
ಬೆಂಕಿ ಅವಘಡ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಜಾನಪುರ ಸಮೀಪದ ಕೆಂಬತ್ತಹಳ್ಳಿಯ ಹಾಸಿಗೆ, ಸೋಫಾ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮವಾಗಿವೆ.
ಈ ಗೋದಾಮಿನಲ್ಲಿ ಹಾಸಿಗೆ ಮತ್ತು ಸೋಫಾ ತಯಾರಿಸಲಾಗುತ್ತದೆ. ಬೆಳಿಗ್ಗೆ 8.30ರ ಸುಮಾರಿಗೆ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಬೆಂಕಿಯಿಂದ ದಟ್ಟ ಹೊಗೆ ಆವರಿಸಿದ ಪರಿಣಾಮ ಕೂಡಲೇ ಸ್ಥಳೀಯರು ಪೊಲೀಸ್ ಠಾಣೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸುಮಾರು 9 ವಾಹನಗಳ ಜತೆ ಸ್ಥಳಕ್ಕೆ ಬಂದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು.
ಗೋದಾಮಿನ ಒಳಗೆ ಹತ್ತಿ, ಸಿದ್ಧಪಡಿಸಿದ್ದ ಹಾಸಿಗೆ, ಸೋಫಾಗಳು ಮಾತ್ರವಲ್ಲದೆ, ಈ ಕಾಂಪೌಂಡ್‌ನೊಳಗೆ ನಿಲ್ಲಿಸಿದ್ದ ಮೂರು ಕಾರುಗಳು ಹಾಗೂ ಎರಡು ಗೂಡ್ಸ್ ವಾಹನಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.
ಗೋದಾಮು ಅಕ್ಕ-ಪಕ್ಕದಲ್ಲಿರುವ ಎರಡು ಅಪಾರ್ಟ್‌ಮೆಂಟ್‌ಗಳಿಗೂ ಬೆಂಕಿ ತಗುಲಿದ್ದರಿಂದ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ಹೀಗಾಗಿ ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಮತ್ತೊಂದು ಬ್ಲಾಕ್‌ಗೆ ಸ್ಥಳಾಂತರಿಸಲಾಯಿತು.
ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ತಲ್ಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.