
ಬೆಂಗಳೂರು: ತಾಯಿಗೆ ನಿಂದಿಸಿದ ಎಂಬ ಕಾರಣಕ್ಕೆ ತಮ್ಮನೇ ಚಾಕುವಿನಿಂದ ಇರಿದು ಅಣ್ಣನನ್ನು ಕೊಲೆ ಮಾಡಿರುವ ಘಟನೆ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯಾರಬ್ ನಗರದ ಶೆಟ್ಟಿ ಗಾರ್ಡನ್‌ನ ನಿವಾಸಿ ಮೊಹಮ್ಮದ್ ಮುಜಾಹಿದ್ (37) ಕೊಲೆಯಾದ ವ್ಯಕ್ತಿ. ಕೃತ್ಯವೆಸಗಿದ ತಮ್ಮ ಮೊಹಮ್ಮದ್ ಮುಸೀಬ್ (34) ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸೋಮವಾರ ಮುಂಜಾನೆ 6 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
‘ಸಹೋದರರಿಬ್ಬರು ಮದರಸಾದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಮೊಹಮ್ಮದ್ ಮುಜಾಹಿದ್ ಮದುವೆಯಾಗಿದ್ದು, ಪ್ರತ್ಯೇಕವಾಗಿ ವಾಸವಾಗಿದ್ದಾನೆ. ಈ ಮಧ್ಯೆ ಮುಜಾಹಿದ್ ನಿತ್ಯ ಒಂದಿಲ್ಲೊಂದು ಕಾರಣಕ್ಕೆ ತಮ್ಮನ ಮನೆಗೆ ಬಂದು ಜಗಳ ಮಾಡುತ್ತಿದ್ದ. ಜತೆಗೆ ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದ. ಬುಧವಾರ ಸಂಜೆ ತಂದೆ-ತಾಯಿಯನ್ನು ಮುಜಾಹಿದ್ ಮನೆಗೆ ಮುಸೀಬ್ ಕರೆ ತಂದಿದ್ದ. ಈ ವೇಳೆಯೂ ಮುಜಾಹಿದ್ ತಾಯಿಗೆ ನಿಂದಿಸಿದ್ದ. ಬಳಿಕ ಮನೆಯವರು ಸಮಾಧಾನ ಮಾಡಿದ್ದರು. ಮನೆ ಚಿಕ್ಕದಾಗಿದ್ದ ಕಾರಣ ಎಲ್ಲರೂ ಮಲಗಲು ಆಗಲಿಲ್ಲ. ಹಾಗಾಗಿ ಸಹೋದರರಿಬ್ಬರೂ ಮದರಸಾದಲ್ಲಿ ರಾತ್ರಿ ಮಲಗಲು ಬಂದಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.
‘ತಾಯಿಗೆ ನಿಂದಿಸಿದ್ದ ವಿಚಾರಕ್ಕೆ ಸಹೋದರರ ನಡುವೆ ವಾಗ್ವಾದ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಕೋಪಗೊಂಡ ಮುಸೀಬ್ ಚಾಕುವಿನಿಂದ ಮುಜಾಹಿದ್‌ನ ಕುತ್ತಿಗೆ ಹಾಗೂ ತಲೆಗೆ ಇರಿದು ಕೊಲೆ ಮಾಡಿದ್ದಾನೆ. ಈ ವೇಳೆ ಮುಸೀಬ್ ಕೈಗೂ ಗಾಯವಾಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆ ಆರೋಪಿಯನ್ನು ಬಂಧಿಸಲಾಗುವುದು’ ಎಂದು ಹೇಳಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.