ADVERTISEMENT

ಅವೆನ್ಯೂ ರಸ್ತೆ: ಜನರ ಸಂಚಾರಕ್ಕೆ ಸಂಚಕಾರ

ಕುಂಟುತ್ತಾ ಸಾಗಿದೆ ‘ಸ್ಮಾರ್ಟ್‌ಸಿಟಿ’ ಕಾಮಗಾರಿ l ರಸ್ತೆ ದಾಟುವಾಗ ಜಾರಿ ಬೀಳುತ್ತಿರುವ ಜನ

ಮನೋಹರ್ ಎಂ.
Published 6 ಏಪ್ರಿಲ್ 2021, 22:37 IST
Last Updated 6 ಏಪ್ರಿಲ್ 2021, 22:37 IST
ರಸ್ತೆ ದಾಟುವಾಗ ಆಯತಪ್ಪಿ ಬಿದ್ದ ಬೈಕ್‌ ಸವಾರನನ್ನು ರಕ್ಷಿಸಿದ ಸಾರ್ವಜನಿಕರು  –ಪ್ರಜಾವಾಣಿ ಚಿತ್ರ
ರಸ್ತೆ ದಾಟುವಾಗ ಆಯತಪ್ಪಿ ಬಿದ್ದ ಬೈಕ್‌ ಸವಾರನನ್ನು ರಕ್ಷಿಸಿದ ಸಾರ್ವಜನಿಕರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಅವೆನ್ಯೂ ರಸ್ತೆಯಲ್ಲಿ ಕುಂಟುತ್ತಾ ಸಾಗುತ್ತಿರುವ ‘ಸ್ಮಾರ್ಟ್‌ ಸಿಟಿ’ ಹಾಗೂ ಟೆಂಡರ್‌ಶ್ಯೂರ್ ಕಾಮಗಾರಿಗಳಿಂದ ಜನರ ಸಂಚಾರಕ್ಕೆ ಸಂಚಕಾರ ಎದುರಾಗಿದೆ. ಅಗೆದು ಹಾಗೆಯೇ ಬಿಟ್ಟಿರುವ ಈ ರಸ್ತೆಯಲ್ಲಿ, ದಾರಿ ತೋಚದ ಪಾದಚಾರಿಗಳು ಹಳ್ಳ ಹಾಗೂ ಗುಂಡಿಗಳನ್ನು ದಾಟುತ್ತಾ ಮುಂದಡಿ ಇಡಬೇಕಾಗಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು, ಎದ್ದು ಸಾಗಬೇಕಾದ ಸ್ಥಿತಿ ಇದೆ.

ಅವೆನ್ಯೂ ರಸ್ತೆಯ ಕಾಮತ್‌ ಹೋಟೆಲ್‌ನಿಂದ ಶುರುವಾಗಿ ಚಿಕ್ಕಪೇಟೆಯತ್ತ ಸಾಗುವ ಮಾರ್ಗದಲ್ಲಿ ಅಂದಾಜು 300 ಮೀಟರ್‌ವರೆಗೆ ‘ಸ್ಮಾರ್ಟ್‌ಸಿಟಿ’ ಕಾಮಗಾರಿಗಳು ಪ್ರಗತಿಯಲ್ಲಿವೆ. ಹೆಚ್ಚು ಜನ ಸಂಚಾರವಿರುವ ಈ ರಸ್ತೆಯಲ್ಲಿ ಕಾಮಗಾರಿಯ ಆಮೆವೇಗ ಜನರನ್ನು ಹೈರಾಣಾಗಿಸಿದೆ.

ಕೆ.ಆರ್‌.ಮಾರುಕಟ್ಟೆ ವೃತ್ತದಿಂದ ಮೈಸೂರು ಬ್ಯಾಂಕ್ ವೃತ್ತ ಸಂಪರ್ಕಿಸುವ ಈ ರಸ್ತೆಯಲ್ಲಿ ಸದಾ ಜನಸಂದಣಿ ಇರುತ್ತದೆ. ಇಕ್ಕಟ್ಟಾದ ರಸ್ತೆಯಲ್ಲಿ ಏಕಮುಖ ವಾಹನ ಸಂಚಾರವಿದ್ದರೂ ಹಲವು ಅಡ್ಡರಸ್ತೆಗಳಿರುವುದರಿಂದ ವಾಹನ ದಟ್ಟಣೆಯೂ ಅಧಿಕ.

ADVERTISEMENT

ವ್ಯಾಪಾರ ಹಾಗೂ ಖರೀದಿ ಉದ್ದೇಶ ಗಳಿಗೆ ಈ ರಸ್ತೆಗೆ ಬರುವ ವಾಹನಗಳಿಗೆ ಜಾಗವಿಲ್ಲ. ಕಾಮಗಾರಿಗಾಗಿ ರಸ್ತೆಯಲ್ಲಿ ಆಳೆತ್ತರದ ಗುಂಡಿಗಳನ್ನು ಅಗೆದಿರುವುದರಿಂದ ವಾಹನದಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಹಳ್ಳಗಳನ್ನು ದಾಟುವಾಗ ಹಲವರು ತಮ್ಮ ವಾಹನದ ಸಮೇತ ಉರುಳುವ ಘಟನೆಗಳು ಪ್ರತಿನಿತ್ಯ ಸಂಭವಿಸುತ್ತಿವೆ.

‘ಸಾರ್ವಜನಿಕರ ಅನುಕೂಲಕ್ಕೆ ನಡೆಯುತ್ತಿರುವ ಕಾಮಗಾರಿಗಳು ಸಾರ್ವಜನಿಕರಿಗೇ ಕಿರಿಕಿರಿ ಉಂಟು ಮಾಡುತ್ತಿವೆ. ಈ
ಚಿಕ್ಕ ರಸ್ತೆಯಲ್ಲಿ ಇಂತಹ ದೊಡ್ಡ ಕಾಮಗಾರಿಗಳನ್ನು ಆರಂಭಿಸಿದ್ದಾರೆ. ಆದರೆ, ಇಲ್ಲಿಗೆ ಬರುವ ಜನರ ಪ್ರಾಣಕ್ಕೆ
ರಕ್ಷಣೆ ನೀಡುವ ಸುರಕ್ಷತಾ ಕ್ರಮಗಳನ್ನು ಇಲ್ಲಿ ಕೈಗೊಂಡಿಲ್ಲ’ ಎನ್ನುವುದು ಅವೆನ್ಯೂ ರಸ್ತೆಯಲ್ಲಿರುವ ವ್ಯಾಪಾರಿಗಳ ಆರೋಪ.

‘ಔಷಧ ಖರೀದಿಗೆ ಈ ರಸ್ತೆಯಲ್ಲಿರುವ ಮೆಡಿಕಲ್ ಅಂಗಡಿಗೆ ಬರುತ್ತೇನೆ. ಈಗ ಅಂಗಡಿಗೆ ಹೋಗಲು ಜಾಗವಿಲ್ಲ. ವಯಸ್ಸಾದವರು ಗುಂಡಿಗಳನ್ನು ದಾಟಿ ಸಾಗುವುದಾದರೂ ಹೇಗೆ. ವೃದ್ಧರ ಜೀವಕ್ಕೆ ಅಪಾಯವಾದರೆ ಹೊಣೆ ಯಾರು’ ಎಂದು ಸ್ಥಳೀಯ ನಿವಾಸಿ ಗೋಪಾಲ್ ಪ್ರಶ್ನಿಸಿದರು.

‘ಅನಿವಾರ್ಯ ಇರುವ ವಸ್ತುಗಳ ಖರೀದಿಗೆ ಜನ ಇಲ್ಲಿಗೆ ಬಂದೇ ಬರು ತ್ತಾರೆ. ಅವರ ಸಂಚಾರಕ್ಕೆ ಯಾವುದೇ ಅನುಕೂಲ ಮಾಡಿಲ್ಲ. ವಾಹನಗಳು ಎರಡೂ ಕಡೆಯಿಂದ ಬಂದು ದಟ್ಟಣೆ ಉಂಟಾಗುತ್ತಿದೆ. ರಸ್ತೆ ಮಧ್ಯದಲ್ಲಿ ಗುಂಡಿಗಳು ಹಾಗೂ ಕಬ್ಬಿಣದ ಸಲಕರಣೆಗಳು ಅನಾಹುತಕ್ಕೆ ಆಹ್ವಾನ ನೀಡುವಂತಿವೆ. ಇಲ್ಲಿ ಯಾವುದೇ ರಕ್ಷಣಾ ಕ್ರಮಗಳನ್ನು ತೆಗೆದು ಕೊಂಡಿಲ್ಲ’ ಎಂದು ವಿವರಿಸಿದರು.

ರಸ್ತೆ ದಾಟಲು ಪರದಾಡುತ್ತಿರುವ ಬೈಕ್ ಸವಾರ ಹಾಗೂ ಜನರು –ಪ್ರಜಾವಾಣಿ ಚಿತ್ರ

ವ್ಯಾಪಾರಕ್ಕೂ ಹೊಡೆತ: ‘ಇದು ವ್ಯಾಪಾರಕ್ಕೆ ಹೆಸರುವಾಸಿಯಾದ ರಸ್ತೆ. ದಿನಕ್ಕೆ ಲಕ್ಷಾಂತರ ಗ್ರಾಹಕರು ಇಲ್ಲಿಗೆ ಬಂದು ಹೋಗುತ್ತಾರೆ. ಕಾಮಗಾರಿಗೆ ನಮ್ಮ ವಿರೋಧವಿಲ್ಲ. ಆದರೆ, ಕಾಮಗಾರಿ ಹೆಸರಿನಲ್ಲಿ ಜನರಿಗೆ ತೊಂದರೆಯಾಗಬಾರದು. ಕಾಮಗಾರಿ ನಡೆಯುವಾಗ ನಮ್ಮ ಹೋಟೆಲ್‌ಗೂ ಹಾನಿಯಾಗಿದೆ’ ಎಂದು ಇಲ್ಲಿನ ಕಾಮತ್ ಹೋಟೆಲ್‌ನ ಮಾಲೀಕ ವೀರೇಂದ್ರ ಕಾಮತ್ ದೂರಿದರು.

‘ಕೊರೊನಾದಿಂದ ಈಗಾಗಲೇ ಹೋಟೆಲ್ ಉದ್ಯಮ ನೆಲಕಚ್ಚಿದೆ. ಈಗ ತಾನೇ ಹೋಟೆಲ್‌ಗೆ ನಿತ್ಯ ಸ್ವಲ್ಪ ಮಟ್ಟಿಗೆ ಗ್ರಾಹಕರು ಬರಲಾರಂಭಿಸಿದ್ದರು. ಕಾಮಗಾರಿ ನಡೆಯುತ್ತಿರುವುದರಿಂದ ಗ್ರಾಹಕರ ಸಂಖ್ಯೆ ಮತ್ತೆ ಕಡಿಮೆಯಾಗಿದೆ’ ಎಂದು ತಿಳಿಸಿದರು.

‘ವೃದ್ಧರು ಜಾರುತ್ತಾರೆ, ಬೈಕ್‌ ಸವಾರರು ಬೀಳುತ್ತಾರೆ’
‘ಅಂಗಡಿಗಳಿಗೆ ಗ್ರಾಹಕರು ತೆರಳಲು ಜಾಗವಿಲ್ಲದಂತೆ ಗುಂಡಿಗಳನ್ನು ತೋಡಿದ್ದಾರೆ. ಒಳರಸ್ತೆಗಳಲ್ಲಿ ವಾಸವಿರುವ ನಿವಾಸಿಗಳ ಸಂಚಾರಕ್ಕೆ ಕಷ್ಟವಾಗಿದೆ. ಅಂಗಡಿಗಳಿಗೆ ಬರುವ ವೃದ್ಧರು ಗುಂಡಿ ದಾಟುವ ಸಮಯದಲ್ಲಿ ಕಾಲು ಜಾರಿ ಬೀಳುತ್ತಾರೆ. ಬೈಕ್‌ ಸವಾರರು ಸ್ಕಿಡ್‌ ಆಗಿ ವಾಹನದೊಂದಿಗೆ ಉರುಳುತ್ತಾರೆ. ಇಂತಹ ಘಟನೆಗಳು ಪ್ರತಿನಿತ್ಯ ನಡೆಯುತ್ತಿವೆ’ ಎಂದು ಅವೆನ್ಯೂ ರಸ್ತೆಯ ಶಾಂತಿ ಮೆಡಿಕಲ್ಸ್‌ನ ವಿವೇಕ್ ವಿವರಿಸಿದರು.

‘ರಸ್ತೆಯ ಎರಡೂ ಬದಿ ವಿವಿಧ ವ್ಯಾಪಾರಿ ಮಳಿಗೆಗಳಿವೆ.ಕಾಮಗಾರಿಗಳು ಸ್ವಾಗತಾರ್ಹ. ಅವುಗಳಿಗೆ ನೀಡುವ ಆದ್ಯತೆಯನ್ನು ಸಾರ್ವಜನಿಕರ ಸುರಕ್ಷತೆಗೂ ಕೊಡಬೇಕು. ಸ್ಮಾರ್ಟ್‌ ಸಿಟಿ ಯೋಜನೆಯು ಜನರಿಗೆ ಭದ್ರತೆ ನೀಡುವಂತಹ ಸ್ಮಾರ್ಟ್‌ ಕ್ರಮಗಳನ್ನು ಅನುಸರಿಸಿಲ್ಲ’ ಎಂದು ಬೇಸರ ವ್ಯಕ್ತ‍ಪಡಿಸಿದರು.

ಆರು ತಿಂಗಳಲ್ಲಿ ಕಾಮಗಾರಿ ಪೂರ್ಣ: ರಾಜೇಂದ್ರ ಚೋಳನ್
‘ಅವೆನ್ಯೂ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಮೊದಲ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ. ರಸ್ತೆಯ ಒಂದು ಬದಿಯ ಕೆಲಸ ಪೂರ್ಣಗೊಂಡಿದೆ. ಮುಂದಿನ ಆರು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ’ ಎಂದು ಬೆಂಗಳೂರು ‘ಸ್ಮಾರ್ಟ್‌ಸಿಟಿ’ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅವೆನ್ಯೂ ರಸ್ತೆಯ ವ್ಯಾಪಾರಿಗಳ ಜೊತೆಗೆ ಚರ್ಚಿಸಿದ ಬಳಿಕವೇ ಅವರ ಸಹಕಾರ ಪಡೆದು, ಕಾಮಗಾರಿ ಆರಂಭಿಸಲಾಗಿದೆ. ಪಾಲಿಕೆ, ಜಲಮಂಡಳಿ, ಬೆಸ್ಕಾಂಗಳ ಜಂಟಿ ಆಶ್ರಯದಲ್ಲಿ ಒಳಚರಂಡಿ, ಕೊಳಚೆ ನೀರು ಮಾರ್ಗ, ಒಎಫ್‌ಸಿ ಕೇಬಲ್‌ ಅಳವಡಿಕೆ ಕಾಮಗಾರಿಗಳು ನಡೆಯುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕೆಲಸಗಳು ಮುಂದುವರಿದಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.