ADVERTISEMENT

ಬೆಂಗಳೂರು | ‘ಸುರಂಗ ರಸ್ತೆ’: ಸಾರ್ವಜನಿಕರೊಂದಿಗೆ ಸಮಾಲೋಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 15:28 IST
Last Updated 6 ಮಾರ್ಚ್ 2025, 15:28 IST
<div class="paragraphs"><p>ಬೆಂಗಳೂರು</p></div>

ಬೆಂಗಳೂರು

   

ಬೆಂಗಳೂರು: ‘ಬಿಬಿಎಂಪಿ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ‘ಸುರಂಗ ರಸ್ತೆ’ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಅನ್ನು ನಾಗರಿಕರ ಮುಂದಿಟ್ಟು, ಸಮಾಲೋಚನೆ ನಡೆಸಬೇಕು’ ಎಂದು ಬೆಂಗಳೂರು ನಾಗರಿಕರ ವೇದಿಕೆ ಆಗ್ರಹಿಸಿದೆ.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ವೇದಿಕೆಯವರು, ‘ಕೇಂದ್ರ ಹಣಕಾಸು ಸಚಿವರಿಗೆ ಬರೆದಿರುವ ಪತ್ರದಲ್ಲಿ ಉಪಮುಖ್ಯಮಂತ್ರಿಯವರು ಕರಡು ಡಿಪಿಆರ್‌ ಅನ್ನು ನಾಗರಿಕರ ಮುಂದಿಟ್ಟು ಸಮಾಲೋಚನೆ ನಡೆಸಲಾಗುವುದು ಎಂದಿದ್ದಾರೆ. ಅಲ್ಲದೆ, ಇಂತಹ ದೊಡ್ಡ ಯೋಜನೆಯನ್ನು ರಾಜ್ಯ ಸರ್ಕಾರ ಅಥವಾ ಬಿಬಿಎಂಪಿ ಯೋಜಿಸುವಂತಿಲ್ಲ. ಸಂವಿಧನದ 74ನೇ ತಿದ್ದುಪಡಿ ಪ್ರಕಾರ, ಯೋಜನಾ ಪ್ರಾಧಿಕಾರದಿಂದ ಯೋಜನೆಯ ರೂಪುರೇಷೆ ನಿರ್ಧರಿಸಬೇಕಿದೆ’ ಎಂದಿದ್ದಾರೆ.

ADVERTISEMENT

‘ಅಂತಿಮ ಕಾರ್ಯಸಾಧ್ಯತಾ ವರದಿ ಮತ್ತು ಅಂತಿಮ ಡಿಪಿಆರ್‌ ಅನ್ನು ಬಿಬಿಎಂಪಿ ಪರಿಗಣಿಸುವ ಮುನ್ನ, ಇವೆಲ್ಲ ಸಾರ್ವಜನಿಕವಾಗಿ 15 ದಿನಕ್ಕೂ ಮೊದಲೇ ಲಭ್ಯವಾಗುವಂತೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು ನಾಗರಿಕರ ವೇದಿಕೆಯಿಂದ ಬರೆಯಲಾಗಿರುವ ಪತ್ರಕ್ಕೆ, ಸಿಟಿಜನ್ಸ್‌ ಆಕ್ಷನ್‌ ಫೋರಂ, ಝಟಕಾ.ಒಆರ್‌ಜಿ, ಸಿವಿಕ್‌–ಬೆಂಗಳೂರು, ನಮ್ಮ ಬೆಂಗಳೂರು ಪ್ರತಿಷ್ಠಾನ, ಬೆಂಗಳೂರು ನವ ನಿರ್ಮಾಣ ಪಾರ್ಟಿ, ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌, ಐ ಚೇಂಜ್‌ ಇಂದಿರಾನಗರ, ಬಿಯೊಮಿ ಎನ್ವಿರಾನ್‌ಮೆಂಟಲ್‌ ಟ್ರಸ್ಟ್‌, ಬೆಂಗಳೂರು ಎನ್ವಿರಾನ್‌ಮೆಂಟ್‌ ಟ್ರಸ್ಟ್, ಬೆಂಗಳೂರು ಅಪಾರ್ಟ್‌ಮೆಂಟ್ಸ್‌ ಫೆಡರೇಷನ್‌ನ ಪ್ರತಿನಿಧಿಗಳು ಸಹಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.