಾಕುವ ಅಗತ್ಯ ಇಲ್ಲ. ಬೆಂಗಳೂರಿನ ಜ್ವಲಂತ ಸಮಸ್ಯೆಗೆ ಪರಿಹಾರ ಕೊಡಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಮಾತುಕತೆ ನಡೆಯುತ್ತಿದೆ: ಮಹೇಶ್ವರ್‌ ರಾವ್‌

‘ಸ್ಥಳೀಯ ಶಾಸಕರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಅವರನ್ನು ಮನವೊಲಿಸುವ ಕಾರ್ಯ ನಡೆಯುತ್ತಿದೆ. ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುತ್ತದೆ. ಗ್ರಾಮಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇನ್ನೂ ಹೆಚ್ಚಿನ ಕೆಲಸ ಆಗಬೇಕೆಂಬ ಬೇಡಿಕೆ ಇದೆ. ಅದನ್ನು ಪರಿಶೀಲಿಸಲಾಗುತ್ತಿದೆ. ನಗರದಲ್ಲಿ ಎಲ್ಲ ಜನರೂ ತ್ಯಾಜ್ಯವನ್ನು ವಿಂಗಡಿಸಿ ಕೊಟ್ಟರೆ ಭೂಭರ್ತಿಗೆ ಹೋಗುವ ಪ್ರಮಾಣ ಬಹುತೇಕ ನಿಲ್ಲುತ್ತದೆ’  ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.