ADVERTISEMENT

‌ಬೆಂಗಳೂರು | ಅಪಘಾತದಲ್ಲಿ ಮಹಿಳೆ ಸಾವು: ಲಾರಿ ಚಾಲಕ, ಮಾಲೀಕನಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 15:47 IST
Last Updated 11 ಜೂನ್ 2025, 15:47 IST
   

ಬೆಂಗಳೂರು: ಪೂರ್ವ ವಿಭಾಗದ ವೈಟ್‌ಫೀಲ್ಡ್‌ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಹಾಗೂ ಮಾಲೀಕನಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಎಸಿಜೆಎಂ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

ಚಾಲಕ ಪುಟ್ಟಸ್ವಾಮಿ (58) ಹಾಗೂ ಲಾರಿ ಮಾಲೀಕ ರಮೇಶ್‌ (58) ಶಿಕ್ಷೆಗೆ ಒಳಗಾದವರು.

2023ರ ಜುಲೈ 18ರಂದು ಕಾಡುಗೋಡಿ ರೈಲ್ವೆ ಮೇಲ್ಸೇತುವೆಯಲ್ಲಿ ಅಪಘಾತ ಸಂಭವಿಸಿತ್ತು. ಹೋಫ್‌ ಫಾರಂ ಕಡೆಯಿಂದ ಕಾಡುಗೋಡಿ ಕಡೆಗೆ ಪೂರ್ಣಿಮಾ ಎಸ್‌. ಹೆಗಡೆ (35) ಅವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಅದೇ ರಸ್ತೆಯಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿತ್ತು. ಸ್ಕೂಟರ್‌ನಿಂದ ಕೆಳಕ್ಕೆ ಬಿದ್ದಿದ್ದ ಪೂರ್ಣಿಮಾ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ವೈದೇಹಿ ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿ ಮೃತಪಟ್ಟಿದ್ದರು.

ADVERTISEMENT

ವೈಟ್‌ಫೀಲ್ಡ್ ಸಂಚಾರ ಠಾಣೆಯ ಪೊಲೀಸರು ಲಾರಿ ಚಾಲಕ ಹಾಗೂ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ಸಂಚಾರ ಪೊಲೀಸರು ತನಿಖಾ ವರದಿಯನ್ನು ಸಲ್ಲಿಸಿದ್ದರು. ಚಾಲಕ ಪುಟ್ಟಸ್ವಾಮಿಗೆ 1 ವರ್ಷ 9 ತಿಂಗಳು ಜೈಲು ಶಿಕ್ಷೆ ಹಾಗೂ ₹15 ಸಾವಿರ ದಂಡ, ದಂಡ ಪಾವತಿಸಲು ವಿಫಲವಾದರೆ ಮೂರು ತಿಂಗಳು ಸಾದಾ ಸಜೆ ಹಾಗೂ ಮಾಲೀಕ ರಮೇಶ್‌ಗೆ ಮೂರು ತಿಂಗಳು ಸಾದಾ ಸಜೆ ಹಾಗೂ ₹5 ಸಾವಿರ ದಂಡ, ದಂಡ ಪಾವತಿಸಲು ವಿಫಲವಾದರೆ 10 ದಿನ ಸಾದಾ ಶಿಕ್ಷೆ ವಿಧಿಸಿ, ನ್ಯಾಯಾಲಯ ಆದೇಶಿಸಿದೆ ಎಂದ ಸಂಚಾರ ವಿಭಾಗದ (ಪೂರ್ವ) ಡಿಸಿಪಿ ಸಾಹಿಲ್‌ ಬಾಗ್ಲಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.