ADVERTISEMENT

ಆನೇಪಾಳ್ಯ ರಸ್ತೆ ಡಾಂಬರೀಕರಣ ಮಾಡಿ: ಆಯುಕ್ತ ರಾಜೇಂದ್ರ ಚೋಳನ್ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 23:50 IST
Last Updated 24 ಸೆಪ್ಟೆಂಬರ್ 2025, 23:50 IST
ವಸಂತನಗರದ ಬಂಜಾರ ಭವನ ಮುಂಭಾಗದ ರಸ್ತೆಯಲ್ಲಿ ಕಾರ್ಮಿಕರು ಡಾಂಬರೀಕರಣ ಮಾಡಿದರು 
ವಸಂತನಗರದ ಬಂಜಾರ ಭವನ ಮುಂಭಾಗದ ರಸ್ತೆಯಲ್ಲಿ ಕಾರ್ಮಿಕರು ಡಾಂಬರೀಕರಣ ಮಾಡಿದರು    

ಬೆಂಗಳೂರು: ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಆನೇಪಾಳ್ಯ ಮುಖ್ಯರಸ್ತೆ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ರಸ್ತೆಗೆ ವೆಟ್‌ಮಿಕ್ಸ್‌ ಹಾಕಿ, ಡಾಂಬರೀಕರಣ ಮಾಡಬೇಕು ಎಂದು ಆಯುಕ್ತ ರಾಜೇಂದ್ರ ಚೋಳನ್ ಸೂಚಿಸಿದರು. 

ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯುವ ರಸ್ತೆಗಳಿಗೆ ಭೇಟಿ ನೀಡಿ, ಪರಿಶೀಲಿಸಿದ ಅವರು, ‘ಪಾಲ್ಮ್‌ ಗ್ರೂವ್ ಪ್ರದೇಶದಲ್ಲಿ 1 ಕಿ.ಮೀ ಉದ್ದದ ರಸ್ತೆಗೆ ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೊಳ್ಳಲಾಗಿದೆ. ಈಗಾಗಲೇ 450 ಮೀ. ಉದ್ದದ ರಸ್ತೆಗೆ ಕಾಂಕ್ರೀಟ್‌ ಹಾಕಲಾಗಿದೆ. ಪಾದಚಾರಿ ಮಾರ್ಗ, ರಸ್ತೆ ಅಂಚಿನ ಕಾಮಗಾರಿ ಬಾಕಿ ಇದ್ದು, ತ್ವರಿತವಾಗಿ ಪೂರ್ಣಗೊಳಿಸಬೇಕು. ರೆಸಿಡೆನ್ಸಿ ರಸ್ತೆ ಗುಂಡಿಗಳನ್ನು ಆದ್ಯತೆ ಮೇರೆಗೆ ಮುಚ್ಚಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ದಿನಗಳಲ್ಲಿ 28 ರಸ್ತೆಗಳ 445 ಗುಂಡಿಗಳು, 24,905 ಚದರ ಮೀ. ವಿಸ್ತೀರ್ಣದ ಪ್ಯಾಚ್‌ವರ್ಕ್‌ ಕಾರ್ಯ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.  

ADVERTISEMENT

ಸಾರ್ವಜನಿಕರಿಗೆ ತೊಂದರೆಯಾಗದಂತೆ ಗುಂಡಿ ಮುಚ್ಚಿ:

ರಸ್ತೆಗುಂಡಿ ಮುಚ್ಚುವಾಗ ಸಾರ್ವಜನಿಕರಿಗೆ ತೊಂದರೆ ಆಗದಂತೆ ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ಪಶ್ಚಿಮ ನಗರ ಪಾಲಿಕೆ ಆಯುಕ್ತ ಕೆ.ವಿ. ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು. 

ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 35ರ ಆರನೇ ಹಾಗೂ ಏಳನೇ ಮುಖ್ಯ ರಸ್ತೆ ಎಂಎಸ್ಆರ್ ನಗರ ಮತ್ತಿಕೆರೆ ಉಪವಿಭಾಗದ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು. 

‘ಜಲಮಂಡಳಿಯೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಒಂದು ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ತೆಗೆದುಕೊಂಡಾಗ, ಆ ರಸ್ತೆಯಲ್ಲಿ ಇರುವ ಎಲ್ಲ ಗುಂಡಿಗಳನ್ನು ಮುಚ್ಚಬೇಕು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.