ಬೆಂಗಳೂರು: ಆಟೊ ಪ್ರಯಾಣ ದರ ನಿಗದಿ ಕಡತಕ್ಕೆ ಸೀಮಿತವಾಗಿದ್ದು ಪ್ರಯಾಣಿಕರಿಂದ ಅಧಿಕ ದರ ವಸೂಲಿ ಮಾಡುವುದು ಮುಂದುವರಿದಿದೆ ಎಂದು ಹಲವು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಷ್ಕೃತ ದರವಿರಲಿ, ಹಳೆಯ ದರವಿರಲಿ... ಮೀಟರ್ ಹಾಕಿದರೆ ತಾನೆ ಅನ್ವಯವಾಗುವುದು. ಮೀಟರ್ ಹಾಕುವವರೇ ಕಾಣುತ್ತಿಲ್ಲ. ಆ್ಯಪ್ ಆಧಾರಿತ ಅಗ್ರಿಗೇಟರ್ ಕಂಪನಿಗಳ ಅಡಿಯಲ್ಲಿ ಸಂಚರಿಸುವ ಆಟೊಗಳಲ್ಲಿ ಕನಿಷ್ಠ ದರ ಇಲ್ಲವೇ ಇಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಮೊದಲ ಎರಡು ಕಿ.ಮೀ.ಗೆ ಆಟೊ ಪ್ರಯಾಣ ದರ ಕನಿಷ್ಠ ₹30ರಿಂದ ₹36ಕ್ಕೆ ಮತ್ತು ನಂತರದ ಪ್ರತಿ ಕಿ.ಮೀ.ಗೆ ₹15ರಿಂದ ₹18ಕ್ಕೆ ಹೆಚ್ಚಳ ಮಾಡಿ ಪರಿಷ್ಕರಿಸಲಾಗಿತ್ತು. ಆದರೆ, ಅನುಷ್ಠಾನ ಮಾಡದೇ ಇರುವುದರಿಂದ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಅಭಿಪ್ರಾಯಪಟ್ಟರು.
‘ನಾವು ಕರೆದ ಕಡೆಗೆ ಆಟೊಗಳು ಬರುವುದಿಲ್ಲ. ಬಂದರೂ ಕನಿಷ್ಠ ದರ ತೆಗೆದುಕೊಳ್ಳುವುದಿಲ್ಲ. ಅವರು ಹೇಳಿದಷ್ಟು ನೀಡಬೇಕಾಗುತ್ತದೆ. ಕನಿಷ್ಠ ₹30 ಇರುವಾಗ ₹40 ತೆಗೆದುಕೊಳ್ಳುತ್ತಿದ್ದರು. ಈಗ ₹36 ಆದ ಮೇಲೆ ಇನ್ನೂ ಹೆಚ್ಚು ಕೇಳುತ್ತಿದ್ದಾರೆ ಎಂದು ಬಸವೇಶ್ವರ ನಗರದ ವಿ.ಗಿರಿಜಾ ತಿಳಿಸಿದರು.
‘ಓಲಾ, ಉಬರ್‌ನಲ್ಲಿ ಇದಕ್ಕಿಂತಲೂ ಹೆಚ್ಚಿನ ದರ ಇದೆ. ಮಳೆ ಬಂದಾಗ ಬುಕ್ ಮಾಡಲು ಹೊರಟರೆ ವಿಪರೀತ ದರ ತೋರಿಸುತ್ತಾರೆ. ನನ್ನಲ್ಲಿ ಸ್ಕೂಟಿ ಇದೆ. ಮಕ್ಕಳನ್ನು ಅದರಲ್ಲಿಯೇ ಶಾಲೆಗೆ ಬಿಟ್ಟು ಬರುತ್ತೇನೆ. ಎರಡು ದಿನಗಳ ಹಿಂದೆ ಸಂಜೆ ಮಳೆ ಬಂದಿತ್ತು. ಅದಕ್ಕೆ ಸ್ಕೂಟಿ ಬದಲು ಆಟೊ ಬುಕ್ ಮಾಡಲು ಹೊರಟರೆ ಕನಿಷ್ಠ ದರದ ಮೂರು ಪಟ್ಟು ಆ್ಯಪ್‌ನಲ್ಲಿ ತೋರಿಸಿತು’ ಎಂದು ಅವರು ಅನುಭವ ತೆರೆದಿಟ್ಟರು.
‘ನಾವು ನಗರದ ಹೊರವಲಯದಲ್ಲಿ ಇರುವುದು. ಇಲ್ಲಿ ದರ ಪರಿಷ್ಕರಣೆಗೂ ಆಟೊ ದರಕ್ಕೂ ಸಂಬಂಧವೇ ಇಲ್ಲ. ಮೀಟರ್ ಹಾಕುವುದೇ ಇಲ್ಲ. ₹50, ₹100, ₹150 ಎಂದು ದರ ಹೇಳುತ್ತಾರೆ. ಓಲಾ, ಉಬರ್ ಬುಕ್ ಮಾಡಲು ಹೋದರೆ ಅಲ್ಲಿಯೂ ಬುಕ್ ಆಗುವುದಿಲ್ಲ. ಅದರಲ್ಲಿ ಟಿಪ್ಸ್ ಎಂಬ ಆಯ್ಕೆಯೊಂದು ಇದೆ. ಟಿಪ್ಸ್ ನೀಡಲು ಒಪ್ಪಿದರಷ್ಟೇ ಬುಕ್ ಆಗುತ್ತದೆ’ ಎಂದು ಹೆಸರುಘಟ್ಟದ ಎಂ.ಆರ್. ರೂಪಾ ತಿಳಿಸಿದರು.
‘ಆಟೊ ಚಾಲಕರಲ್ಲಿ ಪ್ರಯಾಣಿಕರಿಂದ ಅಧಿಕ ವಸೂಲಿ ಮಾಡುವವರೂ, ಮಾನವೀಯತೆಯಿಂದ ನಡೆದುಕೊಳ್ಳುವುವರೂ ಇರುತ್ತಾರೆ. ನಮ್ಮ ಮನೆಯ ಪಕ್ಕದ ಆಟೊದವರು ಕನಿಷ್ಠ ದರಕ್ಕೆ ಕರೆದುಕೊಂಡು ಹೋಗುತ್ತಾರೆ. ಇತ್ತೀಚೆಗೆ ಮೆಜೆಸ್ಟಿಕ್‌ನಿಂದ ಚಿಕ್ಕಪೇಟೆಗೆ ಹೋಗಬೇಕಿತ್ತು. ಕಾಲ್ನಡಿಗೆಯಲ್ಲಿಯೇ ಸಾಗಬಹುದಾಗಿದ್ದ ಚಿಕ್ಕಪೇಟೆಗೆ ಹೋಗಲು ಆಟೊದವರನ್ನು ಕರೆದರೆ ₹150 ಹೇಳಿದರು. ಎಷ್ಟೇ ಚೌಕಾಸಿ ನಡೆಸಿದರೂ ₹100ಕ್ಕಿಂತ ಕಡಿಮೆಗೆ ಬರಲಿಲ್ಲ. ಇಂಥವರಿಂದಲೇ ಪ್ರಾಮಾಣಿಕ ಆಟೊ ಚಾಲಕರಿಗೂ ಕೆಟ್ಟ ಹೆಸರು’ ಎಂದು ಕುರುಬರಹಳ್ಳಿಯ ಬಿ.ಜಿ. ರಾಧಾ ತಿಳಿಸಿದರು.
ವಯಸ್ಸಾದ ಚಾಲಕರು ಹೆಚ್ಚು ವಸೂಲಿ ಮಾಡಲು ಹೋಗುವುದಿಲ್ಲ. ಉಳಿದವರದ್ದೇ ಸಮಸ್ಯೆ ಎಂದು ಅವರು ಹೇಳಿದರು.
ಕೆಲವರಿಂದ ಎಲ್ಲರಿಗೂ ಕೆಟ್ಟ ಹೆಸರು
‘ಯುಪಿಐ ಮೂಲಕ ಪಾವತಿಸುವವರು ಕನಿಷ್ಠ ದರ ಎಷ್ಟಿದೆಯೋ ಅಷ್ಟೇ ನೀಡುತ್ತಾರೆ. ನಗದು ಪಾವತಿಸುವಾಗ ₹36 ತೆಗೆದುಕೊಳ್ಳಲು ಚಿಲ್ಲರೆ ಇರುವುದಿಲ್ಲ. ಹಾಗಾಗಿ ಪ್ರಯಾಣಿಕರೇ ₹4 ಅನ್ನು ಬಿಟ್ಟು ಹೋಗುತ್ತಾರೆ’ ಎಂದು ಅಟೊ ಚಾಲಕ ಕಾಮಾಕ್ಷಿ ಪಾಳ್ಯದ ದುಷ್ಯಂತ್ ತಿಳಿಸಿದರು.
‘ಎಲ್ಲ ರಂಗದಲ್ಲಿ ಇರುವಂತೆ ಇಲ್ಲಿಯೂ ಶೇ 30ರಷ್ಟು ಚಾಲಕರು ಪ್ರಾಮಾಣಿಕವಾಗಿ ಮೀಟರ್ ಪ್ರಕಾರ ನಿಗದಿತ ದರವನ್ನೇ ಪಡೆಯುತ್ತಿದ್ದಾರೆ. ಇನ್ನು ಶೇ 40ರಷ್ಟು ಚಾಲಕರು ಹೆಚ್ಚು ಸಿಕ್ಕಿದರೆ ಹೆಚ್ಚು ಪಡೆಯುತ್ತಾರೆ. ಚೌಕಾಸಿ ನಡೆಸಿದಾಗ ನಿಗದಿತ ದರಕ್ಕೂ ಬರುತ್ತಾರೆ. ಇನ್ನು ಉಳಿದ ಶೇ 30ರಷ್ಟು ಚಾಲಕರು ಅಧಿಕ ವಸೂಲಿ ಮಾಡುತ್ತಾರೆ’ ಎಂದು ಅವರು ವಿವರಿಸಿದರು. ‘ಓಲಾದಲ್ಲಿ ಕನಿಷ್ಠ ದರ ₹ 45 ಉಬರ್‌ನಲ್ಲಿ ಕನಿಷ್ಠ ದರ ₹ 53 ಇದೆ. ಎಲ್ಲೋ ಇರುವವರು ಪಿಕ್‌ಅಪ್ ಪಾಯಿಂಟ್‌ಗೆ ಬಂದು ಕರೆದುಕೊಂಡು ಹೋಗಬೇಕಾಗುತ್ತದೆ. ಸ್ವಲ್ಪ ಹೆಚ್ಚುಕಡಿಮೆ ಇದು ಸರ್ಕಾರ ನಿಗದಿಪಡಿಸಿದ ದರದಷ್ಟೇ ಇದೆ’ ಎಂದು ಅವರು ಮಾಹಿತಿ ನೀಡಿದರು.
ಅಧಿಕ ವಸೂಲಿ ಮಾಡಿದರೆ ಕ್ರಮ
ನಿಗದಿತ ದರಕ್ಕಿಂತ ಅಧಿಕ ದರ ವಸೂಲಿ ಮಾಡಬಾರದು. ಆಗ್ರಿಗೇಟರ್‌ಗಳು ಸರ್ಕಾರ ನಿಗದಿಪಡಿಸಿದ ಕನಿಷ್ಠ ದರಕ್ಕಿಂತ ಶೇ 10ರಷ್ಟು ಅಧಿಕ ಶುಲ್ಕ ವಿಧಿಸಲು ಅವಕಾಶವಿದೆ. ಅದಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.