ADVERTISEMENT

ಬೆಂಗಳೂರು ಜನದನಿ | ಕುಂದು ಕೊರತೆ: ತಳ್ಳುವ ಗಾಡಿ ತೆರವುಗೊಳಿಸಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 3:08 IST
Last Updated 27 ಮಾರ್ಚ್ 2023, 3:08 IST
ಗಿರಿನಗರದ ಆವಲಹಳ್ಳಿ ಮುಖ್ಯರಸ್ತೆಯಲ್ಲಿ ತಳ್ಳುವ ಗಾಡಿ ನಿಲ್ಲಿಸಿರುವುದು ಮತ್ತು ಕಸ ಎಸೆದಿರುವುದು
ಗಿರಿನಗರದ ಆವಲಹಳ್ಳಿ ಮುಖ್ಯರಸ್ತೆಯಲ್ಲಿ ತಳ್ಳುವ ಗಾಡಿ ನಿಲ್ಲಿಸಿರುವುದು ಮತ್ತು ಕಸ ಎಸೆದಿರುವುದು   

‘ತಳ್ಳುವ ಗಾಡಿ ತೆರವುಗೊಳಿಸಿ’

ಗಿರಿನಗರದ ಆವಲಹಳ್ಳಿ ಮುಖ್ಯರಸ್ತೆಯಲ್ಲಿ ಹಬ್ಬ ಹರಿದಿನಗಳಲ್ಲಿ ಮಾತ್ರ ತಳ್ಳುವ ಗಾಡಿಗಳಲ್ಲಿ ವ್ಯಾಪಾರ ವಹಿವಾಟು ಮಾಡಲಾಗುತ್ತದೆ. ನಂತರ ಅವುಗಳನ್ನು ಮುಖ್ಯರಸ್ತೆಯ ಅಂಚಿನಲ್ಲಿ ಬಿಟ್ಟು ಹೋಗುವುದರಿಂದ ಇದರಲ್ಲಿ ಇಲಿ ಹೆಗ್ಗಣಗಳು ಸೇರಿಕೊಂಡು ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಕೊಡುತ್ತಿವೆ. ಕೆಲವು ಜನ ಇದರ ಅಕ್ಕಪಕ್ಕದಲ್ಲಿ ತ್ಯಾಜ್ಯವನ್ನು ತಂದು ಹಾಕುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಬಿಬಿಎಂಪಿ ಸಿಬ್ಬಂದಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಇಲ್ಲಿರುವ ತ್ಯಾಜ್ಯ ಮತ್ತು ತಳ್ಳುವ ಗಾಡಿಗಳನ್ನು ತೆರುವುಗೊಳಿಸಬೇಕು.

ದಯಾನಂದ, ಸ್ಥಳೀಯ ನಿವಾಸಿ

****

ADVERTISEMENT

‘ಕಸ ತೆರವುಗೊಳಿಸಿ’

ಕೆ.ಪಿ. ಅಗ್ರಹಾರ ಮತ್ತು ಬಿನ್ನಿ ಮಿಲ್ಸ್‌ ಮಧ್ಯೆ ಇರುವ ರೈಲ್ವೆ ಕ್ರಾಸಿಂಗ್ ಸಿಗ್ನಲ್ ಗೇಟ್ ಬಳಿ ಕಸ ಹಾಕಲಾಗಿದೆ. ಈ ಭಾಗವೆಲ್ಲ ಗಬ್ಬೆದ್ದು ನಾರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಆದರೆ, ಕೆಲವರು ಅಲ್ಲಿಯೇ ಕಸ ಹಾಕುತ್ತಿದ್ದಾರೆ. ರಸ್ತೆಯಲ್ಲೆಲ್ಲ ತ್ಯಾಜ್ಯ ಹರಡಿ, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ತ್ಯಾಜ್ಯವೆಲ್ಲ ಕೊಳೆತು ದುರ್ನಾತ ಬರುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು

ಸತೀಶ್‌, ಸ್ಥಳೀಯ ನಿವಾಸಿ

****

ಮಾಗಡಿ ಮುಖ್ಯರಸ್ತೆಯ ಅಂಜನ್‌ ಚಿತ್ರಮಂದಿರ ಸಮೀಪದ ಪಾದಚಾರಿ ಮಾರ್ಗವನ್ನು ಬಿಬಿಎಂಪಿ ಸಿಬ್ಬಂದಿ ದುರಸ್ತಿಗೊಳಿಸಿದರು.

‘ಪ್ರಜಾವಾಣಿ’ ಕುಂದು ಕೊರತೆ ವಿಭಾಗದಲ್ಲಿ ಮಾರ್ಚ್‌ 20ರಂದು ‘ಪಾದಚಾರಿ ಮಾರ್ಗ ದುರಸ್ತಿಗೊಳಿಸಿ’ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟವಾಗಿತ್ತು.

****

‘ರಸ್ತೆ ಮೇಲೆ ತ್ಯಾಜ್ಯ ನೀರು’

ತೇಜಸ್ವಿನಿ ನಗರದ ನೊಬೆಲ್‌ ರೆಸಿಡೆನ್ಸಿ ರಸ್ತೆಯ ಪಕ್ಕದಲ್ಲಿರುವ ಚರಂಡಿಗೆ ಕಲ್ಲು–ಮಣ್ಣು ಹಾಕಿದ್ದರಿಂದ ಚರಂಡಿ ಕಟ್ಟಿಕೊಂಡಿದೆ. ಇದರಿಂದ ತ್ಯಾಜ್ಯ ನೀರೆಲ್ಲಾ ರಸ್ತೆಯ ಮೇಲೆ ಹರಿಯುತ್ತಿದ್ದು, ಶಾಲಾ–ಕಾಲೇಜಿಗೆ ಹೋಗುವ ಮಕ್ಕಳು, ಮಹಿಳೆಯರು, ವೃದ್ಧರು ಸೇರಿ ಸಾರ್ವಜನಿಕರ ಸಂಚಾರಕ್ಕೆ ಅನನುಕೂಲವಾಗಿದೆ. ಬಿಡಬ್ಲ್ಯೂಎಸ್‌ಎಸ್‌ಬಿ ಮತ್ತು ಬಿಬಿಎಂಪಿ ಸಿಬ್ಬಂದಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಮ್ಮ ಬೆಂಗಳೂರು ಅಪ್ಲಿಕೇಶನ್‌ನಲ್ಲಿ ಅನೇಕ ಬಾರಿ ದೂರು ನೀಡಿದರೂ, ಯಾರು ಸ್ಪಂದಿಸುತ್ತಿಲ್ಲ.

ಬಸವರಾಜ್, ಸ್ಥಳೀಯ ನಿವಾಸಿ

****

ರಸ್ತೆ ಗುಂಡಿ ಮುಚ್ಚಿ

ಬಸವನಗುಡಿಯ ರಾಮಕೃಷ್ಣ ಆಶ್ರಮದ ವೃತ್ತದ ಬಳಿಯ ಮುಖ್ಯರಸ್ತೆಯಲ್ಲಿ ಗುಂಡಿ ಬಿದ್ದಿದೆ. ಇಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಇದುವರೆಗೂ ಬಿಬಿಎಂಪಿ ಸಿಬ್ಬಂದಿಗೆ ಈ ರಸ್ತೆಯಲ್ಲಿರುವ ಗುಂಡಿ ಕಂಡಿಲ್ಲ. ಸ್ಥಳೀಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ರಸ್ತೆ ಗುಂಡಿ ಮುಚ್ಚಿಸುವ ಕಾರ್ಯ ಕೈಗೊಳ್ಳಬೇಕು.

ಹರೀಶ್‌, ವಾಹನ ಸವಾರ

****

‘ಕೆಂಪೇಗೌಡ ರಸ್ತೆ: ನೀರು ಪೋಲು’

ಮೆಜೆಸ್ಟಿಕ್‌ನ ಕೆಂಪೇಗೌಡ ರಸ್ತೆ 1ನೇ ಅಡ್ಡರಸ್ತೆಯಲ್ಲಿ ಹತ್ತು ದಿನಗಳಿಂದ ಜೀವಜಲ ಪೋಲಾಗುತ್ತಿದೆ. ಅಮೂಲ್ಯ ಕುಡಿಯುವ ನೀರು ಪೋಲಾಗುತ್ತಿರುವ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ನಗರದಲ್ಲಿ ಈಗಾಗಲೇ ಜಲಕ್ಷಾಮದ ಮುನ್ಸೂಚನೆ ಕೇಳಿ ಬರುತ್ತಿದೆ. ಎಷ್ಟೋ ಬಡಾವಣೆಗಳಲ್ಲಿ ಒಂದು ಬಿಂದಿಗೆ ನೀರಿಗೋಸ್ಕರ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಲ ಮಂಡಳಿಯ ಅಧಿಕಾರಿಗಳ ನಿದ್ರಾವಸ್ಥೆ ಧೋರಣೆಯಿಂದಾಗಿ ಅನಗತ್ಯವಾಗಿ ಜೀವಜಲ ಮೋರಿ ಪಾಲು ಆಗುತ್ತಿದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವ ಮೂಲಕ ನೀರು ಪೋಲಾಗುತ್ತಿರುವುದನ್ನು ತಡೆಗಟ್ಟಬೇಕು.

ಶಿವಪ್ರಸಾದ್ ಎಸ್., ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.