ADVERTISEMENT

ಪಿಒಪಿ ಗಣೇಶ ನಿಯಂತ್ರಣಕ್ಕೆ ಕ್ರಮ: ಬಿಬಿಎಂಪಿ ಮುಖ್ಯ ಆಯುಕ್ತ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 20:07 IST
Last Updated 6 ಆಗಸ್ಟ್ 2022, 20:07 IST
   

ಬೆಂಗಳೂರು: ‘ವಾರ್ಡ್‌ಗೊಂದು ಗಣೇಶ ವಿಷಯಕ್ಕೆ ಸಂಬಂಧಿಸಿದ ಈಗಲೇ ಏನೂ ನಿರ್ಧಾರ ತೆಗೆದುಕೊಂಡಿಲ್ಲ. ಸರ್ಕಾರ ನೀಡುವ ಆದೇಶವನ್ನು ಪಾಲಿಸಲಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ವರ್ಷ ರೂಪಿಸಿರುವ ನಿಯಮಗಳನ್ನು ಪರಿಶೀಲಿಸುತ್ತೇವೆ. ರಾಜ್ಯಮಟ್ಟದಲ್ಲಿ ನಡೆಯುವ ಸಭೆಯಲ್ಲಿ ಸರ್ಕಾರ ನೀಡುವ ನಿರ್ದೇಶನಗಳೇ ಅಂತಿಮ. ಅದರ ಅನುಸಾರ ಪಾಲಿಕೆ ಯೋಜನೆಗಳನ್ನು ರೂಪಿಸಿಕೊಂಡು ಕ್ರಮ ತೆಗೆದುಕೊಳ್ಳಲಾಗುತ್ತದೆ. ಈಗ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ’ ಎಂದು ಸುದ್ದಿಗಾರರಿಗೆ ಶನಿವಾರ ವಿವರ ನೀಡಿದರು.

ಪಿಒಪಿ ಮೂರ್ತಿಗಳನ್ನು ತಯಾರಿಸಬಾರದು, ಮಾರಾಟ ಮಾಡಬಾರದು ಎಂಬ ನಿಯಮ ಇದೆ. ಅದನ್ನು ಹೇಗೆ ನಿಯಂತ್ರಿಸಬೇಕು ಹಾಗೂ ಕ್ರಮ ಕೈಗೊಳ್ಳಬೇಕು ಎಂಬುದನ್ನು ಪ್ರತಿವರ್ಷದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸಲಾಗುತ್ತದೆ ಎಂದು ಹೇಳಿದರು.

ADVERTISEMENT

ಮಾಲಿನ್ಯ ಮಂಡಳಿಯೂ ಪಿಒಪಿ ಮೂರ್ತಿಗಳನ್ನು ಪೂಜಿಸದಂತೆ ಜನರಿಗೆ ಅರಿವು ಮೂಡಿಸುತ್ತದೆ. ಅದರಿಂದಾಗುವ ಹಾನಿಯ ಬಗ್ಗೆ ಪ್ರಚಾರವನ್ನೂ ಮಾಡುತ್ತದೆ. ಅಲ್ಲದೆ, ಸ್ಥಳೀಯವಾಗಿ ಹೇಗೆ ವಿಸರ್ಜನೆ ಮಾಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸುತ್ತದೆ. ಜನರು ಪಿಒಪಿ ಮೂರ್ತಿ ಹಾಗೂ ಹಾನಿಕಾರಕ
ಬಣ್ಣಗಳ ಮೂರ್ತಿಗಳನ್ನು ಖರೀದಿಸಬಾರದು ಎಂದು ಮನವಿ ಮಾಡಿದರು.

‘ಕೆ.ಆರ್‌.ಮಾರುಕಟ್ಟೆಯಲ್ಲಿ ಬಯೊಗ್ಯಾಸ್‌ ಘಟಕ, ಶೌಚಾಲಯ ಇದೆ. ಅಲ್ಲಿ ಸಾಕಷ್ಟು ಸಮಸ್ಯೆ ಇದ್ದು, ಅದನ್ನು ಸರಿಪಡಿಸಲಾಗುತ್ತದೆ. ಘನತ್ಯಾಜ್ಯ ನಿರ್ವಹಣೆ ಬಗ್ಗೆ ಅಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಮಾರುಕಟ್ಟೆ ಕಟ್ಟಡದಲ್ಲಿ ಬಿರುಕು ಇಲ್ಲ. ಸ್ಮಾರ್ಟ್‌ ಸಿಟಿಯಿಂದ ದುರಸ್ತಿ ಮಾಡಲಾಗುತ್ತಿದೆ. ಕೆಲವು ಕಡೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಥಳೀಯರವಿರೋಧ ಇದೆ. ಈ ಬಗ್ಗೆ ಮಾತುಕತೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.