ಬೆಂಗಳೂರು: ಕೆನರಾ ಬ್ಯಾಂಕ್‌ನ ಶೇಷಾದ್ರಿಪುರ ಶಾಖೆಯಲ್ಲಿ ದರೋಡೆಗೆ ಯತ್ನಿಸಿದ್ದ ಆರೋಪಿ ಹಸನ್ ಅಬ್ದುಲ್ ಸಾಬ್ (36) ಅವರನ್ನು ಶೇಷಾದ್ರಿಪುರ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಧಾರವಾಡ ಜಿಲ್ಲೆಯ ಕೋಳಿವಾಡದ ಹಸನ್ ಅಬ್ದುಲ್ ಸಾಬ್ ಅವರು ಶೇಷಾದ್ರಿಪುರದ ಗಿರಿ ಕಾಲೊನಿಯಲ್ಲಿ ನೆಲಸಿದ್ದರು.
ಸೋಮವಾರ ನಸುಕಿನ ವೇಳೆ ಬ್ಯಾಂಕ್‌ನ ಕಿಟಕಿಯ ಗ್ರಿಲ್ ಕತ್ತರಿಸಿ ಒಳಕ್ಕೆ ನುಗ್ಗಿದ್ದರು. ಒಳಗೆ ಬರುತ್ತಿದ್ದಂತೆಯೇ ಬ್ಯಾಂಕ್ ಸೈರನ್ ಮೊಳಗಿತ್ತು. ಅದರಿಂದ ಭಯಗೊಂಡು ಪರಾರಿ ಆಗಿದ್ದರು.
ಸೋಮವಾರ ಬೆಳಿಗ್ಗೆ 9.30ರ ಸುಮಾರಿಗೆ ಬ್ಯಾಂಕ್ ಉದ್ಯೋಗಿಗಳು ಕೆಲಸಕ್ಕೆ ಬಂದಾಗ ದರೋಡೆ ನಡೆಸಲು ಯತ್ನಿಸಿರುವುದು ಗೊತ್ತಾಗಿತ್ತು ಎಂದು ಪೊಲೀಸರು ಹೇಳಿದರು.
‘ಆರೋಪಿ ಹಸನ್ ಅಬ್ದುಲ್ ಸಾಬ್ ಅವರು ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಬ್ಯಾಂಕ್ ದರೋಡೆಗೆ ಯತ್ನಿಸಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.
‘ಶೇಷಾದ್ರಿಪುರ ಠಾಣಾ ವ್ಯಾಪ್ತಿಯ ಬ್ಯಾಂಕ್ ಹಾಗೂ ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಎಟಿಎಂ ದರೋಡೆಗೆ ಯತ್ನಿಸಿದ್ದ ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ತನಿಖೆಗೆ ಐದು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಘಟನೆ ನಡೆದ 24 ತಾಸಿನಲ್ಲಿಯೇ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಆರೋಪಿ ಈ ಹಿಂದೆ ಯಾವುದಾದರೂ ಕೃತ್ಯದಲ್ಲಿ ಭಾಗಿಯಾಗಿದ್ದರೆ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.