ADVERTISEMENT

‘ಬಿ’ ಖಾತಾ ಸ್ವತ್ತು ತೆರಿಗೆ ಇಳಿಕೆ ಮಸೂದೆಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 22:30 IST
Last Updated 22 ಫೆಬ್ರುವರಿ 2023, 22:30 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂದಾಯ ನಿವೇಶನಗಳು ಮತ್ತು ಅನಧಿಕೃತ ಬಡಾವಣೆಗಳಲ್ಲಿನ ಕಟ್ಟಡಗಳಿಗೆ (‘ಬಿ’ ಖಾತಾ ಸ್ವತ್ತುಗಳು) ವಿಧಿಸಲಾಗುತ್ತಿದ್ದ ದುಪ್ಪಟ್ಟು ತೆರಿಗೆಯನ್ನು ಹಿಂಪಡೆಯಲು ಮತ್ತು ‘ಎ’ ಖಾತಾ ಸ್ವತ್ತುಗಳಿಗೆ ಸಮಾನವಾಗಿ ತೆರಿಗೆಯನ್ನು ಸಂಗ್ರಹಿಸಲು ಅವಕಾಶ ನೀಡುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ಮಸೂದೆಗೆ ವಿಧಾನಸಭೆ ಬುಧವಾರ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಅವರ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಸೂದೆಯನ್ನು ಮಂಡಿಸಿದರು. ಅಲ್ಲದೇ, ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಗೆ ಸ್ವತ್ತು ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವ ಅಂಶವನ್ನೂ ಮಸೂದೆಯಲ್ಲಿ ಸೇರಿಸಲಾಗಿದೆ.

ಈ ಹಿಂದೆ ಕಾನೂನುಬಾಹಿರವಾಗಿ ನಿರ್ಮಿಸಿದ ಕಟ್ಟಡವನ್ನು ಹೊರತುಪಡಿಸಿ, ಕಟ್ಟಡ ಉಪವಿಧಿಗಳು ಉಪಬಂಧಗಳನ್ನು ಉಲ್ಲಂಘಿಸಿ ಕಟ್ಟಿರುವ ಅಥವಾ ಅನಧಿಕೃತ ಬಡಾವಣೆ ಅಥವಾ ಕಂದಾಯ ಭೂಮಿಯಲ್ಲಿ ನಿರ್ಮಿಸಿರುವ ಕಟ್ಟಡವು ಸೇರಿದಂತೆ ಪ್ರತಿಯೊಂದು ಕಟ್ಟಡಕ್ಕೆ, ಖಾಲಿ ಭೂಮಿಗೆ ಅಥವಾ ಅವೆರಡನ್ನೂ ಒಳಗೊಂಡು ಅಥವಾ ಅಧಿಭೋಗ ಪ್ರಮಾಣ ಪತ್ರ ಅಥವಾ ಕಟ್ಟಡ ನಿರ್ಮಾಣ ಮುಕ್ತಾಯ ಪ್ರಮಾಣಪತ್ರವನ್ನು ನೀಡದೇ ವಾಸಕ್ಕೆ ಬಳಸುತ್ತಿದ್ದ ಕಟ್ಟಡ ಗಳಿಗೆ ಎರಡು ಪಟ್ಟು ಸ್ವತ್ತು ತೆರಿಗೆ ವಿಧಿಸಲಾಗುತ್ತಿತ್ತು.

ADVERTISEMENT

ಇನ್ನು ಮುಂದೆ ಎ ಖಾತಾ ಸ್ವತ್ತುಗಳು ಮತ್ತು ಬಿ ಖಾತಾ ಸ್ವತ್ತುಗಳ ಸ್ವತ್ತು ತೆರಿಗೆ ಏಕ ಪ್ರಕಾರವಾಗಿರಲಿವೆ ಎಂದು ಮಾಧುಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.