ADVERTISEMENT

ಬೆಂಗಳೂರು ಜನದನಿ | ಕುಂದು ಕೊರತೆ: ಇ–ಶೌಚಾಲಯ ನಿರ್ವಹಣೆ ಕೊರತೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 0:00 IST
Last Updated 24 ಮಾರ್ಚ್ 2025, 0:00 IST
ದುಃಸ್ಥಿತಿಯಲ್ಲಿರುವ ಇ–ಶೌಚಾಲಯ
ದುಃಸ್ಥಿತಿಯಲ್ಲಿರುವ ಇ–ಶೌಚಾಲಯ   

‘ಇ–ಶೌಚಾಲಯ ನಿರ್ವಹಣೆ ಕೊರತೆ’

ವಿಶ್ವೇಶ್ವರಪುರದ ಕೆನರಾ ಬ್ಯಾಂಕ್‌ ಡಯಾಗ್ನಲ್ ರಸ್ತೆಯ ವಾರ್ಡ್‌ ಸಂಖ್ಯೆ 143ರಲ್ಲಿ ಇ–ಶೌಚಾಲಯದ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದ ಈ ಶೌಚಾಲಯ ಬಳಕೆ ಮಾಡದಂತಹ ಸ್ಥಿತಿಗೆ ತಲುಪಿದೆ. ಸಾರ್ವಜನಿಕರು ಶೌಚಾಲಯದ ಪಕ್ಕದಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಕೂಡಲೇ ಇ–ಶೌಚಾಲಯದ ಸ್ವಚ್ಛತೆಗೆ ಆದ್ಯತೆ ನೀಡಬೇಕು. 

-ಮುರಳೀಧರ, ವಿಶ್ವೇಶ್ವರಪುರ

ADVERTISEMENT

****

ಸಹಕಾರನಗರಕ್ಕೆ ಸಂಪರ್ಕಿಸುವ ರಸ್ತೆ ಅಗೆದಿರುವುದು

‘ಅಗೆದಿರುವ ರಸ್ತೆಯನ್ನು ಸರಿಪ‍ಡಿಸಿ’

ಸಹಕಾರನಗರದಿಂದ ಕೊಡಿಗೆಹಳ್ಳಿಗೆ ಸಂಪರ್ಕ ಕಲ್ಪಿಸುವ ಸಿ ಬ್ಲಾಕ್‌ 21–ಬಿ ಕ್ರಾಸ್‌ನ ಎರಡನೇ ಮುಖ್ಯ ರಸ್ತೆಯನ್ನು ಅಗೆದು ಹಾಕಲಾಗಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯ ಒಂದೇ ಭಾಗದಲ್ಲಿ ಮೂರು ಕಡೆಗೆ ಅಗೆದಿರುವುದರಿಂದ ಸಂಚಾರ ದಟ್ಟಣೆ ಆಗುತ್ತಿದೆ. ದ್ವಿಚಕ್ರ ವಾಹನ ಸವಾರರು ಇಲ್ಲಿ ಬಿದ್ದು ಕೈ ಕಾಲುಗಳನ್ನು ಮುರಿದುಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೊಳಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. 

-ಸಹಕಾರನಗರದ ನಿವಾಸಿಗಳು

****

ತ್ಯಾಗರಾಜನಗರದಲ್ಲಿ ಮಾರ್ಗಸೂಚಿ ಫಲಕ ಬಿದ್ದಿರುವುದು

‘ಧರೆಗೆ ಉರುಳಿದ ಮಾರ್ಗಸೂಚಿ ಫಲಕಗಳು’

ತ್ಯಾಗರಾಜನಗರ, ಟಾಟಾ ಸಿಲ್ಕ್‌ ಫಾರ್ಮ್‌ನ ಬಹುತೇಕ ಭಾಗದಲ್ಲಿರುವ ಮಾರ್ಗಸೂಚಿ ಫಲಕಗಳು ಧರೆಗೆ ಉರುಳಿ ಬಿದ್ದಿದ್ದು, ಇನ್ನೂ ಕೆಲವು ಕೆಳಗಡೆ ಬೀಳುವ ಹಂತಕ್ಕೆ ತಲುಪಿವೆ. ಮಾರ್ಗಸೂಚಿ ಫಲಕಗಳು ಇಲ್ಲದ ಕಾರಣ ಈ ಭಾಗಕ್ಕೆ ಬರುವ ಹೊಸಬರು ವಿಳಾಸ ಗೊತ್ತಾಗದೇ ಪರದಾಡುತ್ತಿದ್ದಾರೆ. ಧರೆಗೆ ಉರುಳಿದ ಮಾರ್ಗಸೂಚಿ ಫಲಕಗಳನ್ನು ಕೂಡಲೇ ಸರಿಪಡಿಸಬೇಕು. 

-ದೀಪಕ್ ಶಿರಾಲಿ, ತ್ಯಾಗರಾಜನಗರ

****

ನಾಗರಬಾವಿಯ ವೃಷಭಾವತಿಗೆ ನಿರ್ಮಿಸುತ್ತಿರುವ ಕಾಲುಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿರುವುದು

‘ಕಾಲುಸೇತುವೆ ಕಾಮಗಾರಿ ಪೂರ್ಣಗೊಳಿಸಿ’

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ಮಧ್ಯದಲ್ಲಿರುವ ನಾಗರಬಾವಿಯ ವೃಷಭಾವತಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಕಾಲು ಸೇತುವೆ ಕಾಮಗಾರಿ ಸ್ಥಗಿತಗೊಂಡಿದೆ. ಕೆಲ ತಿಂಗಳ ಹಿಂದೆಯೇ ಕಾಮಗಾರಿ ಪ್ರಾರಂಭಿಸಲಾಗಿತ್ತು. ಬಿಬಿಎಂಪಿ ಕೂಡಲೇ ಈ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಬೇಕು.

-ಎಚ್. ತುಕಾರಾಂ, ಬಾಲಗಂಗಾಧರ ನಗರ

****

ಬಿವಿಕೆ ಅಯ್ಯಂಗಾರ್‌ ರಸ್ತೆಯಲ್ಲಿ ಹರಿಯುತ್ತಿರುವ ಚರಂಡಿ ನೀರು

‘ರಸ್ತೆಯಲ್ಲಿ ಹರಿಯುವ ಚರಂಡಿ ನೀರು’

ಚಿಕ್ಕಪೇಟೆಯ ಬಿವಿಕೆ ಅಯ್ಯಂಗಾರ್‌ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿದ್ದು, ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಇದರಿಂದ ವಾಹನ ಸಂಚಾರಕ್ಕೂ ಸಮಸ್ಯೆ ಆಗಿದೆ. ಮೂರು ವರ್ಷಗಳಿಂದ ತ್ಯಾಜ್ಯ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಆದರೆ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸವಾರರು ಮೂಗು ಮುಚ್ಚಿಕೊಂಡು ಹೋಗಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಗಮನ ಹರಿಸುತ್ತಿಲ್ಲ.

-ಶಿವಪ್ರಸಾದ್, ಚಿಕ್ಕಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.