ADVERTISEMENT

ಬೆಂಗಳೂರು | ಬ್ರಿಗೇಡ್‌ ರಸ್ತೆ: ಜನಜಂಗುಳಿ ಜಾತ್ರೆ

ತಂಡೋಪತಂಡವಾಗಿ ಬಂದ ಯುವ ಸಮುದಾಯ:

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2024, 0:12 IST
Last Updated 26 ಡಿಸೆಂಬರ್ 2024, 0:12 IST
ಕ್ರಿಸ್‌ಮಸ್‌ ರಜಾದಿನವಾದ ಬುಧವಾರ ನಗರದ ಬ್ರಿಗೇಡ್‌ ರಸ್ತೆಯಲ್ಲಿ ಜನರು ಕಿಕ್ಕಿರಿದು ತುಂಬಿದ್ದ ದೃಶ್ಯ
ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.
ಕ್ರಿಸ್‌ಮಸ್‌ ರಜಾದಿನವಾದ ಬುಧವಾರ ನಗರದ ಬ್ರಿಗೇಡ್‌ ರಸ್ತೆಯಲ್ಲಿ ಜನರು ಕಿಕ್ಕಿರಿದು ತುಂಬಿದ್ದ ದೃಶ್ಯ ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.   

ಬೆಂಗಳೂರು: ಕ್ರಿಸ್‌ಮಸ್‌ ಹಬ್ಬದ ಸಂಭ್ರಮವನ್ನು ಚರ್ಚ್‌ ಸ್ಟ್ರೀಟ್‌, ಬ್ರಿಗೇಡ್‌ ರಸ್ತೆಗಳಲ್ಲಿ ಆಚರಿಸಲು ಯುವ ಸಮುದಾಯವು ‌ತಂಡೋಪತಂಡವಾಗಿ ಬಂದಿದ್ದರಿಂದ ಎಂ.ಜಿ. ರಸ್ತೆ ಸುತ್ತಮುತ್ತ ಬುಧವಾರ ಜನಜಂಗುಳಿಯ ಜಾತ್ರೆಯೇ ಉಂಟಾಗಿತ್ತು.

ಬೇರೆ ರಾಜ್ಯ, ಬೇರೆ ಜಿಲ್ಲೆಗಳಿಂದ ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿರುವ ಯುವಕ, ಯುವತಿಯರ ಸುತ್ತಾಟದ ನೆಚ್ಚಿನ ತಾಣಗಳಲ್ಲಿ ಬ್ರಿಗೇಡ್‌ ರಸ್ತೆ–ಚರ್ಚ್‌ಸ್ಟ್ರೀಟ್‌ ಒಂದಾಗಿದೆ. ಹಾಗಾಗಿ ವಾರಾಂತ್ಯದಲ್ಲಿ ಈ ರಸ್ತೆಗಳಲ್ಲಿ ಜನದಟ್ಟಣೆ ಹೆಚ್ಚಿರುತ್ತಿತ್ತು. ಬುಧವಾರ ರಜೆ ಆಗಿರುವುದರಿಂದ ಪ್ರವಾಹದಂತೆ ಬಂದಿರುವುದರಿಂದ ಮಂದಿ ಮಧ್ಯೆ ಅಂತರವೇ ಇಲ್ಲದಂತಾಗಿತ್ತು.

ಕೈ ಹಿಡಿದು ನಡೆಯುವ ಜೋಡಿಗಳು, ಹೇರ್‌ಬ್ಯಾಂಡ್‌, ಸಾಂಟಾಕ್ಲಾಸ್‌ ಟೋಪಿ ಧರಿಸಿಕೊಂಡವರು, ಇಂಥದ್ಯಾವುದೂ ಇಲ್ಲದೇ ಸುಮ್ಮನೆ ಇವನ್ನೆಲ್ಲ ನೋಡಿಕೊಂಡು ತಿರುಗಾಡಲು ಬಂದ ಹುಡುಗರು, ಇವರಿಗೆ ಉತ್ಸಾಹ ತುಂಬಲೆಂದೇ ಆಕರ್ಷಕವಾಗಿ ಮಾಡಲಾದ ವಿದ್ಯುತ್‌ ಅಲಂಕಾರಗಳು ಕ್ರಿಸ್‌ಮಸ್‌ನ ಸಡಗರಕ್ಕೆ ಸಾಕ್ಷಿ ಬರೆದವು. ಬಾರ್‌, ‍ಪಬ್, ಹೋಟೆಲ್‌, ಅಂಗಡಿಗಳಲ್ಲಿಯೂ ಹಬ್ಬದ ಪ್ರಯುಕ್ತ ಗ್ರಾಹಕರ ಸಂಖ್ಯೆ ಭಾರಿ ಹೆಚ್ಚಳವಾಗಿತ್ತು. ಬ್ರಿಗೇಡ್‌ ರಸ್ತೆಗೆ ಚರ್ಚ್‌ಸ್ಟ್ರೀಟ್‌ ಕೂಡುವ ಜಾಗದಲ್ಲಿ ಜನರು ಕಿಕ್ಕಿರಿದಿದ್ದರು. ಅನೇಕರು ಫೋಟೊ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ADVERTISEMENT

‘ತಿರುಗಾಡಲೆಂದೆ ಬಂದಿದ್ದೇವೆ’ ಎಂದು ವಿದ್ಯಾರ್ಥಿ, ಆಂಧ್ರಪ್ರದೇಶದ ವೆಂಕಟೇಶ್‌ ಸುತ್ತಾಟದ ಬಗ್ಗೆ ಪ್ರತಿಕ್ರಿಯಿಸಿದರೆ, ‘ಇಲ್ಲಿ ಎಲ್ಲ ವಸ್ತುಗಳ ಬೆಲೆ ಜಾಸ್ತಿ ನಾವು ಯಾವುದನ್ನೂ ಖರೀದಿಸುವುದಿಲ್ಲ. ಎಲ್ಲ ನೋಡಿಕೊಂಡು ಖುಷಿಪಡೋಣ ಎಂದು ಬಂದೆವು’ ಎಂದು ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಉದ್ಯೋಗಿಗಳಾಗಿರುವ ಕೇರಳದ ಇಜಾಜ್, ಸಿನಾನ್‌, ಫಝಲ್‌ ತಿಳಿಸಿದರು.

ಭಾಷೆಗಳ ಸಮ್ಮಿಲನ: ಈ ರಸ್ತೆಗಳು ಭಾಷಾ ಸಮ್ಮಿಲನದ, ಸೌಹಾರ್ದದ ಕೇಂದ್ರಗಳಾದವು. ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್‌, ತುಳು, ಉರ್ದು ಸಹಿತ ನಾನಾ ಭಾಷೆಗಳ ಸೊಲ್ನುಡಿಗಳು ಒಟ್ಟೊಟ್ಟಿಗೆ ಕೇಳುವಂತಾಗಿತ್ತು.

ಬ್ರಿಗೇಡ್‌ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಜಾಗವೇ ಇಲ್ಲದಾದಾಗ ಪೊಲೀಸರು ಬಂದುಇ ಲಾಠಿ ಹಿಡಿದು ಜನರನ್ನು ಚದುರಿಸಿ ವಾಹನಗಳಿಗೆ ಜಾಗ ಮಾಡಿಕೊಟ್ಟರು.

ನಗರದ ಚರ್ಚ್ ಸ್ಟ್ರೀಟ್‌ನಲ್ಲಿಯೂ ಭಾರಿ ಜನದಟ್ಟಣೆ ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.
ಆಕರ್ಷಕ ಹೇರ್‌ಬ್ಯಾಂಡ್‌ ಧರಿಸಿ ಖುಷಿಪಡುತ್ತಿರುವ ಯುವಜನರು ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.
ಬ್ರಿಗೇಡ್‌ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದ ಕಾರಣ ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣ ತುಂಬಿ ತುಳುಕಿತ್ತು ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್ ಪಿ.ಎಸ್.

ದಟ್ಟಣೆ: ವಾಹನ ಸವಾರರ ಪರದಾಟ

ಕ್ರಿಸ್‌ಮಸ್‌ ರಜೆ ಹಾಗೂ ಹೊಸ ವರ್ಷಾಚರಣೆಗೆಂದು ಪ್ರವಾಸಿ ತಾಣ ಊರು ಸೇರಿದಂತೆ ಬೇರೆ ಬೇರೆ ಸ್ಥಳಗಳಿಗೆ ನಗರದ ನಿವಾಸಿಗಳು ಹೊರಟ್ಟಿದ್ದು ಬುಧವಾರ ಹಲವೆಡೆ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು. ಮೆಜೆಸ್ಟಿಕ್‌ ಸೇರಿದಂತೆ ಹಲವು ಸ್ಥಳಗಳಲ್ಲಿ ದಟ್ಟಣೆ ಇತ್ತು. ತುಮಕೂರು ರಸ್ತೆಯ ಯಶವಂತಪುರ ಗೊರಗುಂಟೆಪಾಳ್ಯ ಪೀಣ್ಯ ಜಾಲಹಳ್ಳಿ ಎಂಟನೇ ಮೈಲು ನಾಗಸಂದ್ರದ ಜಂಕ್ಷನ್‌ಗಳಲ್ಲಿ ಬುಧವಾರ ರಾತ್ರಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹಗಲು ವೇಳೆಯೂ ಇದೇ ರೀತಿಯ ದೃಶ್ಯ ಕಂಡುಬಂದಿತ್ತು. ನೆಲಮಂಗಲದ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಹೆಬ್ಬಾಳ ಮೇಲ್ಸೇತುವೆ ಕೆ.ಆರ್‌.ಪುರ ಹಾಗೂ ಮೈಸೂರು ರಸ್ತೆಯಲ್ಲೂ ದಟ್ಟಣೆಯಿಂದ ವಾಹನ ಚಾಲಕರು ಪರದಾಡಿದರು. ವಾಹನಗಳು ಮುಂದಕ್ಕೆ ಸಾಗಲು ಹಲವು ನಿಮಿಷಗಳೇ ಬೇಕಾಗಿತ್ತು. ನೈಸ್ ರಸ್ತೆ ಹಾಗೂ ಹೊರವರ್ತುಲ ರಸ್ತೆಗಳಲ್ಲೂ ಭಾರಿ ಸಂಖ್ಯೆಯ ವಾಹನಗಳು ನಗರದಿಂದ ವಿವಿಧ ಜಿಲ್ಲೆಗಳತ್ತ ಸಾಗಿದವು.ರೈಲು ಹಾಗೂ ಬಸ್‌ ನಿಲ್ದಾಣಗಳಲ್ಲೂ ದಟ್ಟಣೆ ಕಂಡುಬಂತು. ಯಶವಂತಪುರ ಕಂಟೋನ್ಮೆಂಟ್‌ ಬೈಯಪ್ಪನಹಳ್ಳಿ ಸಂಗೊಳ್ಳಿ ರಾಯಣ್ಣ ಕೆಂಗೇರಿ ಹಾಗೂ ಚಿಕ್ಕಬಾಣಾವರ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಇತ್ತು. ಕೆಂಪೇಗೌಡ ಬಸ್‌ ನಿಲ್ದಾಣದ ಎರಡೂ ಟರ್ಮಿನಲ್‌ಗಳಲ್ಲೂ ಭಾರಿ ಪ್ರಯಾಣಿಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.