ಬೆಂಗಳೂರು: ’ಬೆಳ್ಳಂದೂರು ವಾರ್ಡ್‌ನಲ್ಲಿ ಮೂಲ ಸೌಕರ್ಯ ಕಲ್ಪಿಸಲು ಬಿಬಿಎಂಪಿ ವಿಫಲವಾಗಿದೆ’ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು, ಮಾನವ ಸರಪಳಿ ನಿರ್ಮಿಸಿ ಶನಿವಾರ ಪ್ರತಿಭಟನೆ ನಡೆಸಿದರು.
ಸರ್ಜಾಪುರ ರಸ್ತೆಯ ಇಬ್ಬಲೂರು ಜಂಕ್ಷನ್‌ನಿಂದ ಕಸವನಹಳ್ಳಿಯ ವಿಪ್ರೊ ಕಂಪನಿಯವರೆಗಿನ ಫುಟ್‌ಪಾತ್‌ನಲ್ಲಿ ಸಾಲಾಗಿ ನಿಂತಿದ್ದ ನಿವಾಸಿಗಳು, ಪರಸ್ಪರ ಕೈ ಕೈ ಹಿಡಿದುಕೊಂಡು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ಬೆಳ್ಳಂದೂರು ಉಳಿಸಿ’ ಎಂಬ ಘೋಷಣೆ ಕೂಗಿದರು.
‘ಬೆಳ್ಳಂದೂರು ಸಂಚಾರದ್ದು ಭಯಾನಕ ಕಥೆ’, ‘ಕ್ರಿಯಾತ್ಮಕ ವಾರ್ಡ್ ಸಮಿತಿ, ವಾರ್ಡ್ ಯೋಜನೆ, ಉತ್ತಮ ಆಡಳಿತ ಬೇಕಾಗಿದೆ’, ‘ಒಳಚರಂಡಿ ಹಾಗೂ ಪಾದಚಾರಿ ಮಾರ್ಗ ಎಲ್ಲಿ?’, ’ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸಿ’ ಎಂಬ ಘೋಷಣಾ ಫಲಕಗಳನ್ನು ನಿವಾಸಿಗಳು ಪ್ರದರ್ಶಿಸಿದರು.
‘ಮಹದೇವಪುರ ವಲಯದ ಬೆಳ್ಳಂದೂರು ವಾರ್ಡ್‌ನಿಂದ ವಾರ್ಷಿಕ ₹220 ಕೋಟಿ ತೆರಿಗೆ ಸಂಗ್ರಹವಾಗುತ್ತದೆ. ಅದರ ಶೇ 10ರಷ್ಟು ಹಣವನ್ನೂ ವಾರ್ಡ್‌ನ ಅಭಿವೃದ್ಧಿಗೆ ನೀಡುತ್ತಿಲ್ಲ. ಅದರಿಂದಾಗಿ ನಿತ್ಯವೂ ನರಕಯಾತನೆ ಅನುಭವಿಸುವಂತಾಗಿದೆ’ ಎಂದು ನಿವಾಸಿಗಳು ದೂರಿದರು.
‘ನಗರ ಯೋಜನಾ ಪ್ರಾಧಿಕಾರ ಮತ್ತು ಬಿಡಿಎ ಬೃಹತ್ ಕಟ್ಟಡಗಳ ನಿರ್ಮಾಣಕ್ಕೆ ಪೂರ್ವ ಯೋಜನೆ ಇಲ್ಲದೆ ಅನುಮತಿ ನೀಡಿರುವುದರಿಂದ ಬೆಳ್ಳಂದೂರು ಭಾಗದಲ್ಲಿ ಜನಸಂದಣಿ ಹೆಚ್ಚಾಗಿದೆ. ಬೆಳ್ಳಂದೂರು ಹಾಗೂ ಸರ್ಜಾಪುರ ರಸ್ತೆಯಲ್ಲಿ ನೂರಾರು ಐಟಿ ಕಂಪನಿಗಳಿದ್ದು, ಅಲ್ಲೆಲ್ಲ ನಿತ್ಯವೂ ವಿಪರೀತ ಸಂಚಾರ ದಟ್ಟಣೆ ಆಗುತ್ತಿದೆ. ವೃದ್ಧರು ಮತ್ತು ಮಕ್ಕಳು, ರಸ್ತೆ ದಾಟಲು ಹರಸಾಹಸಪಡಬೇಕಾದ ಸ್ಥಿತಿ ಬಂದಿದೆ. ಉಸಿರಾಡಲು ಶುದ್ಧ ಗಾಳಿಯೂ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಬೆಳ್ಳಂದೂರು ವಾರ್ಡ್ ಅಭಿವೃದ್ಧಿಗೆ ₹400 ಕೋಟಿ ವಿಶೇಷ ಅನುದಾನ ನೀಡಬೇಕು. ಮೆಟ್ರೊ ವ್ಯವಸ್ಥೆ ಕಲ್ಪಿಸಬೇಕು. ಬೆಳ್ಳಂದೂರು ಕೆರೆ ಅಭಿವೃದ್ಧಿಪಡಿಸಬೇಕು. ಈ ಬಗ್ಗೆ ತಿಂಗಳೊಳಗೆ ನಿರ್ಧಾರ ಪ್ರಕಟಿಸದಿದ್ದರೆ, ಕಾನೂನು ಹೋರಾಟ ನಡೆಸಲಾಗುವುದು’ ಎಂದು ನಿವಾಸಿಗಳು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.