ADVERTISEMENT

ಬೆಂಗಳೂರು | ಹೊತ್ತಿ ಉರಿದ ಎಲೆಕ್ಟ್ರಿಕ್‌ ಬಸ್‌: ಪ್ರಯಾಣಿಕರು ಪಾರು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 15:53 IST
Last Updated 6 ಆಗಸ್ಟ್ 2024, 15:53 IST
ಹೊತ್ತಿ ಉರಿದ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್‌. 
ಹೊತ್ತಿ ಉರಿದ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್‌.    

ಬೆಂಗಳೂರು: ನಗರದ ಟಿನ್‌ ಫ್ಯಾಕ್ಟರಿಯಿಂದ ಗೊರಗುಂಟೆಪಾಳ್ಯಕ್ಕೆ ತೆರಳುತ್ತಿದ್ದ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು, ಬಸ್ ಬಹುತೇಕ ಸುಟ್ಟು ಹೋಗಿದೆ. 

ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಚಾಲಕ ಹಾಗೂ ನಿರ್ವಾಹಕರ ಮುನ್ನೆಚ್ಚರಿಕೆಯಿಂದ ಅಪಾಯ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಿಎಂಟಿಸಿ ಘಟಕ–9ರಲ್ಲಿ ಜೆಬಿಎಂ(ಎಲೆಕ್ಟ್ರಿಕ್ ವಾಹನಗಳ ಆಪರೇಟರ್) ಕಂಪನಿಯ ಎಲೆಕ್ಟ್ರಿಕ್‌ ಬಸ್‌ ಕಾರ್ಯಚರಿಸುತ್ತಿದೆ. ಸೋಮವಾರ ರಾತ್ರಿ 10.30ರ ಸುಮಾರಿಗೆ ಗೊರಗುಂಟೆಪಾಳ್ಯಕ್ಕೆ ಕೆಂಪಾಪುರ ಮಾರ್ಗವಾಗಿ ಬಸ್‌ ತೆರಳುತ್ತಿತ್ತು. ಅದೇ ವೇಳೆ ಜೋರು ಮಳೆ ಸುರಿಯುತ್ತಿತ್ತು. ಬಸ್ ದಿಢೀರ್ ಆಫ್‌ ಆದ ಕಾರಣಕ್ಕೆ ಮುಂದಕ್ಕೆ ಚಲಿಸಲು ಸಾಧ್ಯವಾಗಲಿಲ್ಲ.

ADVERTISEMENT

ಬಸ್‌ನ ಹಿಂಬದಿಯಲ್ಲಿ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣವೇ ಎಚ್ಚೆತ್ತ ಚಾಲಕ ದಶರಥ ಹಾಗೂ ನಿರ್ವಾಹಕ ನರಸಿಂಹ ರಾಜು ಅವರು ಎಲ್ಲ ಪ್ರಯಾಣಿಕರನ್ನು ಬಸ್‌ನಿಂದ ಕೆಳಕ್ಕೆ ಇಳಿಸಿ ಬೇರೊಂದು ಬಸ್‌ನಲ್ಲಿ ಕಳುಹಿಸಿಕೊಟ್ಟರು. ಅದಾದ ನಂತರ ಬೆಂಕಿ ವ್ಯಾಪಿಸಲು ಆರಂಭಿಸಿತು. ಸ್ಥಳಕ್ಕೆ ಬಂದ ಅಗ್ನಿಶಾಮಕದ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

‘ಸ್ಥಳಕ್ಕೆ ಜೆಬಿಎಂ ಎಲೆಕ್ಟ್ರಿಕ್ ವಾಹನದ ಉಸ್ತುವಾರಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ ಹೆಚ್ಚಿನ ಪರಿಶೀಲನೆಗೆ ಸುಟ್ಟು ಹೋದ ಬಸ್‌ ಅನ್ನು ಕೆಂಗೇರಿಗೆ ಕೊಂಡೊಯ್ಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ರಸ್ತೆಯಲ್ಲಿ ನೀರು ಸಂಗ್ರಹದಿಂದ ಅವಘಡ:
‘ಜೋರು ಮಳೆಯಿಂದ ಕೆಂಪಾಪುರದ ಬಳಿ ರಸ್ತೆಯಲ್ಲಿ ಸೋಮವಾರ ರಾತ್ರಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ಹಳ್ಳದಂತೆ ನೀರು ಹರಿಯುತ್ತಿತ್ತು. ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ನಲ್ಲಿ ನೀರು ತುಂಬಿದ ಕಾರಣಕ್ಕೆ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ನಿಖರ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತಿದೆ’ ಎಂದು ಬಿಎಂಟಿಸಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.